ಜ.೨೭ ಚಿನ್ನಮ್ಮ ಜೈಲಿನಿಂದ ಬಿಡುಗಡೆ ಅದ್ದೂರಿ ಸ್ವಾಗತಕ್ಕೆ ಸಿದ್ದತೆ


ಬೆಂಗಳೂರು,ಜ.೧೩-ಕಳೆದ ನಾಲ್ಕು ವರ್ಷಗಳಿಂದ ಪರಪ್ಪನ ಆಗ್ರಹಾರ ಜೈಲಿನಲ್ಲಿ ಶಿಕ್ಷೆ ಅನುಭವಿಸಿರುವ ಮಾಜಿ ಮುಖ್ಯಮಂತ್ರಿ ದಿ.ಜಯಲಲಿತಾ ಆಪ್ತೆ ಶಶಿಕಲಾ ಇನ್ನೂ ಎರಡೇ ವಾರದಲ್ಲಿ ಜೈಲಿನಿಂದ ಬಿಡುಗಡೆಯಾಗಲಿದ್ದಾರೆ.
ಜೈಲಿನಿಂದ ಬಿಡುಗಡೆಯಾಗಲಿರುವ ಶಶಿಕಲಾ ಅವರಿಗೆ ಭವ್ಯ ಸ್ವಾಗತ ಕೋರಲು ತಮಿಳುನಾಡಿನಲ್ಲಿ ಭರ್ಜರಿ ಸಿದ್ಧತೆ ನಡೆದಿದ್ದು ವಿಧಾನಸಭಾ ಚುನಾವಣೆ ಹಿನ್ನಲೆಯಲ್ಲಿ ಶಶಿಕಲಾ ರಾಜಕೀಯ ಸಂಚಲನ ಸೃಷ್ಟಿಸುವ ಸಾಧ್ಯತೆ ಇದೆ.
ಶಶಿಕಲಾ ಅವರ ಮುನ್ನವೇ ಆಕೆಯ ಸಹಚರ ಸುಧಾಕರನ್? ಬಿಡುಗಡೆಯಾಗಬೇಕಿತ್ತು. ಆದರೆ, ಹತ್ತು ಕೋಟಿ ದಂಡ ಪಾವತಿ ಮಾಡದ ಹಿನ್ನಲೆಯಲ್ಲಿ ಸುಧಾಕರನ್ ಕೂಡ ಶಶಿಕಲಾ ಜೊತೆ ಬಿಡುಗಡೆ ಮಾಡಲು ತಂತ್ರ ರೂಪಿಸಿದ್ದಾರೆ.
ಸುಧಾಕರನ್ ಗೆ ಇದೇ ತಿಂಗಳ ೧೪ ರ ಒಳಗೆ ಬಿಡುಗಡೆಗೆ ಅವಕಾಶವಿತ್ತು. ಹತ್ತುಕೋಟಿ ದಂಡ ಕಟ್ಟಿದ್ದರೆ ಇಷ್ಟರಲ್ಲಾಗಲೇ ಸುಧಾಕರನ್ ಬಿಡುಗಡೆಯಾಗುತ್ತಿದ್ದರು ಆದರೆ ಇನ್ನು ದಂಡದ ಹಣ ಪಾವತಿ ಮಾಡಿಸದೆ ಒಟ್ಟಿಗೆ ಬಿಡುಗಡೆಯಾಗಲು ಜೈಲಲ್ಲೇ ತಂತ್ರಹೆಣೆಯಲಾಗಿದೆ.
ಈ ಮೂಲಕ ಶಶಿಕಲಾ , ಸುಧಾ ಕರನ್, ಇಳವರಿಸಿ ಜೈಲಿನಿಂದ ಒಟ್ಟಿಗೆ ಬಿಡುಗಡೆಯಾಗುವ ಸಾಧ್ಯತೆ ಇದೆ.
