ಜ.16 ರಿಂದ ದೇಶದಲ್ಲಿ ಕೋವಿಡ್ ಲಸಿಕೆ ವಿತರಣೆ

ನವದೆಹಲಿ, ಜ.9- ದೇಶದಲ್ಲಿ ಜನವರಿ 16ರಿಂದ ಕೋವಿಡ್ ತುರ್ತು ಲಸಿಕೆಯನ್ನು ವಿತರಿಸಲು ಕೇಂದ್ರ ಸರ್ಕಾರ ಮುಂದಾಗಿದೆ.

ಈ ಮುಂಚೆ ಈ ತಿಂಗಳ 13 ರಿಂದ ಲಸಿಕೆ ವಿತರಣೆ ಆರಂಭವಾಗಲಿದೆ ಎಂದು ಹೇಳಲಾಗಿತ್ತು. ಇದೀಗ ಅದರ ದಿನಾಂಕವನ್ನು ಜನವರಿ 16ಕ್ಕೆ ಮುಂದೂಡಲಾಗಿದೆ.

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಉನ್ನತ ಮಟ್ಟದ ಸಮಿತಿಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಕೇಂದ್ರ ಸರ್ಕಾರದ ಉನ್ನತ ಮೂಲಗಳು ತಿಳಿಸಿವೆ.

ದೇಶದಲ್ಲಿ ಒಟ್ಟು 30 ಕೋಟಿ ಲಸಿಕೆಯನ್ನು ಹಾಕುವ ಗುರಿ ಹೊಂದಿದ್ದು ಆರಂಭಿಕ ಹಂತದಲ್ಲಿ ಮೂರು ಕೋಟಿ ಮಂದಿಗೆ ಲಸಿಕೆ ಹಾಕಲಾಗುವುದು. ಎರಡನೇ ಹಂತದಲ್ಲಿ 27 ಕೋಟಿ ಲಸಿಕೆ ಹಾಕಲು ಕೇಂದ್ರ ಸರ್ಕಾರ ಉದ್ದೇಶಿಸಿದೆ.

ಆರಂಭಿಕ ಹಂತದಲ್ಲಿ ವೈದ್ಯರು, ದಾದಿಯರು, ವೈದ್ಯಕೀಯ ಸಿಬ್ಬಂದಿ, ಕೊರೋನೊ ಸೇನಾನಿಗಳಿಗೆ 3 ಕೋಟಿ ಲಸಿಕೆಯನ್ನು ಹಾಕಲು ನಿರ್ಧರಿಸಲಾಗಿದೆ.

ಎರಡನೆ ಹಂತದಲ್ಲಿ 50ವರ್ಷ ಮತ್ತು ಅದಕ್ಕೂ ಮೇಲ್ಪಟ್ಟವರಿಗೆ 27 ಕೋಟಿ ಮಂದಿಗೆ ಲಸಿಕೆ ಹಾಕಲು ಉದ್ದೇಶಿಸಿರುವುದಾಗಿ ಕೇಂದ್ರ ಸರ್ಕಾರದ ಉನ್ನತ ಮೂಲಗಳು ತಿಳಿಸಿವೆ.

ಭಾರತೀಯ ಔಷಧ ಮಹಾನಿಯಂತ್ರಕ -ಡಿಸಿಜಿಐ‌ ಈಗಾಗಲೇ ದೇಶದಲ್ಲಿ ಎರಡೂ ಕೋವಿಡ್ ಲಸಿಕೆಗಳ ತುರ್ತು ಅನುಮತಿಗೆ ಅವಕಾಶ ಮಾಡಿಕೊಲಟ್ಟಿದೆ.

ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ಮತ್ತು ಭಾರತ್ ಬಯೋಟೆಕ್ ಸಂಸ್ಥೆ ಜಂಟಿಯಾಗಿ ಅಭಿವೃದ್ಧಿಪಡಿಸಿರುವ ಕೋವಾಕ್ಸಿನ್ ಮತ್ತು ಆಕ್ಸ್‌ಫರ್ಡ್ ವಿಶ್ವವಿದ್ಯಾಲಯ ಮತ್ತು ಆಸ್ಟ್ರಾ ಝೆನಾಕಾ ಸಂಸ್ಥೆ ಜಂಟಿಯಾಗಿ ಅಭಿವೃದ್ಧಿಪಡಿಸಿರುವ ಕೋವಿ ಶೀಲ್ಡ್ ಲಸಿಕೆಯನ್ನು ಪುಣೆಯಲ್ಲಿರುವ ಭಾರತೀಯ ಸೆರಂ ಸಂಸ್ಥೆ ಉತ್ಪಾದನೆ ಮಾಡುತ್ತಿದೆ.

ಪ್ರಧಾನಿ ನರೇಂದ್ರ ಮೋದಿಯವರು ಈ ತಿಂಗಳ 11ರಂದು ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಲೆಫ್ಟಿನೆಂಟ್ ಗವರ್ನರ್ ಗಳ ಸಭೆ ನಡೆದಿದ್ದು ಸಭೆಯಲ್ಲಿ ಲಸಿಕೆ ವಿತರಣೆಗೆ ರೂಪರೇಷೆ ಸಿದ್ಧಪಡಿಸುವ ಸಾಧ್ಯತೆಗಳಿವೆ