ಜ. ೨೩ ಬಜೆಟ್ ಪೂರ್ವಭಾವಿ ಸಭೆ

ಬೆಂಗಳೂರು,ಜ.೨೦:ರಾಜ್ಯದ ಈ ಸಾಲಿನ ಬಜೆಟ್‌ನ್ನು ಫೆ.೧೭ ರಂದು ಮಂಡಿಸಲಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿರವರು, ಈ ತಿಂಗಳ ೨೩ ರಿಂದ ಬಜೆಟ್ ಪೂರ್ವಭಾವಿ ಸಭೆಗಳನ್ನು ಆರಂಭಿಸಲಿದ್ದಾರೆ.
ಬಜೆಟ್ ಮಂಡನೆಗೂ ಮುನ್ನ ವಿವಿಧ ಇಲಾಖೆಗಳ ಬೇಡಿಕೆ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆಯಾ ಇಲಾಖೆಯ ಸಚಿವರು ಹಾಗೂ ಅಧಿಕಾರಿಗಳ ಜತೆ ಸಭೆ ನಡೆಸುವುದು ವಾಡಿಕೆ. ಅದರಂತೆ ಈ ತಿಂಗಳ ೨೩ ರಿಂದ ಮುಖ್ಯಮಂತ್ರಿಗಳು ಬಜೆಟ್ ಪೂರ್ವಭಾವಿ ಸಭೆಗಳನ್ನು ಆರಂಭಿಸುವರು.
ಸರ್ಕಾರದ ೩೦ಕ್ಕೂ ಹೆಚ್ಚು ಇಲಾಖೆಗಳ ಸಚಿವರು ಹಾಗೂ ಅಧಿಕಾರಿಗಳೊಂದಿಗೆ ಈ ತಿಂಗಳ ೨೩, ೨೪,೨೫ ರಂದು ಮುಖ್ಯಮಂತ್ರಿಗಳು ಬಜೆಟ್ ಸಭೆ ನಡೆಸಿ ಇಲಾಖೆಗಳ ಅನುದಾನ ಬೇಡಿಕೆಗಳ ಬಗ್ಗೆ ಸಮಗ್ರ ಚರ್ಚೆ ನಡೆಸುವರು.
ವಿವಿಧ ಇಲಾಖೆಗಳ ಬಜೆಟ್ ಪೂರ್ವಭಾವಿ ಸಭೆಯ ನಂತರ ರೈತಪರ ಸಂಘಟನೆಗಳು, ದಲಿತ ಸಂಘಟನೆಗಳು, ಕನ್ನಡ ಸಂಘಟನೆಗಳೂ ಸೇರಿದಂತೆ ವಿವಿಧ ಸಂಘಟನೆಗಳ ಪ್ರತಿನಿಧಿಗಳ ಜತೆಯೂ ಮುಖ್ಯಮಂತ್ರಿಗಳು ಬಜೆಟ್ ಪೂರ್ವಭಾವಿ ಸಭೆ ನಡೆಸಲಿದ್ದಾರೆ.