ಜ. 3ರಂದು ಹೋರಾಟಗಾರ ವಿಠ್ಠಲ್ ಹೇರೂರ್ ಕೃತಿ ಲೋಕಾರ್ಪಣೆ

ಕಲಬುರಗಿ. ಡಿ.30: ನಗರದ ಖಾದ್ರಿ ಚೌಕ್‍ದಲ್ಲಿರುವ ಮಿಲೇನಿಯಂ ಶಾಲೆಯ ಹತ್ತಿರದ ಶ್ರೀಮತಿ ಕಸ್ತೂರಿಬಾಯಿ ಪಿ. ಬುಳ್ಳಾ ಸ್ಮಾರಕ ಭವನದಲ್ಲಿ ಜನವರಿ 3ರಂದು ಬೆಳಿಗ್ಗೆ 11 ಗಂಟೆಗೆ ಹೋರಾಟಗಾರ ವಿಠ್ಠಲ್ ಹೇರೂರ್ ಕೃತಿ ಲೋಕಾರ್ಪಣೆ ಸಮಾರಂಭ ಹಮ್ಮಿಕೊಳ್ಳಲಾಗಿದೆ ಎಂದು ಅಖಿಲ ಕರ್ನಾಟಕ ಸ್ನೇಹ ಗಂಗಾ ವಾಹಿನಿಯ ಗೌರವಾಧ್ಯಕ್ಷರು ಹಾಗೂ ಗುಲಬರ್ಗಾ ವಿಶ್ವವಿದ್ಯಾಲಯದ ವಿದ್ಯಾವಿಧಾಯಕ ಪರಿಷತ್ ಸದಸ್ಯ ಡಾ. ಬಿ.ಪಿ. ಬುಳ್ಳಾ ಅವರು ಇಲ್ಲಿ ಹೇಳಿದರು.
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೃತಿಯನ್ನು ಅಫಜಲಪೂರ ಕ್ಷೇತ್ರದ ಶಾಸಕ ಎಂ.ವೈ. ಪಾಟೀಲ್ ಅವರು ಬಿಡುಗಡೆ ಮಾಡುವರು. ಕೃತಿಯ ಕುರಿತು ಹುಮ್ನಾಬಾದ್‍ನ ಸಾಹಿತಿ ಡಾ. ಗವಿಸಿದ್ದಪ್ಪ ಪಾಟೀಲ್ ಅವರು ಮಾತನಾಡುವರು ಎಂದರು.
ಮುಖ್ಯ ಅತಿಥಿಗಳಾಗಿ ಕರ್ನಾಟಕ ಲೋಕಸೇವಾ ಆಯೋಗದ ಸದಸ್ಯ ಡಾ. ಎಂ.ಬಿ. ಹೆಗ್ಗಣ್ಣನವರ್, ಕಾಡಾ ಅಧ್ಯಕ್ಷ ಶರಣಪ್ಪ ತಳವಾರ್, ರಾಜ್ಯ ವಿಧಾನ ಪರಿಷತ್ ಮಾಜಿ ಸದಸ್ಯ ಅಲ್ಲಮಪ್ರಭು ಪಾಟೀಲ್, ಕರ್ನಾಟಕ ಲೋಕಸೇವಾ ಆಯೋಗದ ಮಾಜಿ ಸದಸ್ಯೆ ಶ್ರೀಮತಿ ನಾಗಾಬಾಯಿ ಬಿ. ಬುಳ್ಳಾ, ಪತ್ರಕರ್ತ ಸೂರ್ಯಕಾಂತ್ ಜಮಾದಾರ್, ವಿಜಯಪೂರದ ಪದವಿ ಪೂರ್ವ ಶಿಕ್ಷಣ ಇಲಾಖೆಯ ನಿವೃತ್ತ ಉಪ ನಿರ್ದೇಶಕ ಎಸ್.ಎಂ. ಕಣಬೂರ್, ಜಿಲ್ಲಾ ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ನೀಲಕಂಠ್ ಜಮಾದಾರ್, ಉಪನ್ಯಾಸಕ ನಾಮದೇವ್ ಕಡಕೋಳ್, ಬೆಂಗಳೂರಿನ ಹಿರಿಯ ನ್ಯಾಯವಾದಿ ಸುರೇಶ್ ಯರಗೋಳ್ ಅವರು ಆಗಮಿಸುವರು ಎಂದು ಅವರು ಹೇಳಿದರು.
ಕೃತಿಯನ್ನು ಬೀದರ್‍ನ ಸಾಹಿತಿ ಡಾ. ರಾಮಚಂದ್ರ ಗಣಾಪೂರ್ ಅವರು ಸಂಪಾದಿಸಿದ್ದಾರೆ ಎಂದು ಅವರು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಡಾ. ನಾಗಾಬಾಯಿ ಬುಳ್ಳಾ ಮುಂತಾದವರು ಉಪಸ್ಥಿತರಿದ್ದರು.