ಜ.22 ಶ್ರೀರಾಮ ಪ್ರಾಣ ಪ್ರತಿಷ್ಠಾಪನೆ: ಮನೆ ಮನೆಗೆ ಸಂದೇಶ.. ಜ.1 ರಿಂದ ಅಯೋಧ್ಯೆಯ ಅಕ್ಷತೆ ವಿತರಣೆ


ಸಂಜೆವಾಣಿ ವಾರ್ತೆ
ಕೊಪ್ಪಳ. ಡಿ,23- ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ಶ್ರೀ ರಾಮಂದಿರ ಭಾರತದ ದೈವ ಮಂದಿರವಾಗಲಿದೆ.  ಶ್ರೀರಾಮನ ಜನ್ಮಸ್ಥಳದಲ್ಲಿ ರಾಮ ಮಂದಿರ ನಿರ್ಮಾಣವಾಗಬೇಕೆಂಬ ಹಿಂದೂಗಳ ಐದನೂರು ವರ್ಷದ ಕನಸು ಈಗ ನನಸಾಗುತ್ತಿದೆ.  ಜ.22 ರಂದು ಅಯೋಧ್ಯೆಯ ಭವ್ಯ ಮಂದಿರದಲ್ಲಿ ರಾಮನ ಪ್ರಾಣ ಪ್ರತಿಷ್ಟಾಪನೆ ನೇರವೇರುತ್ತಿರುವುದು ಪ್ರತಿಯೊಬ್ಬರಿಗೂ ಅಭಿಮಾನದ ಸಂಕೇತವಾಗಿದೆ.  ರಾಮ ಮಂದಿರ ನಿರ್ಮಾಣದಿಂದ ಸನಾತನ ಧರ್ಮದ ಶಕ್ತಿ ಸಾಬೀತಾಗಿದೆ.  ಮಂದಿರ ನಿರ್ಮಾಣ ಕಾರ್ಯದ ಸಂದೇಶ ಪ್ರತಿಯೊಂದು ಗ್ರಾಮಕ್ಕೂ ತಲುಪಬೇಕು.  ಮತ್ತು ಅಯೋಧ್ಯೆಯಿಂದ ಬಂದಿರುವ ಶ್ರದ್ಧತೆಯ ಅಕ್ಷತೆಯನ್ನು ಜಿಲ್ಲೆಯ ಪ್ರತಿ ಕುಟುಂಬಕ್ಕೂ ತಲುಪಿಸಲು ಹಮ್ಮಿಕೊಂಡಿರುವ ಅಕ್ಷತಾ ವಿತರಣೆ ಅಭಿಯಾನ ಯಶಸ್ವಿಯಾಗಲಿ ಎಂದು ಗಂಗಾವತಿ ತಾಲೂಕಿಹ ಹೆಬ್ಬಾಳ ಬೃಹನ್ಮಠದ ನಾಗಭೂಷಣ ಸ್ವಾಮಿಗಳು ಕರೆ ನೀಡಿದರು.
