ಜ.5 ರಿಂದ ಬೀದರ್‍ನಲ್ಲಿ ಪಂಚರತ್ನ ರಥಯಾತ್ರೆ: ಖಾಶೆಂಪೂರ

ಬೀದರ್:ಜ.2: ಈ ತಿಂಗಳ 5ರಿಂದ 8ರ ವರೆಗೆ ಬೀದರ್ ಜಿಲ್ಲೆಯ ನಾಲ್ಕು ವಿಧಾನ ಸಭೆ ಕ್ಷೇತ್ರಗಳಾದ ಬೀದರ್ ಉತ್ತರ, ಬೀದರ್ ದಕ್ಷಿಣ, ಹುಮನಾಬಾದ್ ಹಾಗೂ ಬಸವಕಲ್ಯಾಣ ವಿಧಾನ ಸಭೆ ಕ್ಷೇತ್ರಗಳಲ್ಲಿ ಮಾಜಿ ಮುಖ್ಯಮಂತ್ರಿಗಳು ಹಾಗೂ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕರಾದ ಹೆಚ್.ಡಿ ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ಪಂಚರತ್ನ ರಥಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ಉಪ ನಾಯಕರು ಹಾಗೂ ಬೀದರ್ ದಕ್ಷಿಣ ಕ್ಷೇತ್ರದ ಶಾಸಕ ಬಂಡೆಪ್ಪ ಖಾಶೆಂಪೂರ ತಿಳಿಸಿದರು.

ನಗರದ ಶಿವಾ ಇಂಟರ್‍ನ್ಯಾಶ್ನಲ್ ಹೋಟಲ್ ಅವರಣದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ತಿಂಗಳ 5ರಂದು ನಗರದ ಸಿದ್ದಾರೂಢ ಮಠದಿಂದ ಬೈಕ್ ರ್ಯಾಲಿ ಹಮ್ಮಿಕೊಳ್ಳಲಾಗಿದೆ. ಬೈಕ್ ರ್ಯಾಲಿಯು ನಗರದ ಬೊಮ್ಮಗೊಂಡೇಶ್ವರ ವೃತ್ತ, ಬಸವೇಶ್ವರ ಚೌಕ್, ಗವಾನ್ ಸರ್ಕಲ್, ಅಂಬೇಡ್ಕರ್ ವೃತ್ತ, ಶಿವಾಜಿ ಚೌಕ್, ಹರಳಯ್ಯ ವೃತ್ತದ ಮೂಲಕ ಗಣೇಶ ಮೈದಾನದಲ್ಲಿ ತಲುಪಿ ನಂತರ ಬಹಿರಂಗ ಸಮಾವೇಶ ಜರುಗುವುದು. ತದನಂತರ ಚಿಕಪೇಟ್, ಬೆನಕನಳ್ಳಿ, ಚಾಂಬೋಳ, ಹಿಪ್ಪಳಗಾಂವ್ ಮೂಲಕ ಜನವಾಡ ತಲುಪಿ ಗ್ರಾಮ ವಾಸ್ತವ್ಯ ಹೂಡಲಾಗುವುದು. ನಂತರ 6ರಂದು ಬೆಳಿಗ್ಗೆ ಬೀದರ್ ದಕ್ಷಿಣ ಕ್ಷೇತ್ರದ ಅಮಲಾಪುರ, ಮನ್ನಳ್ಳಿ, ಬೆಮಳಖೇಡಾ, ಚಾಂಗಲೇರದಲ್ಲಿ ಮನೆ ಮನೆಗೆ ತೆರಳಿ ನಂತರ ಮನ್ನಾಯಿಖೆಳ್ಳಿಯಲ್ಲಿ ರೋಡ್ ಶೊ ನಡೆಯಲಿದೆ. ನಂತರ ಅಂದು ರಾತ್ರಿ ನಿರ್ಣಾದಲ್ಲಿ ಗ್ರಾಮ ವಾಸ್ತವ್ಯ ಮಾಡಲಾಗುವುದು. 7ರಂದು ಹುಮನಾಬಾದ್ ತಾಲೂಕಿನ ತಾಳಮಡಗಿ ಹಾಗೂ ಇತರೆ ಗ್ರಾಮಗಳಲ್ಲಿ ಸಾಗಿ ನಂತರ ಅಂದು 5 ಗಂಟೆಗೆ ಹುಮನಾಬಾದ್ ಪಟ್ಟಣದ ಥೇರ್ ಮೈದಾನದಲ್ಲಿ ಬಹಿರಂಗ ಸಮಾವೇಶ ಜರುಗಲಿದೆ. ನಂತರ ಅಂದು ರಾತ್ರಿ ಬಸವಕಲ್ಯಾಣ ತಾಲೂಕಿನ ರಾಜೇಶ್ವರದಲ್ಲಿ ಗ್ರಾಮ ವಾಸ್ತವ್ಯ ಹಮ್ಮಿಕೊಳ್ಳಲಾಗಿದೆ. 8ರಂದು ಬೆಳಿಗ್ಗೆ ರಾಜೇಶ್ವರದಿಂದ ಆರಂಭವಾಗುವ ಪಂಚರತ್ನ ರಥಯಾತ್ರೆ ತಾಲೂಕಿನ ಮುಡಬಿ ಗ್ರಾಮ ಹಾಗೂ ಇತರೆಡೆಗಳಲ್ಲಿ ಸಂಚರಿಸಿ ಅಂದು ಸಂಜೆ 5 ಗಂಟೆಗೆ ಬಸವಕಲ್ಯಾಣ ನಗರದ ಅಕ್ಕಮಹಾದೇವಿ ಕಾಲೇಜು ಮೈದಾನದಲ್ಲಿ ಬೃಹತ್ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಅಂದು ರಾತ್ರಿ ಕಲಬುರಗಿ ತಾಲೂಕಿನ ಆಳಂದ ಪಟ್ಟಣಕ್ಕೆ ತೆರಳಿ ಗ್ರಾಮ ವಾಸ್ತವ್ಯ ಮಾಡಲಾಗುವುದು. ಹೀಗೆ ಮೂರು ದಿನಗಳ ಕಾಲ ಈ ನಾಲ್ಕು ವಿಧಾನ ಸಭೆ ಕ್ಷೇತ್ರಗಳನ್ನು ಪೂರ್ಣಗೊಳಿಸಲಾವುದು. ನಂತರ ಈ ತಿಂಗಳ 16ರಿಂದ ಎರಡನೇ ಹಂತದಲ್ಲಿ ಭಾಲ್ಕಿ ಹಾಗೂ ಔರಾದ್ ಮೀಸಲು ವಿಧಾನ ಸಭೆ ಕ್ಷೇತ್ರಗಳಲ್ಲಿ ಪಂಚರತ್ನ ರಥಯಾತ್ರೆ ಜರುಗಲಿದೆ ಎಂದು ಖಾಶೆಂಪೂರ ವಿವರಿಸಿದರು.

