ಜ.31 ರ ವರಗೆ ಕೋವಿಡ್ ಮಾರ್ಗಸೂಚಿ ವಿಸ್ತರಣೆ

ನವದೆಹಲಿ.ಡಿ.28- ದೇಶದಲ್ಲಿ ಕೊರೊನಾ ಸೋಂಕು ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಹಾಲಿ ಇರುವ ಮಾರ್ಗಸೂಚಿ ನಿಯಮಗಳನ್ನು 2021ರ ಜನವರಿ 31ರ ತನಕ ವಿಸ್ತರಿಸಿ ಕೇಂದ್ರ ಗೃಹಸಚಿವಾಲಯ ಇಂದು ಆದೇಶ ಹೊರಡಿಸಿದೆ.

ಈ ಸಂಬಂಧ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶದ ಮುಖ್ಯ ಕಾರ್ಯದರ್ಶಿಗಳು ಕೋವಿಡ್ ಮಾರ್ಗಸೂಚಿ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರುವಂತೆ ಕೇಂದ್ರ ಗೃಹ ಕಾರ್ಯದರ್ಶಿ ಅಜೇಯ್ ಬಲ್ಲಾ ರಾಜ್ಯಗಳಿಗೆ ಬರೆದಿರುವ ಪತ್ರದಲ್ಲಿ ತಿಳಿಸಿದ್ದಾರೆ.

ಕಳೆದ 2-3 ತಿಂಗಳಿಂದ ದೇಶದಲ್ಲಿ ಕೊರೊನಾ ಸಕ್ರಿಯ ಪ್ರಕರಣಗಳ ಸಂಖ್ಯೆ ಇಳಿಕೆಯಾಗುತ್ತಿದೆ. ಆದರೂ ದೇಶದಲ್ಲಿ ಸೋಂಕು ಇರುವ ಹಿನ್ನೆಲೆಯಲ್ಲಿ ಕಂಟೈನ್‍ಮೆಂಟ್ ನಿಯಮಗಳಲ್ಲಿ ಕಟ್ಟುನಿಟ್ಟಾಗಿ ಮಾರ್ಗಸೂಚಿ ಜಾರಿಗೆ ತರುವಂತೆ ಕೇಂದ್ರ ಗೃಹ ಸಚಿವಾಲಯ ರಾಜ್ಯ ಸರ್ಕಾರಗಳಿಗೆ ಸೂಚನೆ ನೀಡಿದೆ.

ಹೊಸ ವರ್ಷದ ಆಚರಣೆ ಹಿನ್ನೆಲೆಯಲ್ಲಿ ಎಲ್ಲಾ ರಾಜ್ಯಗಳಲ್ಲಿ ಕೋವಿಡ್ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಕೇಂದ್ರ ಗೃಹ ಸಚಿವಾಲಯ ರಾಜ್ಯ ಸರ್ಕಾರಗಳಿಗೆ ಸೂಚನೆ ನೀಡಿದೆ. ಚಳಿಗಾಲದಲ್ಲಿ ಸೋಂಕು ಹೆಚ್ಚಳವಾಗುವ ಹಿನ್ನೆಲೆಯಲ್ಲಿ ಜಾಗರೂಕತೆ ವಹಿಸುವಂತೆಯೂ ಸೂಚನೆ ನೀಡಿದೆ.

ಪೂರ್ವ ಸಿದ್ದತೆ:

ಕೋವಿಡ್-19 ಲಸಿಕೆ ವಿತರಣೆಗೆ ಪೂರ್ವ ಸಿದ್ಧತೆಗಳನ್ನು ಕೇಂದ್ರ ಸರ್ಕಾರ ಆರಂಭಿಸಿದೆ. ಲಸಿಕೆ ಲಭ್ಯವಾಗುತ್ತಿದ್ದಂತೆ ಆರಂಭಿಕ ಹಂತದಲ್ಲಿ ಆರೋಗ್ಯ ಕಾರ್ಯಕರ್ತರು, ಮುಂಚೂಣಿ ಕಾರ್ಯಕರ್ತರು, 50 ವರ್ಷ ದಾಟಿದವರಿಗೆ ಮೊದಲು ಲಸಿಕೆ ನೀಡಲು ಉದ್ದೇಶಿಸಲಾಗಿದೆ ಎಂದು ರಾಜ್ಯ ಸರ್ಕಾರಗಳಿಗೆ ಬರೆದಿರುವ ಪತ್ರದಲ್ಲಿ ತಿಳಿಸಿದೆ.

ಲಸಿಕೆ, ಪೂರೈಕೆ, ಸಂಗ್ರಹ ಸೇರಿದಂತೆ ಫಲಾನುಭವಿಗಳ ಮಾಹಿತಿಯನ್ನು ಕೇಂದ್ರ ಆರೋಗ್ಯ ಸಚಿವಾಲಯ ಗುರುತಿಸಲಿದೆ ಎಂದು ಪತ್ರದಲ್ಲಿ ತಿಳಿಸಲಾಗಿದೆ.

ಕೋವಿಡ್ ಸೋಂಕು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಸಚಿವಾಲಯ 2021ರ ಜನವರಿ 31ರ ವರೆಗೆ ಮಾರ್ಗಸೂಚಿಗಳನ್ನು ಮುಂದುವರೆಸಿ, ನಿನ್ನೆ ಬಿಡುಗಡೆ ಮಾಡಿದೆ. ಸೋಂಕು ಹೆಚ್ಚುತ್ತಿರುವ ಪ್ರದೇಶದಲ್ಲಿ ಪರಿಸ್ಥಿತಿಯನ್ನು ಅವಲೋಕಿಸಿ ರಾತ್ರಿ ಕಫ್ರ್ಯೂ ಜಾರಿ ಮಾಡುವ ಅವಕಾಶವನ್ನು ರಾಜ್ಯ ಸರ್ಕಾರಗಳಿಗೆ ನೀಡಲಾಗಿದೆ.

  • ಹಳೆ ಮಾರ್ಗಸೂಚಿ ಮುಂದುವರಿಕೆ
  • ಜ.31 ರ ವರೆಗೆ ಕೇಂದ್ರ ಗೃಹ ಸಚಿವಾಲಯ ವಿಸ್ತರಣೆ
  • ಸೋಂಕು ಹೆಚ್ಚಳ ಕಾಳಜಿ ವಹಿಸುವಂತೆ ರಾಜ್ಯಗಳಿಗೆ ಸೂಚನೆ
  • ಹೊಸ ವರ್ಷಾಷರಣೆ ಎಚ್ಚರಿಕೆ ಅಗತ್ಯ- ಗೃಹ ಸಚಿವಾಲಯ
  • ಲಸಿಕೆ ವಿತರಣೆಗೆ ಸಿದ್ದತೆ ಆರಂಭ