ಜ.12 ರಂದು ಶರಣ ಮೇಳ

ಹುಬ್ಬಳ್ಳಿ,ಜ9: ಲಿಂಗಾಯತ ಧರ್ಮ ಸಂಸ್ಥಾಪಕ ದಿನದ ಅಂಗವಾಗಿ 36 ನೇ ಶರಣ ಮೇಳ – 2023 ನ್ನು ಜ.12 ರಿಂದ 14 ರವರೆಗೆ ಕೂಡಲಸಂಗಮ ಸುಕ್ಷೇತ್ರದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಬಸವ ಪ್ರಕಾಶ ಸ್ವಾಮೀಜಿ ಹೇಳಿದರು.
ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 1988 ರಲ್ಲಿ ಲಿಂಗೈಕ್ಯರಾದ ಲಿಂಗಾನಂದ ಸ್ವಾಮೀಜಿಯವರು ಮತ್ತು ಮಹಾ ಜಗದ್ಗುರು ಮಾತೆ ಮಹಾದೇವಿಯವರಿಂದ ಸ್ಥಾಪನೆಗೊಳಿಸಿದಂತಹ ಶರಣ ಮೇಳವು ಈ ವರ್ಷ ಮಹಾಜಗದ್ಗುರು ಗಂಗಾದೇವಿ ಮಾತಾಜಿಯವರ ನೇತೃತ್ವದಲ್ಲಿ ಜ.9 ರಿಂದ ವಚನ ಪಠಣದಿಂದ ಆರಂಭವಾಗಿ 12 ರಂದು ರಾಷ್ಟ್ರೀಯ ಬಸವದಳದ ಮಹಾಸಮಾವೇಶವು ಜರುಗಲಿದೆ. ಈ ಸಮಾವೇಶ ಕೂಡಲಸಂಗಮದ ಬಸವ ಜಯ ಮೃತ್ಯುಂಜಯ ಸ್ವಾಮೀಜಿ, ಬಸವಕಲ್ಯಾಣದ ಅಕ್ಕ ಗಂಗಾಂಬಿಕೆ ಹರಳಯ್ಯಪೀಠ, ಉಳವಿಯ ಮಾತೆ ದಾನೇಶ್ವರಿ ನೇತೃತ್ವ ವಹಿಸಲಿದ್ದಾರೆ ಎಂದರು.
ಜ.13 ರಂದು ಶರಣ ಮೇಳವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉದ್ಘಾಟನೆ ಮಾಡಲಿದ್ದು, ಹೊಸದುರ್ಗದ ಸಾಣೆಹಳ್ಳಿಯ ಶಿವಾಚಾರ್ಯ ಸ್ವಾಮೀಜಿ ದಿವ್ಯ ಸಾನಿಧ್ಯವನ್ನು ವಹಿಸಲಿದ್ದಾರೆ. ಬಸವ ವಚನಾಮೃತ ಗ್ರಂಥ ಲೋಕಾರ್ಪಣೆಯನ್ನು ಸಚಿವ ಗೋವಿಂದ ಕಾರಜೋಳ ಮಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಸಚಿವ ಸಿ.ಸಿ.ಪಾಟೀಲ್, ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಸೇರಿದಂತೆ ಮುಂತಾದ ಗಣ್ಯಮಾನ್ಯರು ಭಾಗವಹಿಸಲಿದ್ದಾರೆ. ನಂತರ ಸಾಧಕರಿಗೆ ಶರಣ ರತ್ನ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಹೇಳಿದರು.
ಜ.14 ರಂದು ಬಸವ ಕ್ರಾಂತಿ ದಿನದ ಲಿಂಗಾಯತ ಧರ್ಮ ಸಂಸ್ಥಾಪನಾ ಅಂಗವಾಗಿ ಧ್ವಜಾರೋಹಣ, ಸಮುದಾಯ ಪ್ರಾರ್ಥನೆ ಮತ್ತು ವಚನ ಪಠಣ ನೆರವೇರಿಸಲಾಗುವುದು ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನೆರವೇರುವುದು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಲಿಂಗಾಯತ ಧರ್ಮ ಮಹಾಸಭಾದ ಜಿಲ್ಲಾಧ್ಯಕ್ಷ ಶರಣ ಎಸ್.ಬಿ.ಜೋಡಳ್ಳಿ, ಹೈಕೋರ್ಟ್ ನ್ಯಾಯವಾದಿ ಕೆ.ಎಸ್.ಕೋರಿಶೆಟ್ಟರ, ಬಸವರಾಜ ಲಿಂಗಶೆಟ್ಟರ ಸೇರಿದಂತೆ ಮುಂತಾದವರು ಇದ್ದರು.