ಜ.೬ ಕ್ಕೆ ಕುರುಬ ಸಮಾಜದ ಸಮಾವೇಶ

ದಾವಣಗೆರೆ.ಡಿ.೨೭; ಕುರುಬ ಸಮುದಾಯನ್ನು ಎಸ್ಟಿಗೆ ಸೇರಿಸಬೇಕೆಂದು ಆಗ್ರಹಿಸಿ ಜ.6ರಂದು ದಾವಣಗೆರೆ ನಗರದಲ್ಲಿ ಹಾವೇರಿ, ದಾವಣಗೆರೆ, ಚಿತ್ರದುರ್ಗ ಜಿಲ್ಲೆಗಳನ್ನೊಳಗೊಂಡ ಕುರುಬರ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಎಸ್ಟಿ ಕುರುಬರ ಹೋರಾಟ ಸಮಿತಿ ರಾಜ್ಯ ಕಾರ್ಯಾಧ್ಯಕ್ಷ ಎಚ್.ಎಂ.ರೇವಣ್ಣ ತಿಳಿಸಿದರು.ನಗರದಲ್ಲಿ  ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಸ್ಟಿ ಮೀಸಲಾತಿಗೆ ಒತ್ತಾಯಿಸಿ ಜ.15ರಿಂದ ಕಾಗಿನೆಲೆಯಿಂದ ಬೆಂಗಳೂರಿನ ವರೆಗೆ ಆಯೋಜಿಸಿರುವ ಪಾದಯಾತ್ರೆಯ ಪೂರ್ವಭಾವಿಯಾಗಿ  ಜ.4ರಂದು ಬಳ್ಳಾರಿ, ಕೊಪ್ಪಳ ಜಿಲ್ಲೆಗಳ, ಜ.6ರಂದು ಹಾವೇರಿ, ದಾವಣಗೆರೆ, ಚಿತ್ರದುರ್ಗ ಜಿಲ್ಲೆಗಳ, ಜ.7ರಂದು ಶಿವಮೊಗ್ಗ, ಚಿಕ್ಕಮಗಳೂರು ಜಿಲ್ಲೆಗಳ, ಜ.9ರಂದು ಮೈಸೂರು ವಿಭಾಗದ ಸಮಾವೇಶ ಆಯೋಜಿಸಲಾಗುವುದು ಎಂದರು.ಸಮಾಜದ ಎಲ್ಲಾ ಧುರೀಣರು ಪಕ್ಷಾತೀತವಾಗಿ ಚರ್ಚೆ ಮಾಡಿ, ಎಲ್ಲರನ್ನೂ ಒಳಗೊಂಡಂತೆ ಸಮಿತಿ ರಚಿಸಿ, ಎಸ್ಟಿ ಹೋರಾಟ ಆರಂಭಿಸಲಾಗಿದೆ. ಇದರ ನೇತೃತ್ವವನ್ನು ಕಾಗಿನೆಲೆ ಕನಕ ಗುರುಪೀಠ ವಹಿಸಿಕೊಂಡಿದ್ದು, ಈ ಹೋರಾಟದಲ್ಲಿ ಪಾಲ್ಗೊಳ್ಳಲು ಸಮಾಜ ಬಾಂಧವರು ಉತ್ಸುಕರಾಗಿದ್ದಾರೆ ಎಂದು ಹೇಳಿದರು.ಮಾಜಿ ಸಿಎಂ ಸಿದ್ದರಾಮಯ್ಯನವರು ಕುರುಬ ಸಮಾಜದ ಪ್ರಶ್ನಾತೀತ ನಾಯಕರು. ಅದರಲ್ಲಿ ಎರಡು ಮಾತಿಲ್ಲ. ಆದರೆ, ಅವರು ಯಾವ ಆಯಾಮದಿಂದ ಈ ಹೋರಾಟದ ಹಿಂದೆ ಆರ್‌ಎಸ್‌ಎಸ್ ಕೈವಾಡ ಇದೆ ಎಂಬುದಾಗಿ ಹೇಳಿದ್ದಾರೆ ಎಂಬುದನ್ನು ಕುರಿತು ಚರ್ಚಿಸಿ, ನಮ್ಮ ಮಧ್ಯೆ ಇರುವ ವ್ಯತ್ಯಾಸವನ್ನು ಸರಿಪಡಿಸಿಕೊಳ್ಳುತ್ತೇವೆ. ಕುರುಬರ ಎಸ್ಟಿ ಹೋರಾಟಕ್ಕೂ ಮತ್ತು ಆರ್‌ಎಸ್‌ಎಸ್‌ಗೂ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದರು.ಸುದ್ದಿಗೋಷ್ಠಿಯಲ್ಲಿ ಹೋರಾಟ ಸಮಿತಿಯ ಬಿ.ಎಂ.ಸತೀಶ್, ರಾಜನಹಳ್ಳಿ ಶಿವಕುಮಾರ್, ಹದಡಿ ನಿಂಗಪ್ಪ, ಮುದಹದಡಿ ದಿಳ್ಯಪ್ಪ, ಕಂಬಳೂರು ವಿರೂಪಾಕ್ಷಪ್ಪ, ಜಿಹ್ವೇಶ್ವರಿ, ಬಳ್ಳಾರಿ ಈರಮ್ಮ, ಜಯಮ್ಮ, ಸೊಕ್ಕೆ ನಾಗರಾಜ್ ಮತ್ತಿತರರು ಹಾಜರಿದ್ದರು.