ಅಯೋಧ್ಯೆಯಿಂದ ಬಂದಿರುವ ಅಕ್ಷತೆಯನ್ನು ಜಿಲ್ಲೆಯ ಪ್ರತಿಯೊಂದು ಮನೆಗೆ ತಲುಪಿಸುವ ಯೋಜನೆ ವಿಶ್ವ ಹಿಂದುಬ ಪರಿಷತ್ ಹಮ್ಮಿಕೊಂಡಿದೆ.  ಜ.1 ರಿಂದ 15ರವರೆಗೆ ಜಿಲ್ಲೆಯಾದ್ಯಂತ ಮನೆ ಮನೆಗೆ ಅಕ್ಷತಾ ವಿತರಣೆ ಅಭಿಯಾನ ನಡೆಯಲಿದ್ದು, ಈ ನಿಮಿತ್ಯ ನಗರದ ಶ್ರೀ ರಾಘವೇಂದ್ರಸ್ವಾಮಿ ಕಲ್ಯಾಣ ಮಂಪಟದಲ್ಲಿ ಗುರುವಾರ ಆಯೋಜಿಸಿದ್ದ ಜಿಲ್ಲೆಯ ತಾಲೂಕಿನ ಕಾರ್ಯಕರ್ತರಿಗೆ  ಅಕ್ಷತಾ ಕಳಸ ವಿತರಣೆ ಮಾಡಿ ಅವರು ಮಾತನಾಡಿದರು.  ಸತ್ಯಕ್ಕೆ ಜಯ ನಿಶ್ಚಿತವಾಗಿ ದೊರೆಯುತ್ತದೆ.  ಅದಕ್ಕೆ ಪ್ರಮುಖ ಉದಾಹರಣೆ ಅಯೋಧ್ಯೆಯ ಶ್ರೀರಾಮಮಂದಿರ ನಿರ್ಮಾಣ.  ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಮಾಡಬೇಕೆಂಬುದು ಹಿಂದುಗಳ ಐದೂರು ವರ್ಷಗಳ ಕನಸಾಗಿತ್ತು.  ಇದಕ್ಕಾಗಿ ಸಾವಿರಾರು ಹೋರಾಟಗಳು ನಡೆದಿದ್ದು, ಎಷ್ಟೋ ಜನ ಪ್ರಾಣತ್ಯಾಗ ಮಾಡಿದ್ದಾರೆ.  ಕೊನೆಗೂ ಹಿಂದುಗಳಿಗೆ ಜಯ ಸಿಕ್ಕಿದೆ.  ಧರ್ಮವನ್ನು ನಾವು ರಕ್ಷಿಸಿದರೆ ಧರ್ಮ ನಮ್ಮನ್ನು ರಕ್ಷಿಸುತ್ತದೆ.  ಈಡೀ ದೇಶದಲ್ಲಿ ರಾಮನ ಹೆಸರಿನಲ್ಲಿ ಶಕ್ತಿ ಸಂಚಯವಾಗಿದೆ.  ಈ ರಾಮ ಮಂದಿರ ಕಟ್ಟುವುದಕ್ಕಾಗಿ ಈ ಹಿಂದೆ ನಡೆದ ಅಭಿಯಾನದಲ್ಲಿ ಪ್ರತಿಯೊಂದು ಮನೆಯಲ್ಲೂ ಶ್ರದ್ಧೆಯಿಂದ ದೇಣಿಗೆ ನೀಡಿದ್ದಾರೆ.  ದೇಣಿಗೆ ನೀಡಿದ ಪ್ರತಿಯೊಂದು ಕುಟುಂಬಕ್ಕೂ ಅಯೋಧ್ಯೆ ಅಕ್ಷತೆಯನ್ನು ತಲುಪಿಸುವ ಕೆಲಸ ಸಂಘ ಪರಿವಾರದ ಕಾರ್ಯಕರ್ತರು ಮಾಡುತ್ತಿರುವುದು ಅತ್ಯಂತ ಶ್ಲಾಘನೀಯವಾಗಿದೆ.  ನಿಮ್ಮ ಈ ಅಭಿಯಾನ ಕಾರ್ಯ ಯಶಸ್ವಿಯಾಗಲಿ ಎಂದು ಶ್ರೀಗಳು ಆಶೀರ್ವದಿಸಿದರು.  ಎಂದರು.
ಭಾಗ್ಯನಗರದ ಶಂಕರಾಚಾರ್ಯ ಮಠದ ಶಿವಾನಂದ ಭಾರತೀ ಸ್ವಾಮಿಗಳು ಮಾತನಾಡಿ, ಅಯೋಧ್ಯೆಯಿಂದ ಬಂದಿರುವ ಈ ಅಕ್ಷತೆ ಪ್ರತಿಯೊಂದು ಮನೆಯಲ್ಲಿ ಅಕ್ಷಂಬಾರವಾಗಲಿ.  ಶ್ರೀರಾಮ ಜಗತ್ತಿಗೆ ಆದರ್ಶ ದೈವಿ ಪುರಷನಾಗಿದ್ದ.  ತಾಯಿ ಮತ್ತು ತಾಯ್ನಾಡು ಸ್ವರ್ಗಕ್ಕಿಂತಲೂ ಶ್ರೇಷ್ಟ ಎಂದು ಸಂದೇಶ ಸಾರಿದ ರಾಮನ ಕಾರ್ಯ ಮಾಡುವುದು ಭಾಗ್ಯದ ಕೆಲಸವಾಗಿದೆ.  ಅಕ್ಷತೆಯ ರೂಪದಲ್ಲಿ ನಮ್ಮ ಜಿಲ್ಲೆಯ ಪ್ರತಿಯೊಂದು ಮನೆಯಲ್ಲಿ ಅಯೋಧ್ಯೆಯ ಶ್ರೀರಾಮನ ಪ್ರವೇಶ ಮಾಡಲಿ ಎಂದು ಅನುಗ್ರಹಿಸಿದರು.
