ಜ. ೨೨ ಕಟ್ಟೆಚ್ಚರ ವಹಿಸಲು ಬಿವೈವಿ ಆಗ್ರಹ

ನಗರದ ಮಲ್ಲೇಶ್ವರಂನ ಬಿಜೆಪಿ ಕಚೇರಿಯಲ್ಲಿಂದು ನಡೆದ ಕಾರ್ಯಕ್ರಮದಲ್ಲಿ ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರರವರು ‘ಪರಿವರ್ತನಾ ಪಥ ರಾಮಮಂದಿರ ರಥ’ ಪುಸ್ತಕವನ್ನು ಬಿಡುಗಡೆ ಮಾಡಿದರು. ಮಾಜಿ ಶಾಸಕ ಪ್ರದಾನ ಕಾರ್ಯದರ್ಶಿ ಪ್ರೀತಂಗೌಡ, ಸಹ ಸಂಚಾಲಕ ಜಗದೀಶ್ ಹಿರೇಮನಿ ಇದ್ದಾರೆ.

ಬೆಂಗಳೂರು, ಜ. ೨೦-ಅಯೋಧ್ಯೆಯಲ್ಲಿ ಬಾಲರಾಮನ ಪ್ರಾಣ ಪ್ರತಿಷ್ಠಾಪನೆ ನಡೆಯುವ ಜ. ೨೨ ರಂದು ರಾಜ್ಯದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ರಾಜ್ಯ ಸರ್ಕಾರ ಎಚ್ಚರವಹಿಸಬೇಕು. ರಾಮಭಕ್ತರ ಉತ್ಸಾಹಕ್ಕೆ ಯಾವುದೇ ಅಡ್ಡಿ ಆತಂಕ ಬಾರದಂತೆ ನೋಡಿಕೊಳ್ಳಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದ್ದಾರೆ.
ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಯೋಧ್ಯೆಯಲ್ಲಿ ಪ್ರಾಣ ಪ್ರತಿಷ್ಠಾಪನೆ ದಿನ ಅಹಿತಕರ ಘಟನೆಗಳು ನಡೆಯಬಹುದು ಎಂಬ ಕಾಂಗ್ರೆಸ್ ನಾಯಕ ಹರಿಪ್ರಸಾದ್ ಹೇಳಿಕೆ, ಕೋಲಾರದಲ್ಲಿ ಶ್ರೀರಾಮನ ಫ್ಲೆಕ್ಸ್ ಹರಿದು ಹಾಕಿರುವುದು, ಹುಬ್ಬಳ್ಳಿಯಲ್ಲಿ ಕರ ಸೇವಕ ಶ್ರೀಕಾಂತ್ ಪೂಜಾರಿಯ ಬಂಧನ ಇವೆಲ್ಲವನ್ನು ನೋಡಿದರೆ ವಾತಾವರಣವನ್ನು ಕಲುಷಿತಗೊಳಿಸುವ ಪ್ರಯತ್ನಗಳು ನಡೆಯುತ್ತಿವೆ ಎಂಬ ಅನುಮಾನ ಇದೆ. ಹಾಗಾಗಿ ರಾಜ್ಯ ಸರ್ಕಾರ ಕಟ್ಟೆಚ್ಚರ ವಹಿಸಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ನೋಡಿಕೊಳ್ಳಬೇಕು ಎಂದು ಆಗ್ರಹಿಸಿದರು.
ರಾಮಭಕ್ತರು ಬಾಲರಾಮನ ವಿಗ್ರ ಪ್ರತಿಷ್ಠಾಪನೆ ಸಂಬಂಧ ಉತ್ಸಾಹ, ಸಂಭ್ರಮದಲ್ಲಿದ್ದಾರೆ. ಇದಕ್ಕೆ ಯಾವುದೇ ಚ್ಯುತಿಯಾಗದಂತೆ ಸರ್ಕಾರ ಸಹಕಾರ ನೀಡಬೇಕು ಒಂದು ವೇಳೆ ಅಹಿತಕರ ಘಟನೆ ನಡೆದರೆ ಕಾಂಗ್ರೆಸ್ ಸರ್ಕಾರವೇ ಹೊಣೆ ಎಂದರು.
ಕಾಂಗ್ರೆಸ್ ನಾಯಕ ಹರಿಪ್ರಸಾದ್ ಅವರು ಸಾಮಾನ್ಯ ವ್ಯಕ್ತಿಯಲ್ಲ. ಹಾಗಾಗಿ ಯಾರಿಂದಲೂ ರಾಮಭಕ್ತರಿಗೆ ಯಾವುದೇ ತೊಂದರೆಯಾಗದಂತೆ ಭದ್ರತಾ ವ್ಯವಸ್ಥೆಗಳು ಆಗಬೇಕು ಎಂದು ಅವರು ಹೇಳಿದರು.
