ಜ.6ರಂದು ಜೀರ್ಣೋದ್ಧಾರಗೊಂಡ ಶ್ರೀ ರೇಣುಕಾ ಯಲ್ಲಮ್ಮ ದೇವಸ್ಥಾನದ ಉದ್ಘಾಟನೆ

ಕಲಬುರಗಿ:ಜ.2: ನಗರದ ಬ್ರಹ್ಮಪೂರ್ ಬಡಾವಣೆಯಲ್ಲಿನ ಗಂಗಾನಗರದಲ್ಲಿ ಜನವರಿ 6ರಂದು ಜೀರ್ಣೋದ್ಧಾರಗೊಂಡ ಶ್ರೀ ರೇಣುಕಾ ಯಲ್ಲಮ್ಮ ದೇವಸ್ಥಾನದ ಉದ್ಘಾಟನೆ ಹಾಗೂ ಕಳಸಾರೋಹಣ ಕಾರ್ಯಕ್ರಮ ಜರುಗಲಿದೆ ಎಂದು ದೇವಸ್ಥಾನದ ಸಲಹಾ ಸಮಿತಿಯ ಸದಸ್ಯ ಶಾಂತಪ್ಪ ಕೂಡಿ ಅವರು ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಿಮಿತ್ಯ ಜನವರಿ 6ರಿಂದ 10ರವರೆಗೆ ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳು ನೆರವೇರಲಿವೆ ಎಂದರು.
ಜನವರಿ 6ರಂದು ಬೆಳಿಗ್ಗೆ 11 ಗಂಟೆಗೆ ನಗರದ ಲಾಲ್‍ಗಿರಿ ಕ್ರಾಸ್‍ನಲ್ಲಿರುವ ಅಂಬಾಭವಾನಿ ದೇವಸ್ಥಾನದಿಂದ ಗಂಗಾನಗರದಲ್ಲಿರುವ ಶ್ರೀ ರೇಣುಕಾ ಯಲ್ಲಮ್ಮ ದೇವಸ್ಥಾನದವರೆಗೆ ಬಾಜಾ ಭಜಂತ್ರಿ, ಡೊಳ್ಳು ಕುಣಿತದೊಂದಿಗೆ ಭವ್ಯ ಮೆರವಣಿಗೆಯಾಗಲಿದೆ ಎಂದು ಅವರು ಹೇಳಿದರು.
ಶ್ರೀ ರೇಣುಕಾ ಯಲ್ಲಮ್ಮ ದೇವಿ ತರುಣ ಸಂಘ ಹಾಗೂ ಶ್ರೀ ನಿಜಶರಣ ಅಂಬಿಗರ ಚೌಡಯ್ಯ ಜೀರ್ಣೋದ್ದಾರ ಸಂಘದ ವತಿಯಿಂದ ದೇವಸ್ಥಾನವನ್ನು ಸುಂದರವಾಗಿ ಜೀರ್ಣೋದ್ದಾರಗೊಳಿಸಲಾಗಿದೆ. ಅಂದು ಮಧ್ಯಾಹ್ನ 2 ಗಂಟೆಗೆ ನೂತನ ದೇವಸ್ಥಾನ ಹಾಗೂ ಕಳಸಾರೋಹಣವನ್ನು ನಿಜಶರಣ ಅಂಬಿಗರ ಚೌಡಯ್ಯನವರ ಪೀಠದ ಶಾಂತಭೀಷ್ಮ ಚೌಡಯ್ಯ ಮಹಾಸ್ವಾಮಿಗಳು, ನಿರಗುಡಿಯ ಹವಾ ಮಲ್ಲಿನಾಥ್ ಮಹಾರಾಜರ ನೇತೃತ್ವದಲ್ಲಿ ಹಾಗೂ ವಿವಿಧ ರಾಜಕೀಯ ಪಕ್ಷಗಳ ಮುಖಂಡರ ಸಮಕ್ಷಮದಲ್ಲಿ ನೆರವೇರಲಿದೆ ಎಂದು ಅವರು ತಿಳಿಸಿದರು.
ಅದೇ ರೀತಿ ಜನವರಿ 10ರಂದು ಬೆಳಿಗ್ಗೆ ಹತ್ತು ಗಂಟೆಗೆ ನಗರದ ಶ್ರೀ ಶರಣಬಸವೇಶ್ವರ್ ಕೆರೆಯ ಹತ್ತಿರ ಇರುವ ಜಗತ್ ವೃತ್ತದಲ್ಲಿನ ಶ್ರೀ ಯಲ್ಲಮ್ಮ ದೇವಸ್ಥಾನದಿಂದ ಶರಣಬಸವೇಶ್ವರ್ ದೇವಸ್ಥಾನದ ಮಾರ್ಗದ ಮೂಲಕ ಗಂಗಾನಗರದ ಶ್ರೀ ರೇಣುಕಾ ಯಲ್ಲಮ್ಮ ದೇವಸ್ಥಾನದವರೆಗೆ ರೇಣುಕಾ ಯಲ್ಲಮ್ಮ ಉತ್ಸವ ಮೂರ್ತಿಯ ಭವ್ಯ ಶೋಭಾಯಾತ್ರೆಯು 101 ಮುತ್ಯೈದೆಯರ ಕುಂಭಕಳಸದೊಂದಿಗೆ ಡೊಳ್ಳು, ಬಾಜಾ ಭಜಂತ್ರಿಗಳೊಂದಿಗೆ ವಿವಿಧ ಕಲಾಮೇಳಗಳೊಂದಿಗೆ ನೆರವೇರಲಿದೆ ಎಂದು ಅವರು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ವಿಜಯಕುಮಾರ್ ಡಿ. ಹದಗಲ್, ರಾಯಣ್ಣ ಹೊನಗುಂಟಿ, ಅನಿಲ್ ಎನ್. ಕೂಡಿ, ಅಶೋಕ್ ಬಿದನೂರ್, ಸಿದ್ದು ಕೋಬಾಳ್, ಶರಣು ಕೌಲಗಿ, ಸಂತೋಷ್ ಹುಳಕೇರಿ, ನಟರಾಜ್ ಕಟ್ಟಿಮನಿ, ಶರಣು ಬೊಮ್ಮನಳ್ಳಿ ಮುಂತಾದವರು ಉಪಸ್ಥಿತರಿದ್ದರು.