ಜ. 5 ರಂದು “ರಂಗ ವಿಮರ್ಶಾ ಕಮ್ಮಟ” ಉದ್ಘಾಟನೆ

ಕಲಬುರಗಿ.ಜ.4:ಕಲಬುರಗಿ ರಂಗಾಯಣ, ಕರ್ನಾಟಕ ನಾಟಕ ಅಕಾಡೆಮಿ ಬೆಂಗಳೂರು, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಕಲಬುರಗಿ ಇವುಗಳ ಸಂಯುಕ್ತಾಶ್ರಯದಲ್ಲಿ ಪತ್ರಕರ್ತರು ಹಾಗೂ ಪತ್ರಿಕೋದ್ಯಮ ವಿದ್ಯಾರ್ಥಿಗಳಿಗೆ ಇದೇ ಜನವರಿ 5 ಹಾಗೂ 6 ರಂದು ಬೆಳಿಗ್ಗೆ 10.30 ರಿಂದ ಸಂಜೆ 5.30 ಗಂಟೆಯವರೆಗೆ ರಂಗಾಯಣದ ಅಡಿಟೋರಿಯಂ ಹಾಲ್‍ನಲ್ಲಿ ಎರಡು ದಿನಗಳ ಕಾಲ ‘ರಂಗ ವಿಮರ್ಶಾ ಕಮ್ಮಟ’ ವನ್ನು ಆಯೋಜಿಸಲಾಗಿದೆ.
ಇದೇ ಜನವರಿ 5 ರಂದು ಬೆಳಿಗ್ಗೆ 10.30 ಗಂಟೆಗೆ ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷ ಪ್ರೊ. ಭೀಮಸೇನ ಆರ್. ಅವರು ರಂಗ ವಿಮರ್ಶಾ ಕಮ್ಮಟವನ್ನು ಉದ್ಘಾಟಿಸುವರು. ವಿಜಯವಾಣಿ ಸ್ಥಾನಿಕ ಸಂಪಾದಕ ವಾದಿರಾಜ ವ್ಯಾಸಮುದ್ರ, ಕರ್ನಾಟಕ ಸಂಧ್ಯಾಕಾಲ ದಿನಪತ್ರಿಕೆಯ ಪ್ರಧಾನ ಸಂಪಾದಕ ಡಿ. ಶಿವಲಿಂಗಪ್ಪ, ಉದಯವಾಣಿ ದಿನಪತ್ರಿಕೆಯ ಸ್ಥಾನಿಕ ಸಂಪಾದಕ ಹಣಮಂತರಾವ ಭೈರಾಮಡಗಿ, ಬುದ್ಧಲೋಕ ದಿನಪತ್ರಿಕೆಯ ಮುಖ್ಯಸ್ಥ ದೇವೇಂದ್ರಪ್ಪ ಕಪನೂರ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು. ಬೆಂಗಳೂರಿನ ರಂಗ ಸಮಾಜದ ಸದಸ್ಯರಾದ ಶ್ರೀಧರ ಹೆಗಡೆ ಹಾಗೂ ಪ್ರಭುದೇವ ಕಪಗಲ್ ವಿಶೇಷ ಆಹ್ವಾನಿತರಾಗಿ ಆಗಮಿಸಲಿದ್ದಾರೆ.
ಕಲಬುರಗಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಉಪನಿರ್ದೇಶಕ ಸಿದ್ಧೇಶ್ವರಪ್ಪ ಜಿ.ಬಿ. ಹಾಗೂ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಭವಾನಿಸಿಂಗ್ ಠಾಕೂರ್ ಹಾಗೂ ನಾಟಕ ಅಕಾಡೆಮಿಯ ಸದಸ್ಯ ಪ್ರವೀಣ ರಾಠೋಡ ಅವರು ಈ ಸಂದರ್ಭದಲ್ಲಿ ಉಪಸ್ಥಿತರಿರುವರು. ಕಲಬುರಗಿ ರಂಗಾಯಣ ನಿರ್ದೇಶಕ ಪ್ರಭಾಕರ ಜೋಶಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.
