ಜ.1ರಿಂದ ಅತಿಥಿ ಉಪನ್ಯಾಸಕರ ಪಾದಯಾತ್ರೆ, ಬೆಂಗಳೂರಿನಲ್ಲಿ ಉಪವಾಸ ಸತ್ಯಾಗ್ರಹ

ಸಂಜೆವಾಣಿ ವಾರ್ತೆ

ದಾವಣಗೆರೆ.ಜ.೧; ಸೇವೆ ಕಾಯಂಗೆ ಒತ್ತಾಯಿಸಿ ಕಳೆದ 40 ದಿನಗಳಿಂದಲೂ ಸೇವಾ ಖಾಯಂಗೆ ಆಗ್ರಹಿಸಿ ನಿರಂತರವಾಗಿ ವಿವಿಧ ಹಂತದಲ್ಲಿ ಹೋರಾಟ ನಡೆಸಿಕೊಂಡು ಬಂದಿರುವ ರಾಜ್ಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರು ಜನವರಿ 1ರಿಂದ ತುಮಕೂರಿನಿಂದ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದವರೆಗೆ ಪಾದಯಾತ್ರೆ ಹಮ್ಮಿಕೊಳ್ಳಲು ನಿರ್ಧರಿಸಿದೆ ಎಂದು ದಾವಣಗೆರೆ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಶ್ಯಾಮ್ ಪ್ರಸಾದ್ ತಿಳಿಸಿದರು. ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಜನವರಿ 1ರಂದು ಬೆಳಿಗ್ಗೆ 10ಕ್ಕೆ ತುಮಕೂರಿನ ಸಿದ್ದಗಂಗಾ ಮಠದಿಂದ ಪಾದಯಾತ್ರೆ ಆರಂಭ ಅಗಲಿದ್ದು, ಸಿದ್ದಗಂಗಾ ಮಠದ ಸಿದ್ಧಲಿಂಗ ಸ್ವಾಮಿಗಳ ಅಶೀರ್ವಚನದ ನಂತರ ಆರಂಭ ಆಗಲಿದೆ. ರಾಜ್ಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರ ಸಂಘದ ರಾಜಾಧ್ಯಕ್ಷ ಹನುಮಂತ ಗೌಡ ಕಲ್ಮನಿ ನೇತೃತ್ವ ವಹಿಸುವರು. ನಂತರ ಅಲ್ಲಿಂದ ಸಾಗುವ ಪಾದಯಾತ್ರೆ ಬೆಂಗಳೂರಿಗೆ ತಲುಪಿ ಅನಿರ್ದಿಷ್ಟಧಿಯ ಅಮರಣಾಂತರ ಉಪವಾಸ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗುವುದು ಎಂದು ಹೇಳಿದರು.ದಾವಣಗೆರೆ ಜಿಲ್ಲೆಯ 10 ಕಾಲೇಜುಗಳಲ್ಲಿ 350ಕ್ಕೂ ಹೆಚ್ಚು ಅತಿಥಿ ಉಪನ್ಯಾಸಕರು ಸೇವೆ ಸಲ್ಲಿಸುತ್ತಿದ್ದಾರೆ. ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುವ ಮುನ್ನ ತನ್ನ ಪ್ರನಾಳಿಕೆಯಲ್ಲಿ ಅತಿಥಿ ಉಪನ್ಯಾಸಕರನ್ನು ಖಾಯಂ ಮಾಡುವುದಾಗಿ ಹೇಳಿತ್ತು. ಆದರೆ ಇದೀಗ ಅಧಿಕಾರಕ್ಕೆ ಬಂದರೂ ಸಹ ಈ ಬಗ್ಗೆ ಕ್ರಮ ಕೈಗೊಳ್ಳಲು ಮುಂದಾಗದೇ ಮೂಗಿಗೆ ತುಪ್ಪ ಸವರುವ ಕೆಲಸ ಮಾಡುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.ಜೀತಕ್ಕಿಂತಲೂ ಕಡೆಯಾಗಿ ನಾವು ಕೆಲಸ ಮಾಡುತ್ತಿದ್ದರೂ ಅದ್ಯಾವುದರ ಪರಿವೆ ಇಲ್ಲದೇ ಸರ್ಕಾರ ಮೌನವಹಿಸಿದೆ. ಸರ್ಕಾರವು ನಮ್ಮ ಬದುಕು, ಭವಿಷ್ಯವನ್ನೇ ಅತಂತ್ರ ಸ್ಥಿತಿಗೆ ನೂಕಿ, ನಮ್ಮ ಕೈಗಳನ್ನೂ ಕಟ್ಟಿ ಹಾಕಿದೆ. ಎಲ್ಲಾ  ಸರ್ಕಾರಗಳು ಅತಿಥಿ ಬೋಧಕರ ವಿಚಾರದಲ್ಲಿ ಸುಳ್ಳುಗಳನ್ನು ಹೇಳುತ್ತಲೇ ಕಾಲಹರಣ ಮಾಡುತ್ತಿವೆ ಎಂದು ಆಕ್ರೋಶ ಹೊರ ಹಾಕಿದರು. ನಮ್ಮ ಹೋರಾಟಕ್ಕೆ ಸಾರ್ವಜನಿಕರು, ಸಂಘ-ಸಂಸ್ಥೆಗಳು, ಸಂಘಟನೆಗಳು, ವಿದ್ಯಾರ್ಥಿಗಳು, ಯುವ ಜನರು ಬೆಂಬಲಿಸುತ್ತಿದ್ದಾರೆ. ಅತಿಥಿ ಬೋಧಕರನ್ನು ಅವಲಂಭಿಸಿ, ರಾಜ್ಯ ವ್ಯಾಪಿ ಲಕ್ಷಾಂತರ ಜನರು ಬಾಳು ನಡೆಸುತ್ತಿದ್ದಾರೆ. ಅತಿಥಿ ಬೋಧಕರು ಉನ್ನತ ಶಿಕ್ಷಣ ಪಡೆದವರಾಗಿದ್ದು, ಓದಿಗೆ ತಕ್ಕಂತೆ ಸರ್ಕಾರ ಮನ್ನಣೆ ನೀಡುತ್ತಿಲ್ಲ ಎಂದು ಬೇಸರ ವ್ಯಕ್ತ ಪಡಿಸಿದರು.ಸುದ್ದಿಗೋಷ್ಟಿಯಲ್ಲಿ ಎಸ್. ಶುಭಾ, ಕಳಕಪ್ಪ ಚೌರಿ, ಎಂ.ಜಗದೀಶ್, ಎಸ್.ವೈ.ಚಂದ್ರಿಕಾ, ಕೆ.ಮೋಹನ್ ಇತರರು ಇದ್ದರು.