ಜ.21 ರಂದು ಪುರಂದರದಾಸರ ಆರಾಧನೋತ್ಸವ


ವಿಜಯನಗರ(ಹೊಸಪೇಟೆ),ಜ.10: ವಿಜಯನಗರ ಜಿಲ್ಲಾ ಆಡಳಿತದಿಂದ ಜನವರಿ 21 ರಂದು ಹಂಪಿಯ ವಿಜಯವಿಠಲ ದೇವಸ್ಥಾನದ ಹತ್ತಿರವಿರುವ ಶಿವಮಂಟಪದ ಪ್ರಾಂಗಣದಲ್ಲಿ ಪುರಂದರದಾಸರ ಆರಾಧನೋತ್ಸವದಸಂಜೆಯ ವೇದಿಕೆ ಕಾರ್ಯಕ್ರಮ ನಡೆಯಲಿದೆ ಎಂದು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ತಿಳಿಸಿದರು.
 ಅವರು ಸೋಮವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಪುರಂದರದಾಸರ ಆರಾಧನೋತ್ಸವ ಕಾರ್ಯಕ್ರಮದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಈ ವರ್ಷ ಪುರಂದರದಾಸರ ಆರಾಧನೋತ್ಸವ ಕಾರ್ಯಕ್ರಮದಲ್ಲಿ ರಾಜ್ಯದ ಹಿರಿಯ ಕಲಾವಿದರುಗಳು ಭಾಗವಹಿಸಲಿದ್ದಾರೆ ಎಂದರು.
ಮೆರವಣಿಗೆ; ಪುರಂದರದಾಸರ ಆರಾಧನೋತ್ಸವವುಅಮವಾಸ್ಯೆ ದಿನವಾದ ಜ.21 ರಂದು ಬೆಳಗ್ಗೆ ಪುರಂದರ ಮಂಟಪದಲ್ಲಿ ಪೂಜೆಯ ಮೂಲಕ ನಡೆಯಲಿದ್ದು ನಂತರ ವಿವಿಧ ಕಲಾತಂಡಗಳ ಮೂಲಕ ಮೆರವಣಿಗೆ ನಡೆಯಲಿದ್ದು ಸಂಜೆಯವರೆಗೆ ವಿವಿಧ ಕಾರ್ಯಕ್ರಮಗಳು ನಡೆಯಲಿವೆ. ಸಂಜೆಯ ಸಾಂಸ್ಕೃತಿಕ ಕಾರ್ಯಕ್ರಮಗಳು ಈ ವರ್ಷ ಶಿವಮಂಟಪದ ಪ್ರಾಂಗಣದಲ್ಲಿ ನಡೆಯಲಿವೆ. ವೇದಿಕೆ ಕಾರ್ಯಕ್ರಮ ಬದಲಾದ ಸ್ಥಳದಲ್ಲಿ ನಡೆಯುವ ಬಗ್ಗೆ ಎಲ್ಲಾ ಪುರಂದರ ಆರಾಧಕರಿಗೆ ಮತ್ತು ಸಂಘಟಕರಿಗೆ ತಿಳಿಸಲು ಸೂಚನೆ ನೀಡಿದರು.
ಶಿಷ್ಟಾಚಾರದಂತೆ ಕಾರ್ಯಕ್ರಮ; ಆರಾಧನೋತ್ಸವ ಸರ್ಕಾರದಿಂದ ಆಚರಿಸಲಾಗುತ್ತಿರುವುದರಿಂದ ಶಿಷ್ಟಾಚಾರದಂತೆ ಕಾರ್ಯಕ್ರಮ ನಡೆಯಲಿದ್ದು ಜಿಲ್ಲಾ ಉಸ್ತುವಾರಿ ಸಚಿವರು ಸೇರಿದಂತೆ ಎಲ್ಲಾ ಜನಪ್ರತಿನಿಧಿಗಳನ್ನು ಆಮಂತ್ರಿಸಲು ಕ್ರಮ ಕೈಗೊಳ್ಳುವಂತೆ ತಿಳಿಸಿ ಖ್ಯಾತ ಕಲಾವಿದರು ಈ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿರುವುದರಿಂದ ಸಾರ್ವಜನಿಕರು ಮತ್ತು ಸಂಗೀತ ಅಸಕ್ತರು ಭಾಗವಹಿಸಲು ಮುಕ್ತ ಅವಕಾಶ ಇರುತ್ತದೆ ಎಂದರು.
 ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಪ್ರಕಾಶ್, ಸಹಾಯಕ ಆಯುಕ್ತರಾದ ಸಿದ್ರಾಮೇಶ್ವರ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.