ಜ.24 ರಂದು ಸಾರಿಗೆ ನೌಕರರ ಧರಣಿ

ಕಲಬುರಗಿ,ಜ 21: ರಾಜ್ಯದ ಎಲ್ಲ ನಾಲ್ಕು ಸಾರಿಗೆ ನಿಗಮಗಳ ನೌಕರರ ವೇತನ ಪರಿಷ್ಕರಣೆಗೆ ಒತ್ತಾಯಿಸಿ ಇದೇ ಜನವರಿ 24ರಂದು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಕಲಬುರಗಿ ಕೇಂದ್ರ ಕಚೇರಿ ಎದುರು ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗುತ್ತಿದೆ ಎಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿಯ ಕಲ್ಯಾಣ ಕರ್ನಾಟಕ ವಲಯ ಸಮಿತಿ ಅಧ್ಯಕ್ಷ ಚಂದ್ರಕಾಂತ ಗದ್ದಗಿ ತಿಳಿಸಿದರು.
ಇಲ್ಲಿನ ಪತ್ರಿಕಾ ಭವನದಲ್ಲಿ ಕರೆದಿದ್ದ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ರಾಜ್ಯದ ನಾಲ್ಕೂ ಸಾರಿಗೆ ನಿಗಮಗಳ ಎಲ್ಲ ವಿಭಾಗೀಯ ಕಚೇರಿಗಳ ಕಲಬುರಗಿ, ಹುಬ್ಬಳ್ಳಿ ಕೇಂದ್ರ ಕಚೇರಿ ಹಾಗೂ ಬೆಂಗಳೂರು ನಗರದಲ್ಲಿ ಕಾರ್ಯನಿರ್ವಹಿಸುತ್ತಿರುವ ಕೆ.ಎಸ್.ಆರ್.ಟಿ.ಸಿ, ಬಿಎಂಟಿಸಿ ನೌಕರರು ಅಂದು ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ ಬೆಳಗ್ಗೆ 10ರಿಂದ ಸಂಜೆ 5ರವರೆಗೆ ಧರಣಿ ಸತ್ಯಾಗ್ರಹ ನಡೆಸಲಿದ್ದಾರೆ ಎಂದು ಸಹ ಅವರು ಮಾಹಿತಿ ನೀಡಿದರು.
ಮೂಲ ವೇತನಕ್ಕೆ ಬಿಡಿಎ ವಿಲೀನಗೊಳಿಸಿ, ಪರಿಷ್ಕøತ ಮೂಲ ವೇತನದ ಶೇಕಡ 25ರಷ್ಟು ಹೆಚ್ಚಳ ಮಾಡಿ, ವೇತನ ಶ್ರೇಣಿಯನ್ನು ಸಿದ್ಧಪಡಿಸಬೇಕು. ಇದರ ಜೊತೆಗೆ ಇನ್ಕ್ರಿಮೆಂಟ್ ದರ ಪರಿಷ್ಕೃತ ಮೂಲ ವೇತನದ ಶೇ. 3ರಷ್ಟು ಇರುವಂತೆ ವ್ಯವಸ್ಥೆ ಮಾಡಬೇಕು ಎಂದು ಒತ್ತಾಯಿಸಿದರು.
ಆಯ್ಕೆ ಶ್ರೇಣಿ ಬಡ್ತಿಯನ್ನು ಸೇವಾವಧಿಯ ಪ್ರತಿ 10 ವರ್ಷಕ್ಕೊಮ್ಮೆ ನೀಡಬೇಕು. ಚಾಲಕರು, ನಿರ್ವಾಹಕರು, ತಾಂತ್ರಿಕ ಹಾಗೂ ಆಡಳಿತ ಸಿಬ್ಬಂದಿಗೂ ಮತ್ತು ಇತರ ಎಲ್ಲ ನೌಕರರಿಗೂ, ಹಾಲಿ ಕಾರ್ಯನಿರ್ವಹಿಸುತ್ತಿರುವ ಭಾಟಾ, ಮಾಸಿಕ/ದೈನಂದಿನ ಭತ್ಯೆಗಳನ್ನು ಐದು ಪಟ್ಟು ಹೆಚ್ಚಿಸಬೇಕು. ಜೊತೆಗೆ ಹೊಲಿಗೆ ಭತ್ಯೆ, ಶೂ, ಜೆರ್ಸಿ, ರೈನ್ ಕೋಟ್ ಇತ್ಯಾದಿಗಳಿಗೆ ಕೊಡಲಾಗುವ ಮೊತ್ತವನ್ನು ಮೂರು ಒಟ್ಟು ಹೆಚ್ಚಿಸಬೇಕು. ಎಲ್ಲ ನಿರ್ವಾಹಕರಿಗೂ ಕ್ಯಾಷಿಯರ್ ಗಳಿಗೆ ಸಮಾನವಾದ ಕ್ಯಾಷ್ ಅಲೋವೆನ್ಸ್ ನೀಡಬೇಕು ಎಂದು ಆಗ್ರಹಿಸಿದರು.
ಇ.ಎಸ್.ಐ ಮಾದರಿಯಲ್ಲಿ ಆಡಳಿತ ವರ್ಗದವರಿಂದ ನೌಕರರ ಮೂಲ ವೇತನದ ಶೇ.3.5 ಹಾಗೂ ನೌಕಕರಿಂದ ಶೇ.0.5ರಷ್ಟು ವಂತಿಗೆ ಸಂಗ್ರಹಿಸಿ ಟ್ರಸ್ಟ್ ರಚಿಸಿ ಅದರ ಮೂಲಕ ಸಾರಿಗೆ ನೌಕರರಿಗೆ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗಳಲ್ಲಿ ಉಚಿತ (ನಗದು ರಹಿತ) ಚಿಕಿತ್ಸೆಗೆ ಕ್ರಮ ಕೈಗೊಳ್ಳಬೇಕು. ಈ ಸೌಲಭ್ಯವನ್ನು ನಿವೃತ್ತ ಕಾರ್ಮಿಕರು ಮತ್ತು ಕುಟುಂಬದ ಸದಸ್ಯರಿಗೂ ಈ ವ್ಯವಸ್ಥೆಯಡಿ ಚಿಕಿತ್ಸೆ ದೊರೆಯುವಂತಾಗಬೇಕು ಎಂದು ತಾಕೀತು ಮಾಡಿದರು.
ರಾಜ್ಯದ ಬೆಂಗಳೂರು, ಮಂಗಳೂರು, ಹುಬ್ಬಳ್ಳಿ ಮತ್ತು ಕಲಬುರಗಿ ನಗರದಲ್ಲಿ ಸಾರಿಗೆ ನೌಕರರಿಗಾಗಿ ಪ್ರತ್ಯೇಕ ಆಸ್ಪತ್ರೆ ನಿರ್ಮಿಸಬೇಕು. ಎಲ್ಲ ಸಾರಿಗೆ ನೌಕರರಿಗೆ ಪ್ರತಿ ತಿಂಗಳು ಹೊರ ರೋಗಿ ವಿಭಾಗದಲ್ಲಿ ಚಿಕಿತ್ಸೆ ಪಡೆಯಲು ರೂ.2000 ನೀಡಬೇಕು. ಮುಷ್ಕರದ ಸಂದರ್ಭದಲ್ಲಿ ಸೇವೆಯಿಂದ ವಜಾಗೊಂಡ ನೌಕರರನ್ನು ಯಾವುದೇ ಷರತ್ತಿಲ್ಲದೆ ಮರು ನೇಮಕ ಮಾಡಿಕೊಳ್ಳಬೇಕು. ರಿಯಾಯಿತಿ ದರದಲ್ಲಿ ಕ್ಯಾಂಟೀನ್ ಸೌಲಭ್ಯ ನೀಡಬೇಕು. ಮಹಿಳಾ ನೌಕರರಿಗೆ ಘಟಕ, ಬಸ್ ನಿಲ್ದಾಣಗಳಲ್ಲಿ, ಟರ್ಮಿನಲ್ ಗಳಲ್ಲಿ ವಿಶ್ರಾಂತಿ ಕೊಠಡಿ, ಶೌಚಾಲಯ ವ್ಯವಸ್ಥೆ ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು ಎಂದು ಅವರು ಒತ್ತಾಯಿಸಿದರು.
ಸಿದ್ದಪ್ಪ ಪಾಲ್ಕಿ, ಶಿವಕಾಂತ ಮುನ್ನೊಳ್ಳಿ, ರಾಮಚಂದ್ರ ಹೈಯಾಳಕರ್, ಚಂದ್ರಕಾಂತ ಡೊಳ್ಳಿ, ಮಾರುತಿ ಶಾಖಾ ಇದ್ದರು.