ಜ.18 ರಿಂದ ವಿಟಿಯು ಟೆಕ್ನೊ-ಕಲ್ಚರಲ್ ಹಬ್ಬ

ಕಲಬುರಗಿ,ಜ.16: ಇಲ್ಲಿನ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಪ್ರಾದೇಶಿಕ ಕೇಂದ್ರದ ಕ್ಯಾಂಪಸ್ ನಲ್ಲಿ ವಿದ್ಯಾರ್ಥಿಗಳ ಬಹುಮುಖ ಕೌಶಲ ಪ್ರದರ್ಶನಕ್ಕಾಗಿ ಇದೇ ಜ.18ರಿಂದ ಎರಡು ದಿನಗಳ ತಾಂತ್ರಿಕ ಹಾಗೂ ಸಂಸ್ಕøತಿ ಅನಾವರಣದ ಯುಕ್ತಿ -2024 ಹಮ್ಮಿಕೊಳ್ಳಲಾಗುತ್ತಿದೆ ಎಂದು ಕೇಂದ್ರದ ನಿರ್ದೇಶಕ ಡಾ.ಬಸವರಾಜ ಗಾದಗೆ ತಿಳಿಸಿದರು.
ಇಲ್ಲಿನ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, 18ರಂದು ಬೆಳಗ್ಗೆ 9.30ಕ್ಕೆ ಉದ್ಘಾಟನಾ ಸಮಾರಂಭ ನಡೆಯಲಿದ್ದು, ಕರ್ನಾಟಕ ಆಡಳಿತಾತ್ಮಕ ನ್ಯಾಯ ಮಂಡಳಿಯ ಸದಸ್ಯ ಹಾಗೂ ಹಿರಿಯ ಐಪಿಎಸ್ ಅಧಿಕಾರಿ ರಾಘವೇಂದ್ರ ಔರಾದಕರ್ ಅವರ ಘನ ಉಪಸ್ಥಿತಿಯಲ್ಲಿ ಕೆ.ಕೆಆರ್.ಡಿ.ಬಿ ಕಾರ್ಯದರ್ಶಿ ಸುಂದರೇಶ ಬಾಬು ಹಾಗೂ ನವದೆಹಲಿಯ ಪ್ರಸಾರ ಭಾರತಿ ಎಡಿಜಿ (ಇಂಜಿನಿಯರಿಂಗ್) ಸುನಿಲ್ ಉದ್ಘಾಟಿಸಲಿದ್ದಾರೆ ಎಂದರು.
ಮುಖ್ಯ ಅತಿಥಿಗಳಾಗಿ ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್, ಪೆÇಲೀಸ್ ಕಮಿಷನರ್ ಚೇತನ್ ಆರ್ ಪಾಲ್ಗೊಳ್ಳಲಿದ್ದಾರೆ. ಅರಣ್ಯ ಇಲಾಖೆಯ ಡೆಪ್ಯುಟಿ ಕಮಿಷನರ್ ಸುಮಿತ್ ಕುಮಾರ್ ಎಸ್.ಪಾಟೀಲ್ ಗೌರವ ಅತಿಥಿಗಳಾಗಿ ಭಾಗವಹಿಸುತ್ತಿದ್ದು, ವಿಟಿಯು ಉಪಕುಲಪತಿ ಡಾ.ವಿದ್ಯಾಶಂಕರ ಅಧ್ಯಕ್ಷತೆ ವಹಿಸಲಿದ್ದಾರೆ ಎಂದರು.
19ಕ್ಕೆ ಸಮಾರೋಪ:
ಜ.19ರಂದು ಮಧ್ಯಾಹ್ನ 3.30ಕ್ಕೆ ಸಮಾರೋಪ ಸಮಾರಂಭ ನಡೆಯಲಿದ್ದು, ಕೆ.ಕೆ.ಆರ್.ಡಿ.ಬಿ ಅಧ್ಯಕ್ಷ ಡಾ.ಅಜಯಸಿಂಗ್ ಉದ್ಘಾಟಿಸಲಿದ್ದಾರೆ. ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಚೇರ್ ಪರ್ಸನ್ ಮಾತೋಶ್ರೀ ಡಾ.ದಾಕ್ಷಾಯಿಣಿ ಎಸ್.ಅಪ್ಪಾ, ಖಾಜಾ ಬಂದೇನವಾಜ್ ವಿಶ್ವವಿದ್ಯಾಲಯದ ಕುಲಪತಿ ಡಾ.ಸೈಯದ್ ಶಾ ಖುಸ್ರೋ ಹುಸೇನಿ ಅವರು ದಿವ್ಯ ಸಾನ್ನಿಧ್ಯ ವಹಿಸಲಿದ್ದಾರೆ ಎಂದು ವಿವರಿಸಿದರು.