ಈ ಯಾತ್ರೆಯ ಮೂಲ ಉದ್ದೇಶದ ಮೇಲೆ ಬೆಳಕು ಚಲ್ಲಿದ ಅವರು, ಐದು ಪ್ರಮುಖ ಯೋಜನೆಗಳನ್ನು ಇಟ್ಟುಕೊಂಡು ನವೆಂಬರ್ 18ರಂದು ಕೋಲಾರ ಜಿಲ್ಲೆಯ ಮುಳುಬಾಗಿಲಿನಿಂದ ಪಂಚರತ್ನ ರಥಯಾತ್ರೆ ಆರಂಭವಾಗಿದೆ. 1.ಶಿಕ್ಷಣವೇ ಆಧುನಿಕ ಶಕ್ತಿ ಯೋಜನೆ ಅಡಿ ಈ ನಾಡಿನಲ್ಲಿ ಪ್ರತಿ ಗ್ರಾಮ ಪಂಚಾಯತ ಮಟ್ಟದಲ್ಲಿ ಅಂತರಾಷ್ಟ್ರೀಯ ಮಾದರಿ ಶಾಲೆ ಆರಂಭಕ್ಕೆ ಚಿಂತನೆ, 2.ಆರೋಗ್ಯ ಸಂಪತ್ತು ಯೋಜನೆ ಅಡಿ ಪಂಚಾಯತಿ ವ್ಯಾಪ್ತಿಯಲ್ಲಿ 24*7 ಕಾರ್ಯನಿರ್ವಹಿಸುವ ಸುಸಜ್ಜಿತ ಹೈಟೆಕ್ ಆಸ್ಪತ್ರೆ ನಿರ್ಮಾಣ, 3.ರೈತ ಚೈತನ್ಯ ಯೋಜನೆ ಅಡಿ ಆಧುನಿಕ ತಂತ್ರಜ್ಞಾನದ ಕೃಷಿ ಪದ್ದತಿ ಅಳವಡಿಕೆ, ಸರಿಯಾದ ಬೆಳೆ ಶೇಖರಣಾ ವ್ಯವಸ್ಥೆ ಹಾಗೂ ಲಾಭದಾಯಕವಾದ ಮಾರುಕಟ್ಟೆ ಸೌಲಭ್ಯ. 4.ಯುವ ನವ ಮಾರ್ಗ ಹಾಗೂ ಮಹಿಳಾ ಸಬಲೀಕರಣ ಅಡಿ ಯುವಜನತೆ ಹಾಗೂ ಮಹಿಳೆಯರಿಗೆ ಉದ್ಯೋಗ ಪಡೆಯಲು ಅಗತ್ಯ ತರಬೇತಿ ಹಾಗೂ ಮಾರ್ಗದರ್ಶನ ನೀಡುವುದು, 5.ವಸತಿ ಆಸರೆ ಯೋಜನೆಯಡಿ ವಸತಿ ಇಲ್ಲದವರಿಗೆ ಸರ್ಕಾರದಿಂದಲೇ ವಸತಿ ಕಟ್ಟಿಸಿ ಕೊಡುವ ಯೋಜನೆ ಹೀಗೆ ಈ ಮಹತ್ವದ ಪಂಚ ಯೋಜನೆಗಳನ್ನು ಮುಂದಿಟ್ಟುಕೊಂಡು ಜನತೆಯ ಅಶಿರ್ವಾದ ಕೇಳಲಾಗುವುದೆಂದರು.

ಜೆಡಿಎಸ್ ಜಿಲ್ಲಾಧ್ಯಕ್ಷ ರಮೇಶ ಪಾಟೀಲ ಸೋಲಪುರ, ಜಿಲ್ಲಾ ವಕ್ತಾರ ಅಶೋಕಕುಮಾರ ಕರಂಜಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಶೋಕ ಕೋಡಗೆ, ಪ್ರಮುಖರಾದ ಮಾರೂತಿ ಬೌದ್ದೆ, ಮಹಮ್ಮದ್ ಸಜ್ಜನ್ ಸಾಹೆಬ್, ಐಲಿನ್ ಜಾನ್ ಮಠಪತಿ, ಲಲಿತಾ ಕರಂಜಿ, ರಾಜಶೇಖರ ಜವಳೆ, ಮಹಮ್ಮದ್ ಅಸದೊದ್ದಿನ್ ಸೇರಿದಂತರ ಇತರರು ಪತ್ರಿಕಾಗೋಷ್ಟಿಯಲ್ಲಿದ್ದರು.