ಜ. 29 : ಕೇಂದ್ರ ಬಜೆಟ್ ಅಧಿವೇಶನ

ಹುಬ್ಬಳ್ಳಿ, ಜ ೧೦- ಈ ತಿಂಗಳು ೨೯ ರಿಂದ ಫೆಬ್ರುವರಿ ೧೫ ರವರೆಗೆ ಕೇಂದ್ರ ಬಜೆಟ್ ಅಧಿವೇಶನ ನಡೆಯಲಿದೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಹಾಗೂ ಗಣಿ ಮತ್ತು ಕಲ್ಲಿದ್ದಲು ಸಚಿವ ಪ್ರಹ್ಲಾದ್ ಜೋಶಿ ಹೇಳಿದರು.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಫೆಬ್ರುವರಿ ೧ ರಂದು ಬಜೆಟ್ ಮಂಡಿಸಲಿದ್ದು, ಕರ್ನಾಟಕದ ಆದ್ಯತಾ ಪಟ್ಟಿಯನ್ನು ಕೇಂದ್ರಕ್ಕೆ ಸಲ್ಲಿಸಲಾಗಿದೆ ಎಂದರು.
ಜನೆವರಿ ೩೦ ರಂದು ಸರ್ವಪಕ್ಷದ ಸಭೆ ನಡೆಯಲಿದೆ. ಮಾರ್ಚ್ ೮ ರಿಂದ ಏಪ್ರಿಲ್ ೮ ರವರೆಗೆ ಎರಡನೇ ಅಧಿವೇಶನ ನಡೆಯಲಿದೆ ಎಂದು ತಿಳಿಸಿದರು.
ರಾಜ್ಯ ಸಂಪುಟ ವಿಸ್ತರಣೆ ವಿಚಾರವಾಗಿ ಪ್ರತಿಕ್ರಿಯಿಸಿ, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ದೆಹಲಿಗೆ ತೆರಳಿದ್ದಾರೆ. ಮುಖ್ಯಮಂತ್ರಿಗಳು ಮತ್ತು ರಾಷ್ಟ್ರೀಯ ನಾಯಕರು ಸಂಪುಟ ವಿಸ್ತರಣೆ ಬಗ್ಗೆ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳಲಿದ್ದಾರೆ. ಯಾವಾಗ ಸಂಪುಟ ವಿಸ್ತರಣೆ ಮಾಡಬೇಕು ಎಂಬುದು ವರಿಷ್ಠರಿಗೆ ಗೊತ್ತಿದೆ ಎಂದರು.
ಕೋವಿಡ್ ವ್ಯಾಕ್ಸಿನ್ ಅನ್ನು ಮೊದಲು ಪ್ರಧಾನಿ ಹಾಗೂ ಸಚಿವರು ತೆಗೆದುಕೊಳ್ಳಬೇಕು ಎಂಬ ಕಾಂಗ್ರೆಸ್ ಹೇಳಿಕೆಗೆ ಪ್ರತಿಕ್ರಿಯಿಸಿದ ಜೋಶಿ, ಬಿಜೆಪಿ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರನ್ನು ವಿರೋಧಿಸುವ ಭರದಲ್ಲಿ ದೇಶವನ್ನು ವಿರೋಧಿಸುವುದು ಬೇಡ. ಅಲ್ಲದೆ ವಿಜ್ಞಾನಿಗಳಿಗೆ ಅಗೌರವ ತೋರುವುದು ಬೇಡ ಎಂದರು.
ಇದೇ ದಿ. ೧೬ ಹಾಗೂ ೧೭ ರಂದು ಕೇಂದ್ರ ಗೃಹ ಸಚಿವರಾದ ಅಮೀತ್ ಶಾ ಅವರು ರಾಜ್ಯಕ್ಕೆ ಭೇಟಿ ನೀಡಲಿದ್ದಾರೆ. ದಿ. ೧೭ ರಂದು ಬೆಳಗಾವಿಯಲ್ಲಿ ನಡೆಯಲಿರುವ ‘ಜನಸೇವಕ ಸಮಾವೇಶ’ ಕಾರ್ಯಕ್ರಮದಲ್ಲಿ ಅವರು ಭಾಗಿಯಾಗಲಿದ್ದಾರೆ ಎಂದು ಸಚಿವ ಪ್ರಹ್ಲಾದ್ ಜೋಶಿ ತಿಳಿಸಿದರು.