ಅಕ್ಷತಾ ವಿತರಣೆ ಅಭಿಯಾನದ ಜಿಲ್ಲಾ ಸಹ ಸಂಯೋಜಕ ವಸಂತ ಪೂಜಾರ ಮಾತನಾಡಿ, ಅಯೋಧ್ಯೆಯಲ್ಲಿ ರಾಮ ಮಂದಿರದಲ್ಲಿ ರಾಮನ ಪ್ರತಿಷ್ಟಾಪನೆ ನಾವು ಕಣ್ಣು ತುಂಬಿಸಿಕೊಳ್ಳುತ್ತಿರುವುದು ನಮ್ಮೆಲ್ಲರ ಭಾಗ್ಯವಾಗಿದೆ.   ಮಂದಿರ ನಿರ್ಮಾಣದ ಹೋರಾಟ ಐದು ನೂರು ವರ್ಷಗಳ ಇತಿಹಾಸವಾಗಿದೆ.  ಇದಕ್ಕಾಗಿ ಸಾವಿರಾರು ಜನ ಪ್ರಾಣ ಕಳೆದುಕೊಂಡಿದ್ದಾರೆ.  ಮಂದಿರ ಅಲ್ಲೆ ಕಟ್ಟುವೆವೂ ಎಂಬ ಸಂಕಲ್ಪ ಈಗ ಈಡೇರಿದೆ.  ಬರುವ ಜ.22 ರಂದು ಅಯೋಧ್ಯೆಯ ರಾಮ ಜನ್ಮಭೂಮಿಯಲ್ಲಿ ಬಾಲರಾಮನ ಪ್ರಾಣ ಪ್ರತಿಷ್ಟಾಪನೆ ನಡೆಯಲಿದೆ.  ಈ ಮಂದಿರ ನಿರ್ಮಾಣಕ್ಕೆ ದೇಶದ ಪ್ರತಿಯೊಂದು ಗ್ರಾಮದ ಪ್ರತಿಯೊಂದು ಹಿಂದು ಕುಟುಂಬ ಕೈ ಜೋಡಿಸಿದೆ.  ಎರಡು ವರ್ಷಗಳ ಹಿಂದೆ ಮನೆ ಮನೆಯಲ್ಲಿ ದೇಣಿಗೆ ನೀಡಿದ್ದಾರೆ.  ಅವರೆಲ್ಲರಿಗೂ ಮಂದಿರ ನಿರ್ಮಾಣದ ಕಾರ್ಯದ ಸಂದೇಶ ನಾವು ತಿಳಿಸಬೇಕಿದೆ.  ಅಯೋಧ್ಯೆಯಿಂದ ಪವಿತ್ರ ಅಕ್ಷತೆಯನ್ನು ಜ.1 ರಿಂದ ಜಿಲ್ಲೆಯ ಎಲ್ಲಾ ಗ್ರಾಮಗಳ ಮತ್ತು ಎಲ್ಲಾ ಮನೆಗಳಿಗೆ ಶ್ರದ್ಧೆಯಿಂದ ತಲುಪಿಸುವ ಕೆಲಸ ಮಾಡಬೇಕಿದೆ.  ಹೀಗಾಗಿ ಇಂದು ಎಲ್ಲಾ ತಾಲೂಕುಗಳಿಗೆ ಈ ಅಕ್ಷತೆಯನ್ನು ವಿತರಣೆ ಮಾಡಲಾಗಿದೆ.  ಪರಿವಾರ ಸಂಘಟನೆಯ ಪ್ರತಿಯೊಬ್ಬ ಕಾರ್ಯಕರ್ತರು ಬರುವ ಜ.1 ರಿಂದ 15ರೊಳಗೆ ಎಲ್ಲಾ ಮನೆಗಳಿಗೂ ಅಕ್ಷತೆಯನ್ನು ಖುದ್ದು ಭೇಟಿ ನೀಡಿ ತಲುಪಿಸಬೇಕು ಎಂದರು.  