ಜ.14ರಿಂದ ಲೆದರ್ ಬಾಲ್ ಕ್ರಿಕೆಟ್ ಟೂರ್ನಿ

ದಾವಣಗೆರೆ,ಜ.01: ಮಯೂರ ಕ್ರಿಕೆಟ್ ಕ್ಲಬ್ ಆಶ್ರಯದಲ್ಲಿ ನಗರದಲ್ಲಿ ಜ.14ರಿಂದ 20ರ ವರೆಗೆ 16 ವರ್ಷದ ಒಳಗಿನ ಬಾಲಕರ ಮತ್ತು ಬಾಲಕೀಯರ ಲೆದರ್ ಬಾಲ್ ಕ್ರಿಕೆಟ್ ಟೂರ್ನಿ ನಡೆಯಲಿದೆ ಎಂದು ಜಿಲ್ಲಾ ಕ್ರೀಡಾಪಟುಗಳ ಸಂಘದ ಅಧ್ಯಕ್ಷ ದಿನೇಶ್ ಕೆ. ಶೆಟ್ಟಿ ತಿಳಿಸಿದರು.ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ನಗರದ ಎಂಬಿಎ ಕಾಲೇಜು ಮೈದಾನ ಹಾಗೂ ಜಿಲ್ಲಾ ಕ್ರೀಡಾಂಗಣದಲ್ಲಿ ಆರು ದಿನಗಳ ಕಾಲ ನಡೆಯುವ ಈ ಕ್ರಿಕೆಟ್ ಟೂರ್ನಿಗೆ ಜ.14ರಂದು ಬೆಳಿಗ್ಗೆ 9.30ಕ್ಕೆ ಚಾಲನೆ ನೀಡಲಾಗುವುದು ಎಂದು ಹೇಳಿದರು.ದಾವಣಗೆರೆ, ಬಳ್ಳಾರಿ, ಚಿತ್ರದುರ್ಗ, ತುಮಕೂರು, ಬಿಜಾಪುರ ಜಿಲ್ಲೆಗಳ ಆರು ಆಹ್ವಾನಿತ ತಂಡಗಳ 90 ಜನ ಕ್ರೀಡಾಪಟುಗಳು ಈ ಪಂದ್ಯಾವಳಿಯಲ್ಲಿ ಭಾಗವಹಿಸುತ್ತಿದ್ದು, ಹೊರ ಜಿಲ್ಲೆಗಳಿಂದ ಬರುವ ಕ್ರೀಡಾ ಪಟುಗಳಿಗೆ ಉಚಿತ ವಸತಿ ಮತ್ತು ಊಟದ ವ್ಯವಸ್ಥೆ ಕಲ್ಪಿಸಲಾಗಿದೆ ಎಂದರು.ರಾಬಿನ್ ರೌಂಡ್ ಮಾದರಿಯಲ್ಲಿ ಪಂದ್ಯಾವಳಿ ನಡೆಯಲಿದ್ದಯ, ಆರು ತಂಡಗಳು ತಲಾ ಒಂದು ಪಂದ್ಯ ಆಡಲಿವೆ. ನಂತರ ಹೆಚ್ಚು ಅಂಕ ಪಡೆದ ತಂಡಗಳ ಮಧ್ಯೆ ಸೆಮಿಫೈನಲ್ ನಡೆಯಲಿದೆ ಎಂದು ಹೇಳಿದರು.ಪಂದ್ಯಾವಳಿ ಗೆಲುವು ಸಾಧಿಸುವ ತಂಡಗಳಿಗೆ ಪ್ರಥಮ ಬಹುಮಾನವಾಗಿ 10 ಸಾವಿರ ರೂ. ಮತ್ತು ಆಕರ್ಷಕ ಟ್ರೋಫಿ, ದ್ವಿತೀಯ ಬಹುಮಾನವಾಗಿ 7 ಸಾವಿರ ರೂ ಹಾಗೂ ಟ್ರೋಫಿ ಮತ್ತು ತೃತೀಯ ಬಹುಮಾನವಾಗಿ 5 ಸಾವಿರ ರೂ. ಮತ್ತು ಟ್ರೋಫಿ ನೀಡಲಾಗುವುದು ಎಂದು ಮಾಹಿತಿ ನೀಡಿದರು.ಸುದ್ದಿಗೋಷ್ಠಿಯಲ್ಲಿ ಮಯೂರ ಕ್ರಿಕೆಟ್ ಕ್ಲಬ್‌ನ ಹುಚ್ಚವ್ವನಹಳ್ಳಿ ಮಂಜುನಾಥ್, ಫಣಿಯಾಪುರ ಪ್ರಭು, ಯುವರಾಜ್, ತರಬೇತುದಾರರಾದ ತಿಮ್ಮೇಶ್, ಬಸವರಾಜ್ ಹಾಜರಿದ್ದರು.