ಜ. 14 ರಿಂದ ಧಾರ್ಮಿಕ ಕ್ಷೇತ್ರಗಳ ಸ್ವಚ್ಚತಾ ಅಭಿಯಾನ

ತುಮಕೂರು, ಜ. ೮- ಕಳೆದ ನಲವತ್ತು ವರ್ಷಗಳಿಂದ ರಾಜ್ಯದಲ್ಲಿ, ತುಮಕೂರು ಜಿಲ್ಲೆಯಲ್ಲಿ ೧೦ ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಸಂಸ್ಥೆ ವತಿಯಿಂದ ಜನವರಿ ೧೪ರ ಮಕರ ಸಂಕ್ರಾಂತಿ ದಿನದಿಂದ ಒಂದು ವಾರಗಳ ಕಾಲ ಧಾರ್ಮಿಕ ಕ್ಷೇತ್ರಗಳ ಸ್ವಚ್ಚತಾ ಅಭಿಯಾನವನ್ನು ಹಮ್ಮಿಕೊಂಡಿರುವುದಾಗಿ ಸಂಸ್ಥೆಯ ಯೋಜನಾ ನಿರ್ದೇಶಕಿ ದಯಾಶೀಲ ತಿಳಿಸಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೋವಿಡ್ ಇರುವ ಕಾರಣ, ೧೦ ರಿಂದ ೧೫ ಜನ ಸ್ವಯಂ ಸೇವಕರು ಸೇರಿ, ಎಲ್ಲಿ ಜನರಿಗೆ ಅಗತ್ಯವಿದೆಯೋ ಅಂತಹ ಕಡೆ ಹೋಗಿ ಧಾರ್ಮಿಕ ಕೇಂದ್ರಗಳಾದ ದೇವಾಲಯ, ಮಸೀದಿ, ಮಂದಿರಗಳು, ಚರ್ಚ್‌ಗಳ ಸುತ್ತಮುತ್ತ ಸ್ವಚ್ಚತಾ ಕಾರ್ಯ ಕೈಗೊಳ್ಳಲು ಮುಂದಾಗಿದ್ದೇವೆ. ಇದುವರೆಗೂ ೭೯೯ ಧಾರ್ಮಿಕ ಕೇಂದ್ರಗಳನ್ನು ಸ್ವಚ್ಚಗೊಳಿಸಲಾಗಿದೆ ಎಂದರು.
ಪ್ರಸ್ತುತ ತುಮಕೂರು ಜಿಲ್ಲೆ ಒಂದರಲ್ಲಿ ಕುಣಿಗಲ್, ಗುಬ್ಬಿ, ತಿಪಟೂರು, ತುರುವೇಕೆರೆ, ತುಮಕೂರು ತಾಲ್ಲೂಕುಗಳನ್ನು ಒಳಗೊಂಡಿದ್ದು, ೧೪೨೦೮ ಪ್ರಗತಿ ಬಂಧುಗಳು ತಂಡಗಳಲ್ಲಿ ೧,೩೦,೨೦೦ ಸದಸ್ಯರಿದ್ದಾರೆ. ಇವರಿಗೆ ೧೮೬ ಕೋಟಿ ಪ್ರಗತಿ ನಿಧಿ ವಿತರಿಸಲಾಗಿದೆ. ೧೫೪೧೬ ಜನರಿಗೆ ವಿಮೆ ಯೋಜನೆಗೆ ಒಳಪಡಿಸಲಾಗಿದೆ. ಐದು ತಾಲ್ಲೂಕುಗಳ ೨೪೬೮ ವಿದ್ಯಾರ್ಥಿಗಳಿಗೆ ಸುಜ್ಞಾನ ನಿಧಿ ಶಿಷ್ಯ ವೇತನ ನೀಡಲಾಗುತ್ತಿದೆ. ಸಮುದಾಯ ಅಭಿವೃದ್ದಿ ಅನುದಾನದ ಅಡಿ ೩೮೭ ಕಟ್ಟಡಗಳ ನಿರ್ಮಾಣಕ್ಕೆ ಅರ್ಥಿಕ ಧನ ಸಹಾಯ ಮಾಡಲಾಗಿದೆ ಎಂದರು.