ಈ ಹಿಂದೆ ನಡೆದ ಅಯೋಧ್ಯೆ ಹೋರಾಟದ ಕರಸೇವೆಯಲ್ಲಿ ಜಿಲ್ಲೆಯಿಂದ ಅನೇಕರು ಭಾಗವಹಿಸಿದ್ದರು.  ಅವರಲ್ಲಿ ಕೆಲವರು ಅನುಪಸ್ಥರಿದ್ದ ಕಾರಣ ವಸಂತ ಪೂಜಾರ, ಅಪ್ಪಣ್ಣ ಪದಕಿ, ರಾಘವೇಂದ್ರ ದೇಸಾಯಿ, ಕೃಷ್ಣಾ ಸೋರಟೂರು, ನರಸಿಂಹ ಹುದ್ದಾರ, ರಾಘವೇಂದ್ರ ಪೊತೇದಾರ ಅವರನ್ನು ಶ್ರೀಗಳು ಸನ್ಮಾನಿಸಿ ಆಶೀರ್ವದಿಸಿದರು.
ನಂತರ ಜಿಲ್ಲೆಯ ಎಲ್ಲಾ ತಾಲೂಕಿನ ಪ್ರಮುಖರಿಗೆ ಅಯೋಧ್ಯೆಯಿಂದ ಬಂದ ಅಕ್ಷತೆಯ ಕಳಸವನ್ನು ಸ್ವಾಮಿಗಳು ವಿತರಣೆ ಮಾಡಿದರು.  ಆರ್‍ಎಸ್‍ಎಸ್ ವಿಭಾಗ ಕಾರ್ಯವಾಹ ಕೇಶವ ಅಭಿಯಾನ ಮಾಹಿತಿ ನೀಡಿದರು.  ಹಿರಿಯ ಪ್ರಚಾರ ರಾಜಶೇಖರ ಅಯೋಧ್ಯೆಯ ರಾಮ ಮಂದಿರ ನಿರ್ಮಾಣಕ್ಕಾಗಿ ನಡೆದ ಹೋರಾಟ ಮತ್ತು ಈಗ ಅಯೋಧ್ಯೆಯ ಅಕ್ಷತೆಯನ್ನು ಮನೆ ಮನೆಗೆ ತಲುಪಿಸುವ ರಾಷ್ಟ್ರ ಕಾರ್ಯದಲ್ಲಿ ಪ್ರತಿಯೊಬ್ಬರು ತೊಡಗುವಂತೆ ಕರೆ ನೀಡಿದರು.
    ಆರ್‍ಎಸ್‍ಎಸ್ ವಿಭಾಗ ಸಂಘ ಚಾಲಕ ಬಸವರಾಜ ಡಂಬಳ, ವಿಹೆಚ್‍ಪಿ ಪ್ರಾಂತ ಸಂಯೋಜಕಿ ವಿಜಯಲಕ್ಷ್ಮೀ ಇದ್ದರು.  ಗೋವಿಂದಾಚಾರ ಅವವೇಧಘೊಷದೊಂದಿಗೆ ಪ್ರಾರಂಭವಾದ ಅಕ್ಷತೆ ವಿತರಣೆ ಕಾರ್ಯಕ್ರಮದಲ್ಲಿ ಸೇವಾ ಭಾರತಿ ಪ್ರಮುಖರಾದ ಮಹಾಲಕ್ಷ್ಮೀ ಕಂದಾರಿ ನಿರ್ವಹಿಸಿದರು.  ಜಿಲ್ಲಾ ಸಂಯೋಜಕ ಅಯ್ಯನಗೌಡ ಹೇರೂರು ವಂದಿಸಿದರು.  ಸುಪ್ರೀಯಾ ಹುನುಗುಂದ ಪ್ರಾರ್ಥಿಸಿದರು.  ಸಂಘ ಪರಿವಾರದ ಕಾರ್ಯಕರ್ತರು, ಪ್ರಮುಖರು ಇದ್ದರು.