ರಜೆಗೆ ಆಗ್ರಹ
ಬಾಲರಾಮನ ಪ್ರಾಣಪ್ರತಿಷ್ಠಾಪನೆ ದಿನ ಕೇಂದ್ರ ಸರ್ಕಾರ ಸೇರಿದಂತೆ ಹಲವು ರಾಜ್ಯಗಳು ರಜೆ ಘೋಷಣೆ ಮಾಡಿವೆ. ರಾಜ್ಯದಲ್ಲೂ ಜ. ೨೨ ರಂದು ರಜೆ ನೀಡಬೇಕು ಎಂದು ಸರ್ಕಾರವನ್ನು ಮತ್ತೊಮ್ಮೆ ಒತ್ತಾಯಿಸುತ್ತೇನೆ ಎಂದರು.
ವೀಕ್ಷಣೆಗೆ ವ್ಯವಸ್ಥೆ
ಜ. ೨೨ ರಂದು ರಾಮಮಂದಿರ ಉದ್ಘಾಟನಾ ಕಾರ್ಯಕ್ರಮವನ್ನು ವೀಕ್ಷಿಸಲು ಸಾರ್ವಜನಿಕರಿಗೆ ಹಲವೆಡೆ ವ್ಯವಸ್ಥೆ ಮಾಡಲಾಗಿದೆ. ಅಂದು ರಾಜ್ಯದ ಎಲ್ಲ ರಾಮ ದೇವಸ್ಥಾನದಲ್ಲೂ ಪೂಜೆ ಸಲ್ಲಿಸಿ ದೇವಸ್ಥಾನಗಳಲ್ಲೇ ಎಲ್‌ಇಡಿ ಪರದೆ ಅಳವಡಿಸಲು ಕಾರ್ಯಕ್ರಮ ವೀಕ್ಷಣೆ ಮಾಡಲು ವ್ಯವಸ್ಥೆ ಮಾಡಲಾಗಿದೆ. ಹಾಗಾಯೆ ೧೪೦ ಪಿವಿಆರ್ ಚಿತ್ರಮಂದಿರಗಳಲ್ಲಿ ಕಾರ್ಯಕ್ರಮ ವೀಕ್ಷಿಸಲು ವ್ಯವಸ್ಥೆ ಮಾಡಲಾಗಿದೆ. ಚಿತ್ರಮಂದಿರಗಳು ಸ್ವಯಂ ಪ್ರೇರಿತರಾಗಿ ಅಯೋಧ್ಯೆ ಕಾರ್ಯಕ್ರಮದ ನೇರ ವೀಕ್ಷಣೆಗೆ ವ್ಯವಸ್ಥೆ ಮಾಡಿದ್ದಾರೆ ಎಂದು ಅವರು ಹೇಳಿದರು.
ಅಯೋಧ್ಯೆಯ ರಾಮಮಂದಿರ ಉದ್ಘಾಟನೆನ ನಂತರ ಸಂಜೆ ಪ್ರತಿ ಮನೆಯಲ್ಲಿ ಉತ್ತರಾಭಿಮುಖವಾಗಿ ಐದು ದೀಪ ಬೆಳಗಿಸಬೇಕು ಎಂದು ಪ್ರಧಾನಿ ಮೋದಿ ಅವರು ಕರೆ ನೀಡಿದ್ದಾರೆ. ಅದರಂತೆ ಪ್ರತಿಯೊಬ್ಬರು ತಮ್ಮ ಮನೆಯಲ್ಲಿ ಉತ್ತರಾಭಿಮುಖವಾಗಿ ದೀಪ ಬೆಳಗಿಸಬೇಕು ಎಂದು ಮನವಿ ಮಾಡಿದರು.
ರಾಮಮಂದಿರದ ಮಂತ್ರಾಕ್ಷತೆ ವಿತರಣೆ ನಿರೀಕ್ಷೆಗೂ ಮೀರಿ ಯಶಸ್ವಿಯಾಗಿದೆ ಎಂದು ಅವರು ಹೇಳಿ, ರಾಮಮಂದಿರ ಉದ್ಘಾಟನೆಯಾಗುವವರೆಗೂ ತಮ್ಮ ಗ್ರಾಮಗಳ ದೇವಸ್ಥಾನ ಸ್ವಚ್ಛಗೊಳಿಸುವ ಪ್ರಧಾನಿಗಳ ಕರೆಯಂತೆ ದೇವಸ್ಥಾನಗಳ ಸ್ವಚ್ಛತಾ ಕಾರ್ಯ ಎಲ್ಲಡೆ ನಡೆದಿದೆ ಎಂದರು.