ಕೃಷಿಕರಿಗೆ ಅನುಕೂಲವಾಗುವಂತಹ ೬ ಕೃಷಿ ಯಂತ್ರಧಾರೆ ಕೇಂದ್ರಗಳು ಕಾರ್ಯನಿರ್ವಹಿಸುತ್ತಿದ್ದು, ಮಕ್ಕಳ ಆನ್‌ಲೈನ್ ಶಿಕ್ಷಣಕ್ಕೆ ಅನುಕೂಲವಾಗುವ ಜ್ಞಾನತಾಣ ಯೋಜನೆಯಲ್ಲಿ ೩೫೩ ಜನ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ಮತ್ತು ಲ್ಯಾಬ್ ವಿತರಿಸಲಾಗಿದೆ. ಮಾಸಾಶನ ಪಡೆಯುತ್ತಿದ್ದ ೫೦೭ ಕುಟುಂಬಗಳಲ್ಲಿ ಆರ್ಥಿಕವಾಗಿ ಚೇತರಿಸಿಕೊಳ್ಳದ ೧೧೯ ಕುಟುಂಬಗಳಿಗೆ ಜನಮಂಗಳ ಕಾರ್ಯಕ್ರಮದ ಅಡಿಯಲ್ಲಿ ವಾತ್ಸಲ್ಯ ಕಿಟ್ ಗಳನ್ನು ವಿತರಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.
ತುಮಕೂರು ನಗರದ ಶಾಸಕರ ಕೋರಿಕೆ ಮೇರೆಗೆ ನಗರದಲ್ಲಿ ೧೮ ಶುದ್ದಗಂಗಾ ಕುಡಿಯುವ ನೀರಿನ ಘಟಕಗಳನ್ನು ತೆರೆಯಲು ತೀರ್ಮಾನಿಸಿದ್ದು, ಈಗಾಗಲೇ ೩ ಘಟಕಗಳು ನಿರ್ಮಾಣಗೊಂಡು ಕಾರ್ಯನಿರ್ವಹಿಸುತ್ತಿವೆ. ೫ ಕೇಂದ್ರಗಳು ನಿರ್ಮಾಣ ಹಂತದಲ್ಲಿವೆ. ಉಳಿದ ೧೦ಕ್ಕೆ ಶೀಘ್ರವೇ ಗುದ್ದಲಿ ಪೂಜೆ ನೆರವೇರಿಸಿ, ಕಾಮಗಾರಿಗಳನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಿ, ಸಾರ್ವಜನಿಕರ ಉಪಯೋಗಕ್ಕೆ ಅರ್ಪಿಸಲಾಗುವುದು ಎಂದರು.
ಜನವರಿ ೧೪ ರಿಂದ ಆರಂಭವಾಗುವ ೫ನೇ ವರ್ಷದ ಧಾರ್ಮಿಕ ಶ್ರದ್ಧಾ ಕೇಂದ್ರಗಳ ಸ್ವಚ್ಚತಾ ಕಾರ್ಯಕ್ರಮದಲ್ಲಿ ದೇವಾಲಯ, ಮಸೀದಿ, ಮಂದಿರ, ಚರ್ಚ್‌ಗಳ ಸ್ವಚ್ಚತೆಯ ಜತೆಗೆ ಅಲ್ಲಿಗೆ ಬರುವ ಜನರಿಗೆ ಸ್ವಚ್ಚತೆಯ ಅರಿವು ಮೂಡಿಸುವ ಕಾರ್ಯವನ್ನು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಮಾಡುತ್ತಿದೆ. ನಮ್ಮ ಎಲ್ಲಾ ಕಾರ್ಯಕ್ರಮಗಳಿಗೆ ಕ್ಷೇತ್ರಾಧ್ಯಕ್ಷರಾದ ವೀರೇಂದ್ರ ಹೆಗ್ಗಡೆ ಅವರು ಬೆನ್ನೆಲುಬಾಗಿ ನಿಂತಿದ್ದಾರೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ಯೋಜನಾಧಿಕಾರಿಗಳಾದ ಚನ್ನಕೇಶವ್, ನಾಗರಾಜು ಮತ್ತಿತರರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಧಾರ್ಮಿಕ ಶ್ರದ್ಧಾ ಕೇಂದ್ರಗಳ ಸ್ವಚ್ಚತಾ ಕಾರ್ಯಕ್ರಮದ ಕರಪತ್ರಗಳನ್ನು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಚಿ.ನಿ.ಪುರುಷೋತ್ತಮ್ ಬಿಡುಗಡೆ ಮಾಡಿದರು.