ಜ.16 ಬೃಹತ್ ಲಸಿಕೆ ವಿತರಣೆ: ರಾಜ್ಯಗಳ ಸಹಕಾರ ಅಗತ್ಯ: ಪ್ರಧಾನಿ

ನವದೆಹಲಿ.ಜ.11- ವಿಶ್ವದ ಅತಿದೊಡ್ಡ ಲಸಿಕಾ ಕಾರ್ಯಕ್ರಮ ಇದೇ 16 ರಂದು ದೇಶದಲ್ಲಿ ಆರಂಭವಾಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ದೇಶೀಯವಾಗಿ ನಿರ್ಮಿತ “ಕೋವಿಶೀಲ್ಡ್” ಮತ್ತು “ಕೋವ್ಯಾಕ್ಸಿನ್” ಲಸಿಕೆಗಳ ತುರ್ತು ಬಳಕೆಗೆ ಈಗಾಗಲೇ ಅನುಮತಿ ನೀಡಲಾಗಿದೆ. ಈ ಎರಡೂ ಲಸಿಕೆಗಳು ಪರಿಣಾಮಕಾರಿಯಾಗಿವೆ. ಇದಲ್ಲದೆ ಇನ್ನೂ 4 ಲಸಿಕೆಗಳು ಸಿದ್ಧವಾಗುವ ಹಂತದಲ್ಲಿದೆ ಎಂದು ಅವರು ತಿಳಿಸಿದ್ದಾರೆ.

ಕೋವಿಡ್-19 ಲಸಿಕೆ ವಿತರಣೆ, ಸಂಗ್ರಹ ಸೇರಿದಂತೆ ವಿವಿಧ ವಿಷಯಗಳ ಕುರಿತು ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ವರ್ಚುಯಲ್ ಮೂಲಕ ಸಭೆ ನಡೆಸಿ ಮಾಹಿತಿ ಪಡೆದ ಬಳಿಕ ಅವರು, ಈ ವಿಷಯ ತಿಳಿಸಿದ್ದಾರೆ

ಮೊದಲ ಹಂತದಲ್ಲಿ ಆರೋಗ್ಯ ಕಾರ್ಯಕರ್ತರು, ಮುಂಚೂಣಿ ಕಾರ್ಯಕರ್ತರಿಗೆ ಲಸಿಕೆ ಹಾಕಲಾಗುವುದು. ಈ ಹಂತದಲ್ಲಿ ಲಸಿಕೆ ನೀಡುವ 3 ಕೋಟಿ ಜನರಿಗೆ ಕೇಂದ್ರ ಸರ್ಕಾರ ವೆಚ್ಚ ಭರಿಸಲಿದೆ ಎಂದರು.

2ನೇ ಹಂತದಲ್ಲಿ 50 ವರ್ಷ ಮತ್ತು ಅದನ್ನು ದಾಟಿದವರಿಗೆ ಲಸಿಕೆ ಹಾಕಲಾಗುವುದು ಎಂದು ಹೇಳಿದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು, ಈ ಸಂಬಂಧ ತಜ್ಞರ ಸೂಚನೆ ಮೇರೆಗೆ ಎಲ್ಲಾ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಅವರು ಹೇಳಿದ್ದಾರೆ.

ಲಸಿಕೆ ಪಡೆದವರಲ್ಲಿ ಯಾವುದೇ ಅಡ್ಡ ಪರಿಣಾಮ ಬೀರಿದರೆ ಅದಕ್ಕೆ ಚಿಕಿತ್ಸೆ ನೀಡಲಾಗುವುದು ಎಂದು ಹೇಳಿದರು.

ಲಸಿಕೆ ವಿತರಣಾ ಕಾರ್ಯಕ್ರಮಕ್ಕೆ ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಸಹಕಾರ ಕುರಿತು ಚರ್ಚೆ ನಡೆಸಲಾಗಿದೆ. ಒಕ್ಕೂಟ ವ್ಯವಸ್ಥೆಯಲ್ಲಿ ಜೊತೆಯಾಗಿ ನಡೆದಾಗ ಮಾತ್ರ ಸಮಸ್ಯೆಗೆ ಪರಿಹಾರ ಸಾಧ್ಯ. ಕೋವಿಡ್ 19ರ ವಿಷಯದಲ್ಲೂ ಜೊತೆಯಾಗಿ ಹೋಗೋಣ ಎಂದು ರಾಜ್ಯಗಳಿಗೆ ತಿಳಿಸಲಾಗಿದೆ ಎಂದು ಹೇಳಿದರು.

ಲಸಿಕಾ ವಿತರಣೆ ಸಮಯದಲ್ಲಿ ಯಾವುದೇ ವದಂತಿಗಳಿಗೆ ಆಸ್ಪದ ನೀಡಬೇಡಿ. ಇಂತಹುದಕ್ಕೆ ಉತ್ತೇಜನ ನೀಡಬೇಡಿ. ಸ್ಪರ್ಧಾತ್ಮಕ ಯುಗದಲ್ಲಿ ಕೆಲವರು ಬೇಕು ಅಂತಲೇ ವದಂತಿಗಳನ್ನು ಹಬ್ಬಿಸುವ ಸಾಧ್ಯತೆಗಳಿವೆ ಎಂದು ಅವರು ತಿಳಿಸಿದರು.

ಹಕ್ಕಿ ಜ್ವರ ಎಚ್ಚರಿಕೆ ಅಗತ್ಯ

ದೇಶದ ಹಲವು ರಾಜ್ಯಗಳಲ್ಲಿ ಹಕ್ಕಿ ಜ್ವರ ಕಾಣಿಸಿಕೊಂಡಿದ್ದು, ಪರಿಸ್ಥಿತಿಯನ್ನು ನಿಯಂತ್ರಿಸಲು ಜಿಲ್ಲಾಧಿಕಾರಿಗಳ ಪಾತ್ರ ಮಹತ್ವದ್ದು, ಕೆಲವು ರಾಜ್ಯಗಳನ್ನು ಹೊರತುಪಡಿಸಿದರೆ, ಇನ್ನಾವುದೇ ರಾಜ್ಯಗಳಲ್ಲಿ ರೋಗ ಕಂಡು ಬಂದಿಲ್ಲ ಎಂದು ಅವರು ಹೇಳಿದರು.