ಜ.5 ರಂದು 3 ಸಾವಿರ ಕೋಟಿ ಮೊತ್ತದ ಅನಿಲ ಕೊಳವೆ ಮಾರ್ಗ : ಪ್ರಧಾನಿ ದೇಶಕ್ಕೆ ಸಮರ್ಪಣೆ

ನವದೆಹಲಿ ಜ. 3-: ಮಂಗಳೂರು- ಕೇರಳದ ಕೊಚ್ಚಿ ನಡುವೆ 3 ಸಾವಿರ ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣ ಮಾಡಿರುವ ನೈಸರ್ಗಿಕ ಅನಿಲ ಕೊಳವೆ ಮಾರ್ಗವನ್ನು ಜ.5 ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು,ದೇಶಕ್ಕೆ ಸಮರ್ಪಿಸಲಿದ್ದಾರೆ.
“‘ಒಂದು ರಾಷ್ಟ್ರ ಒಂದು ಅನಿಲ ಗ್ರಿಡ್’ ರಚನೆಯಲ್ಲಿ ಪ್ರಮುಖ ಮೈಲಿಗಲ್ಲಾಗಿದೆ.
ಬೆಳಗ್ಗೆ 11 ಗಂಟೆಗೆ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಚಾಲನೆ ಪ್ರಧಾನಿ ನೀಡಲಿದ್ದು ಈ ಸಂದರ್ಭದಲ್ಲಿ ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಧರ್ಮೇಂದ್ರ ಪ್ರಧಾನ್, ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಕೇರಳ ಮುಖ್ಯಮಂತ್ರಿ ಪಿಣರಾಣಿ‌ವಿಜಯನ್, ಎರಡೂ ರಾಜ್ಯಗಳ ರಾಜ್ಯಪಾಲರು ಉಪಸ್ಥಿತರಿರುತ್ತಾರೆ.
450 ಕಿ.ಮೀ. ಉದ್ದದ ಈ ಕೊಳವೆ ಮಾರ್ಗವನ್ನು ಜಿ.ಎ.ಐ.ಎಲ್. ನಿರ್ಮಿಸಿದೆ.ಪ್ರತಿನಿತ್ಯ 12 ದಶಲಕ್ಷ ಮೆಟ್ರಿಕ್ ಸ್ಟಾಂಡರ್ಡ್ ಕ್ಯುಬಿಕ್ ಮೀಟರ್ ಅನಿಲ ಸಾಗಿಸುವ ಸಾಮರ್ಥ್ಯವನ್ನು ಹೊಂದಿದೆ.
ಕೇರಳದ ಕೊಚ್ಚಿಯ ಧ್ರವೀಕೃತ ನೈಸರ್ಗಿಕ ಅನಿಲ   ಮರುಹೊಂದಾಣಿಕೆ ಟರ್ಮಿನಲ್ ನಿಂದ ಎರ್ನಾಕುಲಂ, ತ್ರಿಸ್ಸೂರ್, ಪಾಲಕ್ಕಾಡ್, ಮಲ್ಲಪುರಂ, ಕೋಳಿಕೋಡ್, ಕಣ್ಣೂರು ಮತ್ತು ಕಾಸರಗೋಡು ಜಿಲ್ಲೆಯ ಮೂಲಕ ಹಾದೂ ಕರ್ನಾಟಕದ, ದಕ್ಷಿಣ ಕನ್ನಡ ಜಿಲ್ಲೆ ಮಂಗಳೂರಿಗೆ ನೈಸರ್ಗಿಕ ಅನಿಲವನ್ನು ಸಾಗಿಸುತ್ತದೆ.
ಸುಮಾರು 3 ಸಾವಿರ ಕೋಟಿ ಮೊತ್ತದ ನಿರ್ಮಾಣದಲ್ಲಿ 12 ಲಕ್ಷ ಮಾನವ-ದಿನಗಳ ಉದ್ಯೋಗವನ್ನು ಸೃಷ್ಟಿಸಿತ್ತು.
ಕೊಳವೆ ಮಾರ್ಗ ಅಳವಡಿಕೆಯು ಎಂಜಿನಿಯರಿಂಗ್ ಸವಾಲಾಗಿತ್ತು, ಏಕೆಂದರೆ ಕೊಳವೆ ಮಾರ್ಗ 100ಕ್ಕೂ ಹೆಚ್ಚು ಸ್ಥಳಗಳಲ್ಲಿ ಜಲಮೂಲಗಳನ್ನು ದಾಟುವುದು ಅನಿವಾರ್ಯವಾಗಿತ್ತು. ಇದನ್ನು ಅಡ್ಡಡ್ಡ ಕೊರೆಯುವ ವಿಧಾನದ ವಿಶೇಷ ತಂತ್ರಜ್ಞಾನದ ಮೂಲಕ ಮಾಡಲಾಯಿತು.
ಈ ಕೊಳವೆ ಮಾರ್ಗ ಪರಿಸರ ಸ್ನೇಹಿ ಮತ್ತು ಕೈಗೆಟಕುವ ದರದ ಇಂಧನವನ್ನು ಕೊಳವೆ ಮಾರ್ಗದ ನೈಸರ್ಗಿಕ ಅನಿಲ ರೂಪದಲ್ಲಿ ಮನೆಗಳಿಗೆ ಪೂರೈಸಲಿದೆ ಮತ್ತು ಸಂಕುಚಿತ ನೈಸರ್ಗಿಕ ಅನಿಲ ಯನ್ನು ಸಾರಿಗೆ ವಲಯಕ್ಕೆ ಸರಬರಾಜು ಮಾಡಲಿದೆ.
ನೈಸರ್ಗಿಕ ಅನಿಲವನ್ನು ಜಿಲ್ಲೆಯಾದ್ಯಂತದ ವಾಣಿಜ್ಯ ಮತ್ತು ಕೈಗಾರಿಕಾ ಘಟಕಗಳಿಗೆ ಕೊಳವೆ ಮಾರ್ಗದಲ್ಲಿ ಪೂರೈಸಲಿದೆ. ಶುದ್ಧ ಇಂಧನದ ಬಳಕೆಯು ವಾಯು ಮಾಲಿನ್ಯವನ್ನು ನಿಗ್ರಹಿಸಿ, ವಾಯು ಗುಣಮಟ್ಟವನ್ನು ಸುಧಾರಿಸಲು ಸಹಕಾರಿಯಾಗಲಿದೆ