ರಾಮಭಕ್ತರಿಗೆ ವಿಶೇಷ ರೈಲು
ಜ. ೨೨ ರ ನಂತರ ರಾಜ್ಯದಿಂದ ಸುಮಾರು ೩೫ ಸಾವಿರ ಮಂದಿ ರಾಮಭಕ್ತರು ಅಯೋಧ್ಯೆಗೆ ತೆರಳುತ್ತಿದ್ದಾರೆ. ಜ. ೩೧ ರಿಂದ ಮಾರ್ಚ್ ೨೫ ರವರೆಗೆ ತಂಡ ತಂಡವಾಗಿ ಈ ರಾಮಭಕ್ತರು ಅಯೋಧ್ಯೆಗೆ ತೆರಳಲಿದ್ದಾರೆ. ಅವರಿಗೆ ರೈಲಿನಲ್ಲಿ ಊಟದ ವ್ಯವಸ್ಥೆ, ಅಯೋಧ್ಯೆಯಲ್ಲಿ ದರ್ಶನ, ಊಟ, ವಸತಿ ವ್ಯವಸ್ಥೆ ಮಾಡಲಾಗಿದೆ. ಇದಕ್ಕಾಗಿ ವಿಶೇಷ ರೈಲುಗಳನ್ನು ವ್ಯವಸ್ಥೆ ಮಾಡಲಾಗಿದೆ. ರೈಲು ವೆಚ್ಚವನ್ನು ಭಕ್ತರೆ ಭರಿಸಲಿದ್ದಾರೆ. ಭಕ್ತರ ಯೋಗ ಕ್ಷೇಮಕ್ಕಾಗಿ ಬಿಜೆಪಿಂಯ ಪ್ರಬಂಧಕರನ್ನು ನೇಮಕ ಮಾಡಿದ್ದೇವೆ. ಇವರುಗಳು ಅಯೋಧ್ಯೆಯಲ್ಲಿ ದರ್ಶನ, ವಸತಿ, ಊಟದ ವ್ಯವಸ್ಥೆಯನ್ನು ಮಾಡಲಿದ್ದಾರೆ ಎಂದು ಅವರು ಹೇಳಿದರು.
ಕಾಂಗ್ರೆಸ್‌ನಿಂದ ಅಲ್ಪಸಂಖ್ಯಾತರ ಓಲೈಕೆ
ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆಯಿಂದ ದೂರ ಉಳಿಯುವ ಮೂಲಕ ಕಾಂಗ್ರೆಸ್‌ನವರು ಅಲ್ಪಸಂಖ್ಯಾತರನ್ನು ಓಲೈಸುತ್ತಾರೆ ಎಂಬುದು ಮತ್ತೆ ಸಾಬೀತಾಗಿದೆ. ಅಯೋಧ್ಯೆ ಕಾರ್ಯಕ್ರಮಕ್ಕೆ ಹೋದರೆ ಅಲ್ಪಸಂಖ್ಯಾತರಿಗೆ ಎಲ್ಲಿ ಬೇಸರವಾಗುತ್ತದೋ ಎಂದು ಕಾಂಗ್ರೆಸ್‌ನವರು ರಾಮಮಂದಿರ ಉದ್ಘಾಟನೆ ಕಾರ್ಯಕ್ರಮದಿಂದ ದೂರ ಉಳಿದಿದ್ದಾರೆ ಎಂದರು.
