ಜ.26ರಿಂದ ಸಂವಿಧಾನ ಜಾಗೃತಿ ಜಾಥಾ; ಡಿಎಸ್‍ಎಸ್ ಪೂರ್ಣ ಬೆಂಬಲ

ಕಲಬುರಗಿ:ಜ.21: ಭಾರತದ ಸಂವಿಧಾನದ ಆಶಯಗಳನ್ನು ಜನರಿಗೆ ತಿಳಿಹೇಳುವ ನಿಟ್ಟಿನಲ್ಲಿ ಇದೇ ಜ.26ರಿಂದ ರಾಜ್ಯ ಸರಕಾರ ಕೈಗೊಂಡಿರುವ ಒಂದು ತಿಂಗಳ ಅವಧಿಯ ಸಂವಿಧಾನ ಜಾಗೃತಿ ಜಾಥಾದಲ್ಲಿ ಎಲ್ಲರೂ ಪಾಲ್ಗೊಳ್ಳಬೇಕೆಂದು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಚಾಲಕ ಡಾ.ಡಿ.ಜಿ.ಸಾಗರ ಮನವಿ ಮಾಡಿದರು.
ಇಲ್ಲಿನ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಸ್ವಾತಂತ್ರ್ಯ ಪಡೆದು 75 ವರ್ಷಗಳಾದರೂ ಈವರೆಗೆ ದೇಶದ ಜನರಿಗೆ ಸಂವಿಧಾನದ ನೈಜ ಆಶಯಗಳನ್ನು ಅರ್ಥ ಮಾಡಿಸುವ ಕೆಲಸ ಆಗಿಲ್ಲ. ಆದರೆ, ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರಕಾರ ಈ ನಿಟ್ಟಿನಲ್ಲಿ ಸಮರ್ಥನೀಯ ನಿರ್ಧಾರ ಕೈಗೊಂಡಿದೆ. ಹಾಗಾಗಿ, ರಾಜ್ಯದ ಎಲ್ಲ ಗ್ರಾಮ ಪಂಚಾಯಿತಿಗಳು ಒಳಗೊಂಡಂತೆ, ಸಂಘ-ಸಂಸ್ಥೆಗಳು, ಪ್ರಗತಿಪರ ಚಿಂತಕರು, ಸಾರ್ವಜನಿಕರು ಈ ಜಾಥಾದಲ್ಲಿ ಪಾಲ್ಗೊಳ್ಳಬೇಕೆಂದು ಅವರು ಆಗ್ರಹಿಸಿದರು.
ಕಾಯಕ ಜೀವಿಗಳು, ದಲಿತರು, ದಮನಿತರು, ದುರ್ಬಲ ಸಮುದಾಯದ ಜನರ ಪಾಲಿಗೆ ಸಂವಿಧಾನವು ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕವಾಗಿ ಸಬಲರನ್ನಾಗಿಸುವ ಏಕೈಕ ಮಾರ್ಗ ಎಂಬುದನ್ನು ಜನರಿಗೆ ಅರ್ಥ ಮಾಡಿಸುವ ನಿಟ್ಟಿನಲ್ಲಿ ಈ ಜಾಥಾ ಯಶಸ್ಸು ಕಾಣಲಿದೆ ಎಂದ ಅವರು, ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಸಹ ಒಂದು ತಿಂಗಳ ಅವಧಿಯ ಈ ಜಾಥಾದಲ್ಲಿ ಪಾಲ್ಗೊಳ್ಳಲಿದೆ ಎಂದು ಸ್ಪಷ್ಟಪಡಿಸಿದರು.
ಡಿಎಸ್‍ಎಸ್ ಜಿಲ್ಲಾ ಮುಖಂಡರಾದ ಸುರೇಶ ಹಾದಿಮನಿ, ಎಸ್.ಪಿ.ಸುಳ್ಳದ್ ಇದ್ದರು.