ಜ.14 ಮೊದಲ, ದ್ವಿತೀಯ ವರ್ಷದ ಭೌತಿಕ ತರಗತಿ:ಡಿಸಿಎಂ

ಬೆಂಗಳೂರು, ಜ 8- ಪ್ರಥಮ, ದ್ವಿತೀಯ ವರ್ಷದ ಪದವಿಗಳಿಗೆ ಭೌತಿಕ ತರಗತಿಗಳನ್ನು ಸಂಕ್ರಾಂತಿಯಿಂದ ಆರಂಭಿಸಲು ಮುಂದಾಗಿದ್ದು, ಈ ಸಂಬಂಧ ವರದಿ ನೀಡುವಂತೆ ಕುಲಪತಿಗಳಿಗೆ ಸರ್ಕಾರ ಸೂಚಿಸಿದೆ.
ಎಲ್ಲಾ ಇಲಾಖೆಗಳ ಅಧಿಕಾರಿಗಳ ಜತೆ ಸಂವಾದ ನಡೆಸಿದ ನಂತರ ಉಪಮುಖ್ಯಮಂತ್ರಿ ಆಶ್ವಥ್ ನಾರಾಯಣ ಸುದ್ದಿಗಾರರಿಗೆ ಈ ವಿಷಯ ತಿಳಿಸಿದರು.
ಈಗಾಗಲೇ ಪದವಿ, ಸ್ನಾತಕೋತ್ತರ, ಡಿಪ್ಲೊಮಾ ಮತ್ತು ಎಂಜಿನಿಯರಿಂಗ್‌ ತರಗತಿಗಳ ಅಂತಿಮ ವರ್ಷದ ಮತ್ತು ಅಂತಿಮ ಸೆಮಿಸ್ಟರ್‌ನ ಆಫ್‌ಲೈನ್‌ ತರಗತಿಗಳು ಯಶಸ್ವಿಯಾಗಿ ನಡೆಯುತ್ತಿವೆ ಎಂದರು.

ಸಭೆಯಲ್ಲಿ ಪಾಲ್ಗೊಂಡಿದ್ದ ಎಲ್ಲ ಕುಲಪತಿಗಳು ನೇರ ತರಗತಿಗಳನ್ನು ಆರಂಭಿಸುವಂತೆ ಸರ್ಕಾರಕ್ಕೆ ಸಲಹೆ ನೀಡಿದರು. ಹೀಗಾಗಿ ಅದಕ್ಕೆ ಸಂಬಂಧಿಸಿದ ವರದಿ ನೀಡುವಂತೆ ಸೂಚಿಸಿದರು.

ಮೇ ತಿಂಗಳ ಎರಡನೇ ವಾರದಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಪರೀಕ್ಷೆಯನ್ನು ಈಗಾಗಲೇ ಘೋಷಣೆ ಮಾಡಲಾಗಿದೆ. ಇದನ್ನು ಗಮನದಲ್ಲಿಟ್ಟುಕೊಂಡು ಉನ್ನತ ಶಿಕ್ಷಣದ ಶೈಕ್ಷಣಿಕ ವೇಳಾಪಟ್ಟಿಯನ್ನು ರೂಪಿಸಲು ಕ್ರಮಕೈಗೊಳಲಾಗುವುದು ಎಂದು ಉಪಮುಖ್ಯಮಂತ್ರಿಗಳು ವಿವರಿಸಿದರು.