ಬೆಂಗಳೂರಿನ ಹಿರಿಯ ನಾಟಕರಾರರಾದ ಡಾ. ರಾಜಪ್ಪ ದಳವಾಯಿ ಅವರ ಅಧ್ಯಕ್ಷತೆಯಲ್ಲಿ ಇದೇ ಜನವರಿ 5 ರಂದು ಮಧ್ಯಾಹ್ನ 12 ಗಂಟೆಗೆ ‘ನಾಟಕ ಕೃತಿ ಕೇಂದ್ರಿತ ವಿಮರ್ಶೆ’ ವಿಷಯ ಕುರಿತು ಗೋಷ್ಠಿ-1 ನಡೆಯಲಿದೆ. ಈ ಗೋಷ್ಠಿಯಲ್ಲಿ ಮೈಸೂರಿನ ಹಿರಿಯ ಪತ್ರಕರ್ತ ಡಾ. ಗಣೇಶ ಅಮೀನಗಡ, ಕನ್ನಡ ಪ್ರಭ ಮುಖ್ಯಸ್ಥ ಶೇಷಮೂರ್ತಿ ಅವಧಾನಿ ಹಾಗೂ ಹಿರಿಯ ಪತ್ರಕರ್ತ ಮಹಿಪಾಲರೆಡ್ಡಿ ಮುನ್ನೂರ್ ವಿಷಯ ಮಂಡನೆ ಮಾಡಲಿದ್ದಾರೆ. ಮಧ್ಯಾಹ್ನ 3 ಗಂಟೆಗೆ ಶಿಬಿರಾರ್ಥಿಗಳಿಂದ ಸಂವಾದ ನಡೆಯಲಿದೆ. ಸಂಜೆ 6 ಗಂಟೆಗೆ ರಂಗ ಪ್ರಯೋಗ ನಾಟಕ ‘ತ್ರಯಸ್ಥ” ಆಯೋಜಿಸಲಾಗಿದೆ.
ಬೆಂಗಳೂರಿನ ಹಿರಿಯ ನಾಟಕರಾರರಾದ ಡಾ. ರಾಜಪ್ಪ ದಳವಾಯಿ ಅವರ ಅಧ್ಯಕ್ಷತೆಯಲ್ಲಿ ಇದೇ ಜನವರಿ 6 ರಂದು ಬೆಳಿಗ್ಗೆ 10.30 ಗಂಟೆಗೆ ‘ರಂಗ ಪ್ರಯೋಗ ಕೇಂದ್ರೀತ ವಿಮರ್ಶೇ’ ವಿಷಯ ಕುರಿತು ಗೋಷ್ಠಿ-2 ನಡೆಯಲಿದೆ. ಈ ಗೋಷ್ಠಿಯಲ್ಲಿ ಕಲಬುರಗಿಯ ಹಿರಿಯ ಲೇಖಕಿ, ನಟಿ, ವಿಮರ್ಶಕಿಯಾದ ಸಂಧ್ಯಾ ಹೊನಗುಂಟಿಕರ್, ಮೈಸೂರಿನ ಹಿರಿಯ ಪತ್ರಕರ್ತ ಡಾ. ಗಣೇಶ ಅಮೀನಗಡ ಹಾಗೂ ಕಲಬುರಗಿಯ ಹಿರಿಯ ಪತ್ರಕರ್ತ, ಲೇಖಕರಾದ ಡಾ. ಶಿವರಾಮ ಅಸುಂಡಿ ಅವರು ವಿಷಯ ಮಂಡಿಸಲಿದ್ದಾರೆ.

ಸಮಾರೋಪ ಸಮಾರಂಭ: ಕಲಬುರಗಿ ರಂಗಾಯಣ ನಿರ್ದೇಶಕರಾದ ಪ್ರಭಾಕರ ಜೋಶಿ ಅವರ ಅಧ್ಯಕ್ಷತೆಯಲ್ಲಿ ಇದೇ ಜನವರಿ 6 ರಂದು ಮಧ್ಯಾಹ್ನ 2 ಗಂಟೆಗೆ ಸಮಾರೋಪ ಸಮಾರಂಭ ಜರುಗಲಿದೆ. ಕರ್ನಾಟಕ ನಾಟಕ ಅಕಾಡೆಮಿಯ ಅಧ್ಯಕ್ಷ ಪ್ರೊ. ಭೀಮಸೇನ ಆರ್ ಸಮಾರೋಪ ಭಾಷಣ ಮಾಡಲಿದ್ದಾರೆ. ಕಲಬುರಗಿಯ ಹಿರಿಯ ಪತ್ರಕರ್ತ, ಲೇಖಕರಾದ ಡಾ. ಶ್ರೀನಿವಾಸ ಸಿರನೂರಕರ್, ಜಿಲ್ಲಾ ಕಾರ್ಯನಿರತ ಪ್ರತಕರ್ತರ ಸಂಘದ ಅಧ್ಯಕ್ಷ ಭವಾನಿಸಿಂಗ್ ಠಾಕೂರ್ ಹಾಗೂ ನೃಪತುಂಗ ದಿನ ಪತ್ರಿಕೆಯ ಸ್ಥಾನಿಕ ಸಂಪಾದಕ ಶಿವರಾಯ ದೊಡ್ಡಮನಿ ಪಾಲ್ಗೊಳ್ಳುವರು.