ಜ. ೭ರವರೆಗೆ ಇಂಗ್ಲೆಂಡ್ ವಿಮಾನ ಸಂಚಾರ ನಿಷೇಧ


ನವದೆಹಲಿ, ಡಿ.೩೦- ಇಂಗ್ಲೆಂಡ್‌ನಲ್ಲಿ ಕಾಣಿಸಿಕೊಂಡಿರುವ ರೂಪಾಂತರ ಕೊರೊನಾ ಸೋಂಕು ಹಿನ್ನೆಲೆಯಲ್ಲಿ ಡಿಸೆಂಬರ್ ೩೧ರ ತನಕ ಅಲ್ಲಿಂದ ಬರುವ ಎಲ್ಲ ವಿಮಾನ ಸೇವೆಯನ್ನು ತಾತ್ಕಾಲಿಕವಾಗಿ ರದ್ದು ಮಾಡಿದ್ದ ಕ್ರಮವನ್ನು ಭಾರತ, ಇದೀಗ ಮತ್ತೆ ಜನವರಿ ೭ರ ತನಕ ವಿಸ್ತರಿಸಿದೆ.
ದೇಶದಲ್ಲಿ ೨೦ ಮಂದಿಗೆ ರೂಪಾಂತರ ಕೊರೊನಾ ಸೋಂಕು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಇಂತಹದೊಂದು ಮಹತ್ವದ ನಿರ್ಧಾರ ಕೈಗೊಂಡಿದೆ ಎಂದು ಕೇಂದ್ರ ನಾಗರಿಕ ವಿಮಾನಯಾನ ಸಚಿವ ಹರ್ ದೀಪ್ ಸಿಂಗ್ ಪುರಿ ಹೇಳಿದ್ದಾರೆ. ಈ ಸಂಬಂಧ ಟ್ವೀಟ್ ಮಾಡಿರುವ ಅವರು ಇಂಗ್ಲೆಂಡ್‌ನಿಂದ ಭಾರತಕ್ಕೆ ಬರುವ ಎಲ್ಲ ವಿಮಾನಗಳನ್ನು ಜನವರಿ ೭ರ ತನಕ ನಿಷೇಧಿಸಲಾಗಿದೆ. ಪರಿಸ್ಥಿತಿಯನ್ನು ಆಧರಿಸಿ ಮುಂದಿನ ನಿರ್ಧಾರ ಕೈಗೊಳ್ಳಲು ಕೇಂದ್ರ ಮುಂದಾಗಿದೆ. ಸದ್ಯದಲ್ಲೇ ಈ ಸಂಬಂಧ ಅಭಿವೃದ್ಧಿ ಮಾರ್ಗಸೂಚಿ ಪ್ರಕಟಿಸುವುದಾಗಿ ಅವರು ಹೇಳಿದ್ದಾರೆ.
ಇಂಗ್ಲೆಂಡ್‌ನಿಂದ ಭಾರತಕ್ಕೆ ಬಂದ ಎಲ್ಲಾ ಪ್ರಯಾಣಿಕರನ್ನು ವಿಮಾನ ನಿಲ್ದಾಣದಲ್ಲಿ ಆರ್ ಟಿ- ಪಿ ಸಿಆರ್ ಪರೀಕ್ಷೆ ನಡೆಸಲಾಗಿದೆ ಮತ್ತು ಅವರ ಸಂಪರ್ಕಕ್ಕೆ ಬಂದಿರುವ ಎಲ್ಲರ ಆರೋಗ್ಯ ಪರೀಕ್ಷೆ ನಡೆಸಲು ಸೂಚಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ಹೊಸ ಮಾದರಿಯ ಸೋಂಕು ಇಂಗ್ಲೆಂಡ್ ನಲ್ಲಿ ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಅಲ್ಲಿಂದ ಬರುವ ಎಲ್ಲ ವಿಮಾನಗಳನ್ನು ತಾತ್ಕಾಲಿಕವಾಗಿ ರದ್ದು ಮಾಡಿ ಕೇಂದ್ರ ಸರ್ಕಾರ ನಿರ್ಧಾರ ಕೈಗೊಂಡಿದೆ
ನವೆಂಬರ್ ೨೫ ರಿಂದ ಡಿಸೆಂಬರ್ ೨೫ರ ತನಕ ಇಂಗ್ಲೆಂಡಿನಿಂದ ಭಾರತಕ್ಕೆ ೩೩ ಸಾವಿರಕ್ಕೂ ಅಧಿಕ ಮಂದಿ ಪ್ರಯಾಣಿಕರು ಆಗಮಿಸಿ
ದ್ದಾರೆ ಅದರಲ್ಲಿ ೨೦ ಮಂದಿಗೆ ಹೊಸ ಮಾದರಿಯ ಕೊರೋನಾ ಸೋಂಕು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಈ ನಿರ್ಧಾರ ಕೈಗೊಂಡಿದೆ.