ಜ.22ರಿಂದ ಶ್ರೀರಾಮ ರಂಗ ಸಂಭ್ರಮ,


ಸಂಜೆವಾಣಿ ವಾರ್ತೆ
ಬಳ್ಳಾರಿ, ಜ.19:  ಇತಿಹಾಸದ ಪುಟದಲ್ಲಿ ಸುವರ್ಣಾಕ್ಷರಗಳಿಂದ ದಾಖಲಾಗಲಿರುವ ಅಯೋಧ್ಯೆಯ ಶ್ರೀರಾಮ ಮಂದಿರದ ಉದ್ಘಾಟನೆ. ಅದರ ಸಂಭ್ರಮೋತ್ಸವಕ್ಕಾಗಿ ಬಳ್ಳಾರಿಯಲ್ಲೂ “ಶ್ರೀರಾಮ ರಂಗ ಸಂಭ್ರಮ” ಸಾಂಸ್ಕೃತಿಕವಾಗಿ ಆಯೋಜಿಸಲಾಗಿದೆ. ಜನವರಿ 22, 23 ಮತ್ತು 24ರಂದು ನಗರದ ರಾಜಕುಮಾರ ರಸ್ತೆಯಲ್ಲಿರುವ ‘ರಾಘವ ಕಲಾಮಂದಿರ’ದಲ್ಲಿ 3 ದಿನಗಳ ಕಾಲ ನಾಟಕ, ಬಯಲಾಟ, ತೊಗಲುಗೊಂಬೆ ಆಟ, ಸಂಗೀತ, ನೃತ್ಯ, ಉಪನ್ಯಾಸಗಳು ಶ್ರೀರಾಮನ ದರ್ಶನ ಮಾಡಿಸಲಿವೆ ಎಂದು .ರಂಗತೋರಣದ ಕಾರ್ಯದರ್ಶಿ ಪ್ರಭುದೇವ ಕಪ್ಪಗಲ್ಲು, ಕರ್ನಾಟಕ ಬಯಲಾಟ ಅಕಾಡೆಮಿಯ ಮಾಜಿ ಸದಸ್ಯ ಹೆಚ್.ತಿಪ್ಪೇಸ್ವಾಮಿ ಹಾಗೂ ಶ್ರೀರಾಮ ರಂಗ ಸಂಭ್ರಮದ ಸಂಚಾಲಕ ಅಡವಿಸ್ವಾಮಿ ಪತ್ರಿಕಾಗೋಷ್ಠಿಯಲ್ಲಿಂದು ತಿಳಿಸಿದರು.
22 ರಂದು ಸಂಜೆ 5.30ಕ್ಕೆ : ಶ್ರೀರಾಮ ರಂಗ ಸಂಭ್ರಮದ ಉದ್ಘಾಟನಾ ಸಮಾರಂಭ ಜರುಗಲಿದೆ ಈ ಸಂದರ್ಭದಲ್ಲಿ ಸಿರಿಗೇರಿಯ ಧಾತ್ರಿ ರಂಗಸಂಸ್ಥೆಯ ಕಲಾವಿದರು ಹೆಚ್.ತಿಪ್ಪೇಸ್ವಾಮಿ ನಿರ್ದೇಶನದ ರಾಮ ರಾವಣ ಯುದ್ಧ ಬಯಲಾಟವನ್ನು ಪ್ರಸ್ತುತಪಡಿಸಲಿದ್ದಾರೆ. ಅದಕ್ಕೂ ಮುನ್ನ ಶ್ರೀಮತಿ ಪದ್ಮಾವತಿ ಹಾಗೂ ಕುಮಾರಿ ಪ್ರಕೃತಿ ರೆಡ್ಡಿರವರು ಶ್ರೀರಾಮನ ಕುರಿತ ಗೀತ ಗಾಯನವನ್ನು, ಶ್ರೀಮತಿ ಸುನಿತ ಕೊಳಗಲ್ಲು ರವರು ವೀಣಾ ವಾದನವನ್ನು ನಡೆಸಿಕೊಡಲಿದ್ದಾರೆ.
22 ರಂದು ಸಂಜೆ 5.30ಕ್ಕೆ :  ಧಾರವಾಡದ ವಕೀಲರಾದ ಅನೂಪ್ ದೇಶಪಾಂಡೆ ರವರು ಶ್ರೀರಾಮನ ಆದರ್ಶಗಳ ಕುರಿತಂತೆ ಉಪನ್ಯಾಸ ನೀಡಲಿದ್ದಾರೆ. ನಂತರ ವಿಶ್ವ ವಿಖ್ಯಾತ ಬೆಳಗಲ್ಲು ವೀರಣ್ಣನವರ ರಾಮಾಂಜಿನೇಯ ತೊಗಲುಗೊಂಬೆ ಮೇಳವು ಲಂಕಾ ದಹನ ತೊಗಲುಗೊಂಬೆ ಆಟವನ್ನು ಪ್ರಸ್ತುತಪಡಿಸಲಿದ್ದಾರೆ. ಇದಕ್ಕೂ ಮುನ್ನ ಬಳ್ಳಾರಿಯ ಸುಪ್ರಸಿದ್ಧ ನೃತ್ಯ ಗುರು ಡಾ. ಚಾರುಲತಾ ಅವರ ಶ್ರೀನಿಧಿ ಆಟ್ರ್ಸ್ ತಂಡವು ಅಯೋಧ್ಯ ರಾಮ ಎಂಬ ನೃತ್ಯ ರೂಪಕವನ್ನು ಪ್ರದರ್ಶಿಸಲಿದ್ದಾರೆ.
23 ರಂದು ಸಂಜೆ 5.30ಕ್ಕೆ  ಹೈದ್ರಾಬಾದಿನ ಸುಪ್ರಸಿದ್ಧ ಸುರಭಿ ನಾಟ್ಯ ಮಂಡಳಿಯವರು ಶ್ರೀರಾಮ ರಾಜ್ಯಂ ತೆಲುಗು ನಾಟಕವನ್ನು ಪ್ರದರ್ಶಿಸಲಿದ್ದಾರೆ. ಅದಕ್ಕೂ ಮುನ್ನ ಬಳ್ಳಾರಿಯ ಮೂನ್ ವಾಕರ್ಸ್ ಡ್ಯಾನ್ಸ್ ಅಕಾಡೆಮಿಯ ಸದಸ್ಯರು ಶ್ರೀ ರಾಮನ ಕುರಿತಂತೆ ಸಾಮಯಿಕ ನೃತ್ಯವನ್ನು ಪ್ರದರ್ಶಿಸಲಿದ್ದಾರೆ ಎಂದು ತಿಳಿಸಿದರು..