ಪರಪ್ಪನ ಅಗ್ರಹಾರದಿಂದ ತಮಿಳು ನಾಡಿವರೆಗೂ ಚಿನ್ನಮ್ಮರಿಗೆ ಅದ್ದೂರಿ ಮೆರವಣಿಗೆಗೆ ಸಿದ್ದತೆ ನಡೆಸಲಾಗಿದೆ. ಶಶಿಕಲಾ ಬಿಡುಗಡೆ ದಿನ ಜೈಲಿನ ಬಳಿ ಒಂದು ಲಕ್ಷ ಮಂದಿ ಜಮಾವಣೆ ನಿರೀಕ್ಷೆ ಇದೆ.ಐದು ಸಾವಿರಕ್ಕೂ ಹೆಚ್ಚು ವಾಹನಗಳು ತಮಿಳುನಾಡಿನಿಂದ ಪರಪ್ಪನ ಅಗ್ರಹಾರ ಜೈಲಿನ ಬಳಿ ಬರುವ ಸಾಧ್ಯತೆ ಇದೆ. ಈ ಮೂಲಕ ರಾಜಕೀಯ ಬೆಳವಣಿಗೆಯನ್ನ ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದು ಮೂಲಕ ಶಶಿಕಲಾ ಶಕ್ತಿ ಪ್ರದರ್ಶಿಸುವ ಪ್ರಯತ್ನ ನಡೆಸಲಾಗಿದೆ.
ಈ ಬಗ್ಗೆ ರಾಜ್ಯ ಗುಪ್ತಚರ ಇಲಾಖೆಗೆ ಮಾಹಿತಿ ರವಾನೆಯಾಗಿದ್ದು, ಬಿಗಿ ಭದ್ರತೆಯೊಂದಿಗೆ ಎಚ್ಚರಿಕೆಯಿಂದ ಇರುವಂತೆ ಸೂಚನೆ ನೀಡಲಾಗಿದೆ.
೧೯೯೭ ರಲ್ಲಿ ಬೆಳಕಿಗೆ ಬಂದ ಜಯಲಲಿತಾ ಅಕ್ರಮ ಹಣ ಸಂಪಾದನೆ ಪ್ರಕರಣದಲ್ಲಿ ಎರಡು ಬಾರಿ ಶಶಿಕಲಾ ಬಂಧನಕ್ಕೆ ಒಳಗಾಗಿದ್ದಾರೆ. ೧೯೯೭ರಲ್ಲಿ ಮೊದಲ ಬಾರಿ ಇವರನ್ನು ಬಂಧಿಸಲಾಗಿತ್ತು.
ಇದಾದ ನಂತರ ಪುನಃ ೨೦೧೪ ರಲ್ಲಿ ಮತ್ತೆಬಂಧಿಸಿ ಕೊನೆಗೆ ಕೇಸ್ ಟ್ರಾಯಲ್ ನಡೆದು ಕೋರ್ಟ್ ಶಿಕ್ಷೆಯನ್ನು ಘೋಷಿಸಿತ್ತು. ಬಳಿಕ ಕೋರ್ಟ್ ಶಶಿಕಲಾಗೆ ೪ ವರ್ಷ ಜೈಲು ೧೦ ಕೋಟಿ ದಂಡ ವಿಧಿಸಿತ್ತು. ೨೦೧೭ ಜೈಲು ಸೇರಿದ ಶಶಿಕಲಾ ೧೭ ದಿನಗಳು ಪೆರೋಲ್ ಹೋಗಿದ್ದು, ಅದರಲ್ಲಿ ಪತಿಯ ಅನಾರೋಗ್ಯದಿಂದ ೫ ದಿನ ಹೋಗಿದ್ದು ಪತಿ ನಟರಾಜನ್ ಸಾವನ್ನಪ್ಪಿದ ದಿನ ೧೨ ದಿನ ಪೆರೋಲ್ ಪಡೆದಿದ್ದರು. ಈಗ ನಾಲ್ಕು ವರ್ಷ ಶಿಕ್ಷೆ ಪೂರೈಸಿರುವ ಅವರು ಜ. ೨೭ರಂದು ಬಿಡುಗಡೆಯಾಗಲಿದ್ದಾರೆ.