ಜ. 22ರಂದು 108 ದೇವಸ್ಥಾನಗಳಲ್ಲಿ ಶ್ರೀರಾಮ ದೀಪೋತ್ಸವ

ಕಲಬುರಗಿ:ಜ.14: ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ಭಾರತದ ಸಂಸ್ಕøತಿಯಲ್ಲಿನ ಸಮ್ಮಿಲನವಾಗಿರುವ ಜನ್ಮಭೂಮಿಯಲ್ಲಿ ಶ್ರೀರಾಮನ ಪ್ರತಿಷ್ಠಾಪನೆಯ ಶತಮಾನದ ಕನಸು ಈಡೇರುತ್ತಿದೆ. ಆ ಹಿನ್ನೆಲೆಯಲ್ಲಿ ಅಯೋಧ್ಯೆಯಲ್ಲಿ ಶ್ರೀರಾಮನ ಭವ್ಯ ಮಂದಿರದಲ್ಲಿ ಶ್ರೀ ಬಾಲರಾಮನ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಜರುಗಲಿದ್ದು, ಅದೇ ಸಂದರ್ಭದಲ್ಲಿ ಜಿಲ್ಲೆಯಲ್ಲಿನ 108 ದೇವಸ್ಥಾನಗಳಲ್ಲಿ ಶ್ರೀರಾಮ್ ದೀಪೋತ್ಸವ ಹಮ್ಮಿಕೊಳ್ಳಲಾಗಿದೆ ಎಂದು ರಾಮ ನವಮಿ ಉತ್ಸವ ಸಮಿತಿ ಅಧ್ಯಕ್ಷ ರಾಜು ಭವಾನಿ ಅವರು ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶ್ರೀ ಬಾಲರಾಮನ ಪ್ರಾಣ ಪ್ರತಿಷ್ಠಾಪನೆಯ ಶುಭ ಗಳಿಗೆಯ ಸಂಘ್ರಮವನ್ನು ಇಮ್ಮಡಿಗೊಳಿಸಲು ಸಮಿತಿ ನಿರ್ಧರಿಸಿದೆ. ದೇಶದ ಎಲ್ಲೆಡೆ ಪ್ರಾಣ ಪ್ರತಿಷ್ಠಾಪನೆಯಂದು ದೀಪ ಬೆಳಗಿಸಲು ಎಲ್ಲ ಹಿಂದೂಗಳು ನಿರ್ಧರಿಸಿದ್ದು, ಅದರ ಭಾಗವಾಗಿ ಜಿಲ್ಲೆಯಲ್ಲಿ ಒಟ್ಟು 108 ದೇವಸ್ಥಾನಗಳಲ್ಲಿ ದೀಪೋತ್ಸವ ಏರ್ಪಡಿಸಲಾಗಿದೆ ಎಂದರು.
ಪ್ರತಿ ದೇವಸ್ಥಾನಕ್ಕೆ 1008 ಹಣತೆಗಳಂತೆ ಒಟ್ಟು 1,08,864 ಹಣತೆಗಳನ್ನು ವಿತರಿಸಲು ನಿರ್ಧರಿಸಲಾಗಿದೆ. ಜನವರಿ 15ರಿಂದ ಜನವರಿ 21ರವರೆಗೆ ಹಣತೆಗಳನ್ನು ಪ್ರತಿ ದೇವಸ್ಥಾನಕ್ಕೆ ಹೋಗಿ ವಿತರಣೆ ಮಾಡಿ ದೀಪ ಬೆಳಗಿ ಪ್ರಾಣ ಪ್ರತಿಷ್ಠಾಪನೆಯ ವೈಭವವನ್ನು ಶೃದ್ಧೆಯಿಂದ ಆಚರಿಸಲಾಗುವುದು ಎಂದು ಅವರು ಹೇಳಿದರು.
ಜನವರಿ 22ರಂದು ಸಂಜೆ 5-30ಕ್ಕೆ ನಗರದ ಶ್ರೀ ಶರಣಬಸವೇಶ್ವರ್ ದೇವಸ್ಥಾನದ ಆವರಣದಲ್ಲಿ ಭವ್ಯವಾದ ಶ್ರೀ ರಾಮ ದೀಪೋತ್ಸವ ಹಮ್ಮಿಕೊಳ್ಳಲಾಗಿದೆ. ಸುಮಾರು 15 ಅಡಿಯ ಬೃಹತ್ ಶ್ರೀರಾಮನ ಮೂರ್ತಿಗೆ ಶ್ರೀ ಶರಣಬಸವೇಶ್ವರ್ ಮಹಾದಾಸೋಹ ಸಂಸ್ಥಾನದ ಪೀಠಾಧಿಪತಿ ಚಿರಂಜೀವಿ ದೊಡ್ಡಪ್ಪ ಅಪ್ಪ ಅವರು ಪೂಜೆ ಸಲ್ಲಿಸುವರು. ಅನೇಕ ಮಠಾಧೀಶರು, ಗಣ್ಯರು ಉಪಸ್ಥಿತರಿರುವರು ಎಂದು ಅವರು ತಿಳಿಸಿದರು.
ನಗರ ಹಾಗೂ ಜಿಲ್ಲೆಯ ಎಲ್ಲ ರಾಮಭಕ್ತರು ಆಯಾ ದೇವಸ್ಥಾನಗಳಲ್ಲಿ ದೀಪಗಳನ್ನು ಬೆಳಗಿ ರಾಷ್ಟ್ರದ ಒಳಿತಿಗಾಗಿ ಪ್ರಾರ್ಥಿಸಬೇಕು ಹಾಗೂ ಶ್ರೀ ರಾಮೋತ್ಸವದ ಪವಿತ್ರ ಕಾರ್ಯಕ್ಕೆ ಕೈ ಜೋಡಿಸಿ ಶ್ರೀರಾಮನ ಕೃಪೆಗೆ ಪಾತ್ರರಾಗಬೇಕು ಎಂದು ಅವರು ಕೋರಿದರು. ಸುದ್ದಿಗೋಷ್ಠಿಯಲ್ಲಿ ದೀಪಕ್ ಬಲ್ದವಾ, ಗಿರೀಶಗೌಡ ಇನಾಂದಾರ್, ರಾಜು ಜೈನ್, ಉತ್ತಮ್ ಪುರೋಹಿತ್, ಅಶ್ವತ್ಥ್ ಮಾಡ್ಯಾಳಕರ್, ಶಿವಾ ಗುತ್ತೇದಾರ್ ಮುಂತಾದವರು ಉಪಸ್ಥಿತರಿದ್ದರು.