ಜ. 22ಕ್ಕೆ ಅಂತಿಮ ಮತದಾರರ ಪಟ್ಟಿ ಪ್ರಕಟ

ಕಲಬುರಗಿ:ಡಿ.28: ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಮತದಾರರ ಪಟ್ಟಿ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ 01-01-2024ಕ್ಕೆ ಸಂಬಂಧಿಸಿದಂತೆ 2024ರ ಜನವರಿ 5ರ ಬದಲಾಗಿ ಜನವರಿ 22ಕ್ಕೆ ಅಂತಿಮ ಮತದಾರರ ಪಟ್ಟಿ ಪ್ರಕಟಿಸಲಾಗುತ್ತದೆ ಎಂದು ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಚುನಾವಣಾಧಿಕಾರಿ ಬಿ.ಫೌಜಿಯಾ ತರನ್ನುಮ್ ತಿಳಿಸಿದ್ದಾರೆ.
ಈ ಹಿಂದೆ ಮತದಾರರ ಪಟ್ಟಿ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ ವೇಳಾಪಟ್ಟಿಯಂತೆ ಕ್ಲೇಮು ಅರ್ಜಿಗಳನ್ನು ಡಿಸೆಂಬರ್ 26 ರೊಳಗೆ ವಿಲೇವಾರಿ ಮಾಡಿ ಜನವರಿ 5 ರಂದು ಅಂತಿಮ ಮತದಾರರ ಪಟ್ಟಿ ಪ್ರಕಟಿಸಲು ನಿರ್ಧರಿಸಲಾಗಿತ್ತು. ಭಾರತ ಚುನಾವಣಾ ಆಯೋಗವು ಸದರಿ ವೇಳಾಪಟ್ಟಿಯನ್ನು ಪರಿಷ್ಕರಣೆ ಮಾಡಿದ್ದು, ಅದರಂತೆ ಕ್ಲೇಮು ಅರ್ಜಿಗಳನ್ನು ಜನವರಿ 12 ರೊಳಗೆ ವಿಲೇವಾರಿ ಮಾಡಿ ಜನವರಿ 22ಕ್ಕೆ ಅಂತಿಮ ಮತದಾರರ ಪಟ್ಟಿ ಪ್ರಕಟಿಸಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.