ಶಾಸಕರಾದ ಅಲ್ಲಮಪ್ರಭು ಪಾಟೀಲ್, ಖನೀಜ್ ಫಾತಿಮಾ, ಬಸವರಾಜ ಮತ್ತಿಮೂಡ ಅವರು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದು, ವಿಟಿಯು ಉಪಕುಲಪತಿ ಡಾ.ವಿದ್ಯಾಶಂಕರ ಎಸ್ ಅಧ್ಯಕ್ಷತೆ ಎಂದು ಡಾ.ಗಾದಗೆ ಹೇಳಿದರು.
ಗೌರವ ಅತಿಥಿಗಳಾಗಿ ಎಚ್.ಕೆ.ಇ ಅಧ್ಯಕ್ಷ ಡಾ.ಭೀಮಾಶಂಕರ ಬಿಲಗುಂದಿ, ಬೀದರ್ ನಾನಕ್ ಜೀರಾ ಸಾಹೇಬ್ ಫೌಂಡೇಶನ್ ಅಧ್ಯಕ್ಷ ಡಾ.ಸರ್ದಾರ್ ಬಲಬೀರ್ ಸಿಂಗ್, ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಬಸವರಾಜ ಎಸ್. ದೇಶಮುಖ, ಬಾಲ್ಕಿ ಶಾಂತಿ ವಿದ್ಯಾವರ್ಧಕ ಎಜುಕೇಷನ್ ಸೊಸೈಟಿಯ ಕಾರ್ಯದರ್ಶಿ ಸಾಗರ ಖಂಡ್ರೆ, ಶೆಟ್ಟಿ ಸಮೂಹ ಸಂಸ್ಥೆಗಳ ಅಧ್ಯಕ್ಷ ಉದಯಶಂಕರ ಶೆಟ್ಟಿ, ಬಳ್ಳಾರಿಯ ವಿ.ವಿ ಸಂಘದ ಅಧ್ಯಕ್ಷ ಆರ್.ಎ
ರಾಮನಗೌಡ, ಬಳ್ಳಾರಿಯ ಬಿ.ಐ.ಟಿ.ಎಂ ಅಧ್ಯಕ್ಷ ಡಾ.ಯಶವಂತ ಭೂಪಾಲ್, ರಾಯಚೂರು ನವೋದಯ ಎಜುಕೇಷನ್ ಟ್ರಸ್ಟ್ ಅಧ್ಯಕ್ಷ ಎಸ್.ರಾಜೇಂದ್ರ ರೆಡ್ಡಿ, ಬಸವಕಲ್ಯಾಣ ಎಜುಕೇಷನ್ ಟ್ರಸ್ಟ್ ಉಪಾಧ್ಯಕ್ಷ ದಿಲೀಪ್ ಕುಮಾರ್ ಎಸ್.ತಾಳಂಪಲ್ಲಿ, ಬೀದರ್ ಲಿಂಗರಾಜಪ್ಪ ಅಪ್ಪ ಇಂಜಿನಿಯರಿಂಗ್ ಕಾಲೇಜಿನ ನಿರ್ದೇಶಕ ಡಾ.ಉಮಾತಾಯಿ ಬಿ.ದೇಶಮುಖ ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.
ಡಾ.ಶಿವರಾಮೇಗೌಡ, ಡಾ.ಬ್ರಿಜ್ ಭೂಷಣ್, ಡಾ.ಶಂಭುಲಿಂಗ ಹಾಗೂ ವೀರೇಶ್ ಪೂಜಾರಿ ಸೇರಿದಂತೆ ಇತರರಿದ್ದರು.


ಏನೇನು ಇರಲಿವೆ?
