ಜ.೨೬: ರೈತರ ಟ್ರಾಕ್ಟರ್ ರ್‍ಯಾಲಿ ತಡೆಗೆ ಸುಪ್ರೀಂಗೆ ಮನವಿ


ನವದೆಹಲಿ, ಜ. ೧೨- ನೂತನ ಕೃಷಿ ಕಾಯ್ದೆಗಳನ್ನು ಹಿಂಪಡೆಯುವಂತೆ ರೈತರು ಒಂದೂವರೆ ತಿಂಗಳಿನಿಂದ ಪ್ರತಿಭಟನೆ ನಡೆಸುತ್ತಿದ್ದರೂ ಕೇಂದ್ರ ಸರ್ಕಾರ ಅನ್ನದಾತನ ಹೋರಾಟಕ್ಕೆ ಬೆಲೆ ಕೊಡದ ಹಿನ್ನೆಲೆಯಲ್ಲಿ ಜನವರಿ ೨೬ರ ಗಣರಾಜ್ಯೋತ್ಸವ ದಿನದಂದು ದೆಹಲಿಯಲ್ಲಿ ರೈತರು ನಡೆಸಲು ನಿರ್ಧರಿಸಿರುವ ಟ್ರಾಕ್ಟರ್ ರ್‍ಯಾಲಿಯನ್ನು ತಡೆಯುವಂತೆ ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್‌ಗೆ ಮನವಿ ಮಾಡಿದೆ.
ಹರಿಯಾಣದ ರೈತರು ಸಾವಿರಾರು ಸಂಖ್ಯೆಯಲ್ಲಿ ದೆಹಲಿಗೆ ಟ್ರಾಕ್ಟರ್ ರ್‍ಯಾಲಿ ನಡೆಸಲು ಉದ್ದೇಶಿಸಿದ್ದಾರೆ. ಇವರ ಜೊತೆಗೆ ಪಂಜಾಬ್ ಸೇರಿದಂತೆ ವಿವಿಧ ರಾಜ್ಯಗಳ ರೈತರು ಕೈಜೋಡಿಸುವ ಸಾಧ್ಯತೆಗಳಿವೆ.
ಈಗಾಗಲೇ ಹರಿಯಾಣದಲ್ಲಿ ಪ್ರತಿ ಹಳ್ಳಿಗೆ ಒಂದು ಟ್ರಾಕ್ಟರ್ ನಂತೆ ಟ್ರಾಕ್ಟರ್ ರ್‍ಯಾಲಿಯಲ್ಲಿ ಎಲ್ಲರೂ ಪಾಲ್ಗೊಳ್ಳುವಂತೆ ರೈತರಿಗೆ ಸೂಚಿಸಲಾಗಿದೆ. ಸರಿ ಸುಮಾರು ೨೦ ಸಾವಿರಕ್ಕೂ ಹೆಚ್ಚು ರೈತರು ದೆಹಲಿ ಚಲೋ ನಡೆಸಲಿದ್ದಾರೆ.
ಜನವರಿ ೨೬ರಂದು ನಡೆಸಲಿರುವ ದೆಹಲಿ ಟ್ರಾಕ್ಟರ್ ಚಲೋ ಅಂಗವಾಗಿ ಇದೇ ತಿಂಗಳ ೨೩ರಂದು ರೈತರು ತಾಲೀಮು ನಡೆಸಲು ನಿರ್ಧರಿಸಿದ್ದಾರೆ.
ಹೆದರಿದ ಕೇಂದ್ರ:
ಸಾವಿರಾರು ಸಂಖ್ಯೆಯಲ್ಲಿ ರೈತರು ದೆಹಲಿಯಲ್ಲಿ ಟ್ರಾಕ್ಟರ್ ಚಲೋ ನಡೆಸಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದು ರೈತರು ದೆಹಲಿಗೆ ಬರೆದಂತೆ ತಡೆಯುವಂತೆ ಮನವಿ ಮಾಡಿದೆ.
ಜನವರಿ ೨೬ ಗಣರಾಜ್ಯೋತ್ಸವದ ಒಂದು ದೆಹಲಿ ಸೇರಿದಂತೆ ಎಲ್ಲೆಡೆ ಬಿಗಿ ಭದ್ರತೆ ಒದಗಿಸಬೇಕಾಗಿದೆ ಜೊತೆಗೆ ಜನವರಿ ೨೮ರಂದು ಎನ್‌ಸಿಸಿ ರ್‍ಯಾಲಿ ಇದೆ. ಜನವರಿ ೨೯ ರಂದು ಪಾಕಿಸ್ತಾನ-ಭಾರತ ಗಡಿಭಾಗದಲ್ಲಿ ಬೀಟಿಂಗ್ ರೀಟ್ರೀಟ್ ಇದೆ. ಜನವರಿ ೩೦ ರಂದು ಹುತಾತ್ಮ ದಿನ ಇರುವ ಹಿನ್ನೆಲೆಯಲ್ಲಿ ಬಿಗಿ ಭದ್ರತೆ ಒದಗಿಸಬೇಕಾಗಿದೆ. ಹೀಗಾಗಿ ರೈತರು ದೆಹಲಿಗೆ ಟ್ರಾಕ್ಟರ್ ಚಲಾಯಿಸುವುದನ್ನು ನಡೆಯಬೇಕು ಎಂದು ಮನವಿ ಮಾಡಿದೆ