ಜ.೬ ಕ್ಕೆ ಕುರುಬ ಸಮಾಜದಿಂದ ಜನಜಾಗೃತಿ ಸಮಾವೇಶ

ದಾವಣಗೆರೆ.ಜ.೪; ಕುರುಬ ಸಮಾಜಕ್ಕೆ ಎಸ್ ಟಿ ಮೀಸಲಾತಿ ನೀಡಬೇಕೆಂದು ಒತ್ತಾಯಿಸಿ ಜ.೬ ರಂದು ಚಿತ್ರದುರ್ಗ,ದಾವಣಗೆರೆ ಹಾಗೂ ಹಾವೇರಿ ಜಿಲ್ಲೆಯ ಸಮಾಜಬಾಂಧವರಿಂದ ಜನಜಾಗೃತಿ ಸಮಾವೇಶ ಹಮ್ಮಿಕೊಳ್ಳಲಾಗಿದೆ.ಈ ಸಮಾವೇಶದಲ್ಲಿ ಸುಮಾರು ೨೫ ಕ್ಕೂ ಹೆಚ್ಚು ಜನರು ಭಾಗವಹಿಸಲಿದ್ದಾರೆ ಎಂದು ದೂಡಾ ಅಧ್ಯಕ್ಷ ಹಾಗೂ ಕುರುಬ ಸಮಾಜದ ಮುಖಂಡ ರಾಜನಹಳ್ಳಿ ಶಿವಕುಮಾರ್ ಹೇಳಿದರು. ನಗರದ ಬೀರಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಜಿಲ್ಲೆಯಾದ್ಯಂತ ಗ್ರಾಮೀಣಮಟ್ಟದಲ್ಲಿ ನಮ್ಮ ಹಿರಿಯ ಮುಖಂಡರು ಹಾಗೂ ಯುವಕರು ಸಭೆಗಳನ್ನು ನಡೆಸಿ ಸ್ವಯಂ ಪ್ರೇರಣೆಯಿಂದ ಜನಜಾಗೃತಿ ಸಮಾವೇಶಕ್ಕೆ ಆಗಮಿಸಿ ಕುರುಬ ಸಮಾಜದ ಮುಖ್ಯ ಬೇಡಿಕೆ ಈಡೇರಿಕೆಗೆ ಸರ್ಕಾರದ ಗಮನಸೆಳೆಯಲಿದ್ದಾರೆ.ರಾಜ್ಯದಲ್ಲಿ ಶೈಕ್ಷಣಿಕವಾಗಿ,ಆರ್ಥಿಕವಾಗಿ ಹಿಂದುಳಿದ ಸಮಾಜ ಕುರುಬ ಸಮಾಜವಾಗಿದೆ.ಕೇವಲ ನಗರ ಮಟ್ಟದಲ್ಲಿ ಮಾತ್ರ ಕೆಲ ಸಮಾಜಬಾಂಧವರು ಉನ್ನತ ಸ್ಥಾನದಲ್ಲಿದ್ದಾರೆ ಆದರೆ ಗ್ರಾಮೀಣಭಾಗದಲ್ಲಿ ಇಂದಿಗೂ ಸಮಾಜ ಬಾಂಧವರು ಹಿಂದುಳಿದಿದ್ದಾರೆ.ಹಳ್ಳಿಗಳಲ್ಲಿ ಇಂದಿಗೂ ಸಮಾಜಬಾಂಧವರು ಕುರಿಗಳನ್ನು ಕಾಯುತ್ತಾ,ಕೂಲಿ ಮಾಡುತ್ತಾ ಜೀವನ ಸಾಗಿಸುತ್ತಿದ್ದಾರೆ.ಅವರೆಲ್ಲರೂ ಶೈಕ್ಷಣಿಕವಾಗಿ ಅತ್ಯಂತ ಹಿಂದುಳಿದಿದ್ದಾರೆ. ಕುರುಬ ಸಮಾಜದ ಬುಡಕಟ್ಟು ಭಾಗದಲ್ಲಿ ಜೀವನ ಇಂದಿಗೂ ಕಠಿಣವಾಗಿದೆ.ಜನರು ಟೆಂಟ್ ಗಳಲ್ಲಿ ವಾಸಮಾಡುತ್ತಿದ್ದಾರೆ. ಕೆಲವರುಅಲೆಮಾರಿಗಳಾಗಿದ್ದಾರೆ.ಅವರಿಗೆ ಸೂಕ್ತ ನೆಲೆ ಕಲ್ಪಿಸಬೇಕಿದೆ ಅದಕ್ಕಾಗಿ ಸರ್ಕಾರ ಮೀಸಲಾತಿ ನೀಡುವುದು ಅವಶ್ಯವಾಗಿದೆ.ಅದಕ್ಕಾಗಿ ಮೀಸಲಾತಿ ನೀಡಲು ಹೋರಾಟ ಹಮ್ಮಿಕೊಳ್ಳಲಾಗಿದೆ ಎಂದರು. ಮೂರು ಜಿಲ್ಲೆಯ ಜನರು ಹೆಚ್ಚಿನ ಸಂಖ್ಯೆಯಲ್ಲಿ ಜನಜಾಗೃತಿ ಸಮಾವೇಶದಲ್ಲಿ ಭಾಗವಹಿಸ ಬೇಕೆಂದು ಮನವಿ ಮಾಡಿದರು. ಈ ವೇಳೆ ಮುಖಂಡರಾದ ಬಿಎಂ ಸತೀಶ್, ಜಿ.ಪಂ ಸದಸ್ಯರಾದ ಹದಡಿ ನಿಂಗಪ್ಪ, ಜಯಶೀಲ, ಮಾಜಿ ಕಾರ್ಪೋರೇಟರ್ ತಿಪ್ಪಣ್ಣ, ಮಾಜಿ ಮೇಯರ್ ಹೆಚ್ ಎನ್ ಗುರುನಾಥ್, ಎಪಿಎಂಸಿ ಮಾಜಿ ಅಧ್ಯಕ್ಷ ಗಣೇಶಪ್ಪ, ಜೆಸಿ ದೇವರಾಜ್, ವೀರಣ್ಣ ಇದ್ದರು..