ಎರಡು ದಿನಗಳ ತಾಂತ್ರಿಕ ಹಾಗೂ ಸಾಂಸ್ಕೃತಿಕ ಹಬ್ಬದ(ಯುಕ್ತಿ) ಭಾಗವಾಗಿ ಹಲವು ಕಾರ್ಯಕ್ರಮ ಹಾಗೂ ಸ್ಪರ್ಧೆಗಳು ನಡೆಯಲಿವೆ ಎಂದು ಡಾ.ಬಸವರಾಜ ಗಾದಗೆ ತಿಳಿಸಿದರು.
ಮಂಥನ ತಾಂತ್ರಿಕ ಸ್ಪರ್ಧಾ ವಿಭಾಗದಲ್ಲಿ ಪ್ರಕಲ್ಪ ಪ್ರಸ್ತುತಿ, ಚಾಣಾಕ್ಷ, ರೋಬೊ ಸಮರ, ಪ್ರಜ್ಞಾನ್ ಕ್ವಿಜ್, ಚರ್ಚಾಕೂಟ ನಡೆಯಲಿವೆ. ಚಿಂತನ ಮ್ಯಾನೇಜ್ಮೆಂಟ್ ವಿಭಾಗದಲ್ಲಿ ದಕ್ಷ, ಶ್ರೇಷ್ಠವಿತ್ತ, ವಿಪನಾನ್, ಮಾನವ ಸಂಪನ್ಮೂಲ, ಸುಮೇಧ ಚಟುವಟಿಕೆ ಜರುಗಲಿವೆ ಎಂದರು.
ಕಲಾ ವಿಭಾಗದಲ್ಲಿ ಸ್ಥಳದಲ್ಲೇ ಚಿತ್ರ ನಿರ್ಮಾಣ, ಚಿತ್ರಗಾಥಾ, ರೂಪರೇಖಾ, ಹಸ್ತಕಲೆ, ಸೆಲ್ಫೀ ಪಾಯಿಂಟ್ ನಡೆಯಲಿದ್ದು, ಮನರಂಜನಾ ವಿಭಾಗದಲ್ಲಿ ನಿನಾದ, ನೃತ್ಯ, ರ್ಯಾಂಪ್ ವಾಕ್ ಹಾಗೂ ಕ್ರೀಡಾ ರತ್ನ ವಿಭಾಗದಲ್ಲಿ ತಲಾಶ್ ಮತ್ತು ಕದನ ಇನ್ನಿತರ ಕಾರ್ಯಕ್ರಮಗಳು ಜರುಗಲಿವೆ ಎಂದು ಮಾಹಿತಿ ನೀಡಿದರು.
ಇನ್ನು ಯುಕ್ತಿ-2024 ಭಾಗವಾಗಿ ಎರಡೂ ದಿನಗಳಂದು ಸಂಜೆ ಮನರಂಜನೆ ಕಾರ್ಯಕ್ರಮಗಳು ನಡೆಯಲಿದ್ದು, ಇಂಡಿಯನ್ ಐಡಲ್ ಗಾಯಕಿ ಬೀದರ್ ನಗರದ ಶಿವಾನಿ ಶಿವದಾಸ್ ಸ್ವಾಮಿ ಸಂಗೀತ ಕಾರ್ಯಕ್ರಮ, ಹಾಸ್ಯ ಕಲಾವಿದರಾದ ಗಂಗಾವತಿ ಪ್ರಾಣೇಶ, ನರಸಿಂಹ ಜೋಶಿ, ಬಸವರಾಜ ಮಹಾಮನಿ ಹಾಸ್ಯ ಸಂಜೆ ನಡೆಸಿಕೊಡಲಿದ್ದಾರೆ. ಇದರ ಜೊತೆಗೆ ಒಡಿಸ್ಸಾ ನೃತ್ಯ ವೈಭವ, ವಿಶ್ವನಾಥ ಹಾವೇರಿ ಅವರಿಂದ ಸಂಗೀತ ಕಾರ್ಯಕ್ರಮ, ದಿ ಲಿಕ್ವಿಡ್ ಡ್ರಮ್ಮರ್ ಚೆನ್ನೈ ಹಾಗೂ ಕಲಬುರಗಿಯ ದಿ ಬ್ಯಾಂಡ್ ಸ್ವರ ಸಂಗೀತ ತಂಡದಿಂದ ಸಂಗೀತ ಪ್ರಸ್ತುತಿ ನಡೆಯಲಿದೆ ಎಂದು ಗಾದಗೆ ನುಡಿದರು.