ಜ.17ರಂದು ಕಲಬುರಗಿ ಬಂದ್ ಯಶಸ್ಸಿಗೆ ಆಗ್ರಹವಿಮೆ ಕಂಪನಿಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಲು ಒತ್ತಾಯ

ಕಲಬುರಗಿ:ಜ.10: ರೈತರಿಗೆ ಬೆಳೆಹಾನಿಯ ವಿಮೆ ಹಣ ಬಿಡುಗಡೆ ಮಾಡದೆ ವಂಚಿಸುತ್ತಿರುವ ವಿಮಾ ಕಂಪನಿಗಳ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿ, ಸರಕಾರವೇ ವಿಮಾ ಕಂಪನಿಗಳನ್ನು ಸ್ವಾಧೀನಪಡಿಸಿಕೊಂಡು ಪರಿಹಾರ ಹಣ ನೀಡಬೇಕು. ಈ ನಿಟ್ಟಿನಲ್ಲಿ ಇದೇ ಜನವರಿ 17ರಂದು ಕರೆಯಲಾಗಿರುವ ಕಲಬುರಗಿ ಬಂದ್ ಯಶಸ್ವಿಗೊಳಿಸಬೇಕೆಂದು ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾಧ್ಯಕ್ಷ ಶರಣಬಸಪ್ಪ ಮಮಶೆಟ್ಟಿ ಒತ್ತಾಯಿಸಿದರು.
ಇಲ್ಲಿನ ಪತ್ರಿಕಾ ಭವನದಲ್ಲಿ ಕರೆದಿದ್ದ ಸುದ್ದಿಗೋಷ್ಠಿ ಉದ್ದೇಶಿಸಿ ಅವರು ಮಾತನಾಡಿದರು. ವಿಮಾ ಕಂಪನಿಗಳು ರೈತರಿಗೆ ಬೆಳೆ ಪರಿಹಾರ ನೀಡುವುದಾಗಿ ಪ್ರತಿ ವರ್ಷ ಕಂತು ಸಂಗ್ರಹಿಸುತ್ತಿವೆ. ಆದರೆ, ಪರಿಹಾರ ನೀಡುವ ಸಂದರ್ಭದಲ್ಲಿ ಇಲ್ಲದ ನಿಯಮಾವಳಿಗಳನ್ನು ರೂಪಿಸುತ್ತಾ ರೈತರನ್ನು ವಂಚಿಸಲಾಗುತ್ತಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.
ಡಾ.ಎಂ.ಎಸ್.ಸ್ವಾಮಿನಾಥನ್ ಆಯೋಗದ ವರದಿಯ ಪ್ರಕಾರ ಕನಿಷ್ಠ ಬೆಂಬಲ ಬೆಲೆ ಕಾನೂನು ಜಾರಿಗೊಳಿಸಬೇಕು. ಪ್ರತಿ ಕ್ವಿಂಟಾಲ್ ತೊಗರಿಗೆ ರೂ. 12 ಸಾವಿರ ಬೆಂಬಲ ಬೆಲೆ ನಿಗದಿ ಮಾಡಬೇಕು. ಕಲಬುರಗಿಯ ತೊಗರಿ ಬೋರ್ಡ್ ಬಲಪಡಿಸಬೇಕೆಂದು ಅವರು ಆಗ್ರಹಿಸಿದರು.
ರೈತರ ಸಾಲ ಮನ್ನಾ ಮಾಡಬೇಕು. ಪ್ರತಿ ಕ್ವಿಂಟಾಲ್ ತೊಗರಿಗೆ ರಾಜ್ಯ ಸರಕಾರದಿಂದ ರೂ.1000 ಪ್ರೋತ್ಸಾಹ ಧನ ನೀಡಬೇಕು. ಹೊರದೇಶಗಳಿಂದ ಆಮದಾಗುವ ತೊಗರಿಯ ಮೇಲೆ ಶೇ.50ರಷ್ಟು ಆಮದು ಸುಂಕ (ಇಂಪೋರ್ಟ್ ಡ್ಯೂಟಿ) ವಿಧಿಸಬೇಕು. ತೊಗರಿ ಕಟಾವು ಸಂದರ್ಭದಲ್ಲಿ ಪ್ರತಿ ಗ್ರಾಮ ಪಂಚಾಯಿತಿಗೆ ಒಂದರಂತೆ ತೊಗರಿ ಖರೀದಿ ಕೇಂದ್ರ ಆರಂಭಿಸಬೇಕು ಎಂದು ಅವರು ಮನವಿ ಮಾಡಿದರು.
ಈ ಎಲ್ಲ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಜನವರಿ 17ರಂದು ಕಲಬುರಗಿ ಬಂದ್ ಆಚರಣೆಗೆ ಕರೆ ನೀಡಲಾಗಿದೆ. ಈಗಾಗಲೇ ಕಾಂಗ್ರೆಸ್ ಸೇರಿದಂತೆ ವಿವಿಧ ರೈತಪರ ಸಂಘಟನೆಗಳು ಬಂದ್ ಆಚರಣೆಗೆ ಬೆಂಬಲ ಸೂಚಿಸಿವೆ ಎಂದು ಅವರು ಹೇಳಿದರು.
ರೈತ ಮುಖಂಡ ಭೀಮಶೆಟ್ಟಿ ಯಂಪಳ್ಳಿ, ಹಿರಿಯ ಹೋರಾಟಗಾರ ಎಂ.ಬಿ.ಸಜ್ಜನ್ ಹಾಗೂ ಮೇಘರಾಜ ಕಠಾರೆ, ಸಾಯಬಣ್ಣ ಗುಡುಬಾ, ಪದ್ಮಿನಿ ಕಿರಣಗಿ ಹಾಗೂ ಸಿದ್ದಪ್ಪ ಕಲಶೆಟ್ಟಿ ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು.