ಜ.12 ರಿಂದ ಕೂಡಲಸಂಗಮದಲ್ಲಿ ಶರಣ ಮೇಳ

ಧಾರವಾಡ, ಜ8- 858 ನೇ ಲಿಂಗಾಯತ ಧರ್ಮ ಸಂಸ್ಥಾಪನಾ ದಿನದ ಅಂಗವಾಗಿ ಕೂಡಲಸಂಗಮ ಕ್ಷೇತದಲ್ಲಿ ಜನೇವರಿ 12, 13, 14 ರಂದು 34 ನೇ ಶರಣ ಮೇಳ ನಡೆಯಲಿದೆ ಎಂದು ಬಸವ ಧರ್ಮ ಪೀಠಾಧ್ಯಕ್ಷರಾದ ಡಾ. ಮಾತೆ ಗಂಗಾದೇವಿ ತಿಳಿಸಿದರು.
ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೂಡಲಸಂಗಮ ಸುಕ್ಷೇತ್ರವನ್ನು ಧರ್ಮಕ್ಷೇತ್ರವೆಂದು ಸಾರಿ 1988 ರಿಂದ ಯುಗದ ಅದ್ಭುತವಾದ ‘ಶರಣ ಮೇಳ’ ಎಂಬ ಬೃಹತ್ ಧಾರ್ಮಿಕ ಕಾರ್ಯಕ್ರಮವನ್ನು ಆರಂಭಿಸಿ, 1992 ರಲ್ಲಿ ಬಸವ ಧರ್ಮದ ಮಹಾಜಗದ್ಗುರು ಪೀಠವನ್ನು ಸ್ಥಾಪಿಸಿದ ಲಿಂ. ಲಿಂಗಾನಂದ ಅಪ್ಪಾಜಿಯವರ ಹಾಗೂ ಲಿಂ ಡಾ. ಮಾತೆ ಮಹಾದೇವಿ ಅವರ ಮಾರ್ಗದರ್ಶನದಂತೆ ಕಾರ್ಯಕ್ರಮಗಳು ನಡೆಯುತ್ತಿವೆ. ಶರಣ ಮೇಳದಲ್ಲಿ ಅಖಂಡ ವಚನ ಪಠಣ, ಯೋಗ ಶಿಬಿರ, ಸಾಮೂಹಿಕ ಇಷ್ಟಲಿಂರ್ಗಾಚನೆ, ಧರ್ಮ ಚಿಂಥನ ಗೋಷ್ಠಿ, ಪ್ರಶಸ್ತಿ ಪ್ರಧಾನ ಸೇರಿದಂತೆ ವಿವಿಧ ಕಾರ್ಯಕ್ರಮಗಳು ಕೊರೊನಾ ಹಿನ್ನಲೆಯಲ್ಲಿ ಸಾಮಾಜಿಕ ಅಂತರ ಕಾಯ್ದುಕೊಂಡು ಎಲ್ಲರೂ ಕಡ್ಡಾಯವಾಗಿ ಮಾಸ್ಕ್ ಧರಿಸಿ ಸರ್ಕಾರದ ನಿಯಮಾವಳಿ ಪ್ರಕಾರ ಶರಣ ಮೇಳ ನಡೆಸಲಾಗುವುದು ಎಂದರು.
ಜನೇವರಿ 12 ರಂದು ರಾಷ್ಟ್ರೀಯ ಬಸವದಳದ 30 ನೇ ಅಧಿವೇಶನ ಹಾಗೂ 2021 ರ ವಾರ್ಷಿಕ ಯೋಜನೆಯು ಡಾ. ಮಾತೆ ಗಂಗಾದೇವಿ ಅವರ ಸಾನಿಧ್ಯದಲ್ಲಿ ಜರುಗಲಿದ್ದು, ಸಚಿವೆ ಶಶಿಕಲಾ ಜೊಲ್ಲೆ ಅವರು ಬಸವತತ್ವದ ಅನರ್ಘ್ಯ ರತ್ನ ಮಾತೆ ಮಹಾದೇವಿ ಪುಸ್ತಕ ಬಿಡುಗಡೆಗೊಳಿಸುವರು. ಅಂದಿನ ಸಮಾರಂಭದಲ್ಲಿ ಶಿವಾನಂದ ನಾರಾ ಅವರಿಗೆ ಶರಣ ಕೃಷಿ ರತ್ನ, ವಿಜಯಕುಮಾರ ಮೇಳಕುಂದೆ ಅವರಿಗೆ ಶರಣ ದಾಸೋಹ ರತ್ನ, ಬಸವರಾಜ ಅಣಿ ಅವರಿಗೆ ಶರಣ ಸೇವಾ ರತ್ನ ಪ್ರಶಸ್ತಿ ನೀಡಲಿದೆ. ಅಂದು ಸಂಜೆ 6 ಕ್ಕೆ ಬಸವ ಧರ್ಮ ಮಾನ್ಯತೆಗಾಗಿ ರೂಪರೇಷೆಯ ಧರ್ಮ ಚಿಂಥನ ಗೋಷ್ಠಿ ನಡೆಯಲಿದೆ ಎಂದು ತಿಳಿಸಿದರು.
ಜ 13 ರಂದು ಚಿತ್ರದುರ್ಗ ಶ್ರೀ ಮುರಘಾಮಠದ ಡಾ. ಶಿವಮೂರ್ತಿ ಮುರಘಾ ಶರಣರ ಸಾನಿಧ್ಯದಲ್ಲಿ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರು ಶರಣ ಮೇಳ ಉದ್ಘಾಟಿಲಿದ್ದು, ಇಲಕಲ್ ಚಿತ್ತರಗಿ ಮಠದ ಗುರುಮಹಾಂತ ಸ್ವಾಮೀಜಿ ಬಸವ ಧರ್ಮ ಪೀಠದ ಜಾಲತಾಣವನ್ನು ಉದ್ಘಾಟಿಸುವರು. ಶಾಸಕ ಸತೀಶ ಜಾರಕಿಹೊಳಿ ವಚನ ಸಂಗಮ ಪುಸ್ತಕ ಬಿಡುಗಡೆ ಮಾಡಲಿದ್ದು, ಎಸ್.ಜಿ.ಸುಶೀಲಮ್ಮ ಅವರಿಗೆ ಲಿಂ ಶ್ರೀ ಡಾ. ಮಾತೆ ಮಹಾದೇವಿ ಅವರ ಸ್ಮರಣಾರ್ಥದ ಬಸವಾತ್ಮಜೆ ಪ್ರಶಸ್ತಿ ನೀಡಲಾಗುತ್ತದೆ. ಡಾ. ಶೈಲೇಂದ್ರ ಬೆಲ್ದಾಳೆ, ಬಾಬು ವಾಲಿ, ಬಸವರಾಜ ಧನ್ನೂರ, ವಿಜಯಕುಮಾರ ಸಾಹುಕಾರ ಅವರನ್ನು ಸತ್ಕರಿಸಲಾಗುತ್ತದೆ. ಅಂದು ಸಂಜೆ 5.30 ಕ್ಕೆ ಬಸವ ಧರ್ಮ ಮಹಾಜಗದ್ಗುರು ಪೀಠದ 29 ನೇ ಪೀಠಾರೋಹಣ ನಡೆಯಲಿದ್ದು ನಿಷ್ಕಲ ಮಂಟಪದ ನಿಜಗುಣಪ್ರಭು ತೋಂಟದಾರ್ಯ ಸ್ವಾಮೀಜಿ ಸಾನಿಧ್ಯವಹಿಸುವರು ಎಂದರು.
ಜನೇವರಿ 14 ರಂದು ಸಾಮೂಹಿಕ ಗುರು ಬಸವಾರ್ಚನೆ, ಸಮುದಾಯ ಪ್ರಾರ್ಥನೆ, ಬಸವ ಐಕ್ಯ ಮಂಟಪ ದರ್ಶನ, ಗಣಲಿಂಗ ದರ್ಶನ ಮತ್ತು ಸ್ಪರ್ಶನ, ಕುಸುರೆಳ್ಳು ವಿನಿಮಯ, ವಚನ ಪಠಣ ನಡೆಯಲಿದ್ದು, ಬೆಳಗ್ಗೆ 9 ಕ್ಕೆ ಸಮುದಾಯ ಪ್ರಾರ್ಥನೆ ಹಾಗೂ ವಚನ ಪಠಣ ಸೇರಿದಂತೆ ವಿವಿಧ ಕಾರ್ಯಕ್ರಮ ಜರುಗಲಿದೆ. ಸಂಜೆ 7 ಕ್ಕೆ ಸಾಮೂಹಿಕ ಇಷ್ಟಲಿಂಗಾರ್ಚನೆ ನಡೆಯಲಿದ್ದು ಬಸವಕುಮಾರ ಸ್ವಾಮೀಜಿ ಲಿಂಗಾಂಗಯೋಗ ಪ್ರಾತ್ಯಕ್ಷಿಕ ನಡೆಸಿಕೊಡುವರು.
ಸಮಾರಂಭದಲ್ಲಿ ಚನ್ನಬಸವಾನಂದ ಸ್ವಾಮೀಜಿ, ಸಿದ್ದರಾಮೇಶ್ವರ ಸ್ವಾಮೀಜಿ, ಬಸವ ಪ್ರಕಾಶ ಸ್ವಾಮೀಜಿ, ಮಹದೇಶ್ವರ ಸ್ವಾಮೀಜಿ, ಬಸವ ಕುಮಾರ ಸ್ವಾಮೀಜಿ, ಮಾತೆ ದಾನೇಶ್ವರಿ, ಮಾತೆ ಸತ್ಯಾದೇವಿ, ಮಾತೆ ಬಸವರತ್ನಾದೇವಿ, ಮಾತೆ ಓಂಕಾರೇಶ್ವರಿ, ಮಾತೆ ಸರ್ವ ಮಂಗಳಾದೇವಿ ಪಾಲ್ಗೊಳ್ಳುವರು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಮಲ್ಲೇಶಪ್ಪ ಕುಸುಗಲ್, ಪ್ರಕಾಶ ಗರಗ, ಸುಬ್ಬಣ್ಣ ಮ್ಯೆಸೂರ, ಶಿವಾನಂದ ಅಬಲೂರ, ಕೆ.ಎಸ್ ಕೋರಿಶೆಟ್ಟರ, ಎಸ್ ಎಲ್ ಎಮ್ಮಿ, ಚನಬಸಪ್ಪ. ಕಗ್ಗಣ್ಣವರ ಇದ್ದರು.