ಬಾಕ್ಸ್:
ಜ.1 ರಿಂದ 15 ದಿನ ಮನೆ ಮನೆಗೆ ಅಯೋಧ್ಯೆ ಅಕ್ಷತೆ ವಿತರಣೆ
ಶ್ರೀ ರಾಮಮಂದಿರ ನಿರ್ಮಾಣಕ್ಕಾಗಿ ದೇಶದ ಪ್ರತಿಯೊಬ್ಬರು ಸಂಕಲ್ಪ ಮಾಡಿ ತಮ್ಮ ತನು, ಮನ, ಧನವನ್ನು ಸಮರ್ಪಿಸಿದ್ದಾರೆ.  ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣದ ಕೆಲಸ ರಾಷ್ಟ್ರದ ಕೆಲಸವಾಗಿದೆ.  ರಾಮ ಮಂದಿರ ನಿರ್ಮಾಣಕ್ಕಾಗಿ ಈ ಹಿಂದೆ ಪ್ರತಿಯೊಂದು ಮನೆಯಿಂದ ಶ್ರದ್ಧಾ ನಿಧಿ ಅರ್ಪಿಸಿದ್ದಾರೆ.  ಪ್ರತಿಯೊಬ್ಬ ಹಿಂದೂಗಳ ಸಂಕಲ್ಪದಂತೆ ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣವಾಗಿದೆ.  ಜ.22 ಮಂದಿರದಲ್ಲಿ ಶ್ರೀರಾಮನ ಪ್ರಾಣ ಪ್ರತಿಷ್ಟಾಪನೆ ಕಾರ್ಯ ನೆರವೇರಲಿದೆ.  ಹೀಗಾಗಿ ಅಯೋಧ್ಯೆಯಿಂದ ಬಂದಿರುವ ಅಕ್ಷತೆಯನ್ನು ಪ್ರತಿಯೊಂದು ಮನೆಗೂ ತಲುಪಿಸುವ ನಿಟ್ಟಿನಲ್ಲಿ ಎಲ್ಲರು ಕೆಲಸ ಮಾಡಲಿದ್ದು, ಜ.1 ರಿಂದ ಜ.15ರವರೆಗೆ ಕೊಪ್ಪಳ ಜಿಲ್ಲೆಯ ಎಲ್ಲಾ ಗ್ರಾಮಗಳ ಮನೆಗೆ ಅಕ್ಷತೆ ತಲುಪಿಸಲು ಸಂಘ ಪರಿವಾರ ಸೇರಿದಂತೆ ಇನ್ನಿತರ ರಾಮನ ಭಕ್ತರು ಅಭಿಯಾನದಲ್ಲಿ ಪಾಲ್ಗೊಳಲಿದ್ದಾರೆ.  ಈ ನಿಮಿತ್ಯ ಇಂದು ಅಯೋಧ್ಯೆಯಿಂದ ಬಂದಿರುವ ಅಕ್ಷತೆಯನ್ನು ಎಲ್ಲಾ ತಾಲೂಕಿಗೆ ಪೂಜ್ಯರ ಅಮೃತ ಹಸ್ತದಿಂದ ವಿತರಿಸಿ ಅಭಿಯಾನ ಯಶಸ್ವಿಗೆ ಅನುಗ್ರಹಿಸಿದ್ದಾರೆ.
ಕೆಶವ ಹೊಸಪೇಟೆ, ಆರ್‍ಎಸ್‍ಎಸ್ ಬಳ್ಳಾರಿ ವಿಭಾಗ ಕಾರ್ಯವಾಹ