ಜ. 19 ಮೋದಿ ರಾಜ್ಯಕ್ಕೆ ಭೇಟಿ

ಬೆಂಗಳೂರು, ಜ. ೧೬- ಪ್ರಧಾನಿ ಮೋದಿ ಅವರು ಈ ತಿಂಗಳ ೧೯ ರಂದು ರಾಜ್ಯಕ್ಕೆ ಭೇಟಿ ನೀಡಲಿದ್ದಾರೆ. ಈ ಹಿನ್ನೆಲೆಯಲ್ಲಿ ಜ. ೧೯ ರಂದು ನಡೆಯಬೇಕಿದ್ದ ಬಿಜೆಪಿ ಕಾರ್ಯಕಾರಿಣಿಯನ್ನು ಮುಂದೂಡಲಾಗಿದೆ.
ಪ್ರಧಾನಿ ಮೋದಿ ಅವರು ಈ ತಿಂಗಳ ೧೯ ರಂದು ರಾಜ್ಯಕ್ಕೆ ಭೇಟಿ ನೀಡಬಹುದು ಎಂಬ ಸುಳಿವಿನ ಹಿನ್ನೆಲೆಯಲ್ಲಿ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಇಂದು ಪಕ್ಷದ ಕಚೇರಿಯಲ್ಲಿ ಪ್ರಮುಖ ಪದಾಧಿಕಾರಿಗಳ ಜತೆ ಸಭೆ ನಡೆಸಿ ಪ್ರಧಾನಿ ಆಗಮನ, ಅದ್ಧೂರಿ ಸ್ವಾಗತ ನೀಡುವ ಬಗ್ಗೆ ಚರ್ಚೆ ನಡೆಸಿದರು.
ಪ್ರಧಾನಿ ನರೇಂದ್ರಮೋದಿ ಅವರು ಜ. ೧೯ ರಂದು ರಾಜ್ಯಕ್ಕೆ ಭೇಟಿ ನೀಡಬಹುದು ಎಂಬ ಸಂದೇಶ ಪ್ರಧಾನಿ ಕಾರ್ಯಾಲಯದಿಂದ ರಾಜ್ಯ ಬಿಜೆಪಿ ಅಧ್ಯಕ್ಷ ವಿಜಯೇಂದ್ರ ರವರಿಗೆ ಬಂದಿದೆಯಾದರೂ ಭೇಟಿ ಬಗ್ಗೆ ಇನ್ನೂ ಖಚಿತವಾಗಿಲ್ಲ. ಹಾಗಾಗಿ ಬಿಜೆಪಿ ನಾಯಕರಿಗೂ ಪ್ರಧಾನಿ ಭೇಟಿ ಬಗ್ಗೆ ಇನ್ನೂ ಯಾವುದೇ ಸ್ಪಷ್ಟತೆ ಸಿಕ್ಕಿಲ್ಲ.
ಪ್ರಧಾನಿ ಅವರು ರಾಜ್ಯಕ್ಕೆ ಜ. ೧೯ ರಂದು ಭೇಟಿ ನೀಡಬಹುದು ಎಂಬ ವರದಿಗಳ ಹಿನ್ನೆಲೆಯಲ್ಲಿ ಜ. ೧೯ ರಂದೇ ನಡೆಯಬೇಕಿದ್ದ ರಾಜ್ಯ ಬಿಜೆಪಿ ಕಾರ್ಯಕಾರಿಣಿಯನ್ನು ಮುಂದಕ್ಕೆ ಹಾಕಲಾಗಿದೆ.
ಈ ಬಗ್ಗೆ ಪಕ್ಷದ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಪಿ. ರಾಜೀವ್, ಪ್ರಧಾನಿಗಳು ರಾಜ್ಯಕ್ಕೆ ಭೇಟಿ ನೀಡುವ ಹಿನ್ನೆಲೆಯಲ್ಲಿ ಜ. ೧೯ ರಂದು ನಡೆಯಬೇಕಿದ್ದ ರಾಜ್ಯ ಕಾರ್ಯಕಾರಿಣಿಯನ್ನು ಮುಂದೂಡಲಾಗಿದೆ.ಬೆಂಗಳೂರಿನ ಏರೋಸ್ಪೆಸ್ ಇಂಜಿನಿಯರಿಂಗ್ ಸ್ಪೆಷಾಲಿಟಿ ಇಂಡಿಯಾ, ಇಂಜಿನಿಯರಿಂಗ್ ಅಂಡ್ ಟೆಕ್ನಾಲಜಿ ಸೆಂಟರ್ ಕಾರ್ಯಕ್ರಮಕ್ಕೆ ಪ್ರಧಾನಿ ಮೋದಿಜೀ ಬರುವ ಕಾರಣ ಈ ಬದಲಾವಣೆ ಮಾಡಲಾಗಿದೆ. ಪ್ರಧಾನಿ ಅವರ ಸ್ವಾಗತದ ಸಿದ್ಧತೆ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷರು ಪ್ರಮುಖರ ಜತೆ ಚರ್ಚೆ ಮಾಡಿದ್ದಾರೆ ಎಂದರು.
ರೋಡ್ ಶೋ ಸಾಧ್ಯತೆ
ಪ್ರಧಾನಿ ಅವರು ಬೆಂಗಳೂರಿಗೆ ಭೇಟಿ ನೀಡುವ ಸಂದರ್ಭದಲ್ಲಿ ರೋಡ್ ಶೋ ಆಯೋಜನೆ ಮಾಡುವ ಬಗ್ಗೆಯೂ ಚರ್ಚೆಗಳು ನಡೆದಿದ್ದು, ರೋಡ್ ಶೋ ನಡೆಸುವ ಬಗ್ಗೆಯೂ ಇನ್ನೂ ಯಾವುದೇ ತೀರ್ಮಾನಗಳು ಆಗಿಲ್ಲ.
ಪ್ರಧಾನಿ ಅವರ ಕಾರ್ಯಕ್ರಮವನ್ನು ನೋಡಿಕೊಂಡು ರೋಡ್ ಶೋ ನಡೆಸುವ ಬಗ್ಗೆ ತೀರ್ಮಾನ ಕೈಗೊಳ್ಳಲಾಗುತ್ತದೆ ಎಂದು ಬಿಜೆಪಿ ಮೂಲಗಳು ಹೇಳಿವೆ.