ಶ್ರೀರಾಮನಿಗೂ ಕರ್ನಾಟಕದ ನಡುವಿನ ಸಂಬಂಧ ನಿನ್ನೆ ಮೊನ್ನೆಯದಲ್ಲ. ರಾಮಾಯಣದಿಂದಲೂ ಈ ಸಂಬಂದ ಇದೆ. ರಾಮನು ಸೀತಾಮಾತಾಯೆ ಅಪರಹಣ ಸಂದರ್ಭದಲ್ಲಿ ಕಿಷ್ಕಿಂದೆ, ಇಂದಿನ ಹಂಪಿಗೆ ಭೇಟಿ ನೀಡಿದ ಐತಿಹ್ಯವಿದೆ. ಆಂಜನೇಯನ ಅಂಜನಾದ್ರಿ ಬೆಟ್ಟ ಇರುವುದು ಕರ್ನಾಟಕದಲ್ಲೇ ಎಂದ ಅವರು, ಅಯೋಧ್ಯೆಯ ರಾಮಮಂದಿರ ನಿರ್ಮಾಣದಲ್ಲೂ ಕನ್ನಡಿಗರ ಕೊಡುಗೆಯೂ ಇದೆ. ರಾಮಮಂದಿರದ ಜವಾಬ್ದಾರಿ ನೋಡಿಕೊಳ್ಳುವವರು ರಾಜ್ಯದವರು ಹೆಚ್ಚು ಇದ್ದಾರೆ. ಬಾಲರಾಮನ ಮೂರ್ತಿಯ ಶಿಲೆ ಮೈಸೂರಿನಲ್ಲಿ ಹೆಗ್ಗಡದೇವನಕೋಟೆಯೆಲ್ಲಿ ಹೆಕ್ಕಿದ್ದು, ಬಾಲರಾಮನ ಮೂರ್ತಿಯನ್ನು ಕಡೆದಿರುವುದು ಮೈಸೂರಿನ ಶಿಲ್ಪಿ ಅರುಣ್ ರಾಜ್. ಅಯೋಧ್ಯೆಯ ಟ್ರಸ್ಟ್‌ನಲ್ಲಿ ಉಡುಪಿಯ ಈಗಿನ ಪೇಜಾವರ ಶ್ರೀಗಳು ಇದ್ದಾರೆ. ಅಯೋಧ್ಯೆಯಲ್ಲಿ ಗಣೇಶನ ವಿಗ್ರಹ ಕೆತ್ತನೆ ಮಾಡಿರುವವರು ಉತ್ತರಕರ್ನಾಟದ ಶಿಲ್ಪಿ ವಿನಾಯಕಗೌಡರು. ಹಾಗೆಯೇ ಗಣೇಶ್ ಭಟ್ ಎಂಬುವರು ಮತ್ತೊಂದು ಬಾಲರಾಮನ ವಿಗ್ರಹ ಕಡೆದಿದ್ದಾರೆ. ರಾಮಮಂದಿರದ ದ್ವಾರ ನಿರ್ಮಾಣ ಮಾಡಿರುವುದು ಕೊಪ್ಪಳದ ರಾಮಮೂರ್ತಿ ಸ್ವಾಮಿ ಅವರು. ರೈಲು ನಿಲ್ದಾಣ ಮತ್ತು ಅಯೋಧ್ಯೆಯ ರಾಮಮಂದಿರಕ್ಕೆ ವಿದ್ಯುತ್ ಸಂಪರ್ಕ ಕೊಟ್ಟವರು ಕರ್ನಾಟಕದವರು. ಹಾಗೆಯೇ ಮಂದಿರದಲ್ಲಿ ಭೂಕಂಪ ನಿರೋಧಕ, ಸಿಡಿಲು ನಿರೋಧಕ ತಂತ್ರಜ್ಞಾನ ಅಳವಡಿಸಿರುವ ಕರ್ನಾಟಕದ ಮೂಲದ ಕಂಪನಿಯೇ ಎಂದು ವಿಜಯೇಂದ್ರ ಹೇಳಿ, ಇವೆಲ್ಲಾ ಕನ್ನಡಿಗರಿಗೆ ಹೆಮ್ಮ ತರುವ ಸಂಗತಿ ಎಂದರು.
ಇದೆಲ್ಲದರ ಜತೆಗೆ ರಾಮಮಂದಿರದಲ್ಲಿ ಪೂಜೆಗೆ ರಾಜ್ಯದ ಗಂಧದ ಎಣ್ಣೆ ಬಳಕೆ ಹಾಗಾಯೇ ರಾಜ್ಯದ ಗಂಧದ ಮರವನ್ನು ಬಳಕೆ ಮಾಡಲಾಗಿದೆ ಎಂದು ಹೇಳಿ, ಅಯೋಧ್ಯೆಗೂ ಕರ್ನಾಟಕಕ್ಕೂ ಅವಿನಾಭಾವ ಸಂಬಂಧ ಇದೆ ಎಂದರು.
ಪುಸ್ತಕ ಬಿಡುಗಡೆ
ಇದೇ ಸಂದರ್ಭದಲ್ಲಿ ಬಿ.ವೈ.ವಿದಯೇಂದ್ರ ಅವರು ಕಮಲಪಥ ತಂಡದಿಂದ ರಚನೆಯಾಗಿರುವ ಪರಿವರ್ತನಾ ಪಥ, ರಾಮರಥ ಪುಸ್ತಕವನ್ನು ಬಿಡುಗಡೆ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಪ್ರಧಾನ ಕಾರ್ಯದರ್ಶಿ ಪ್ರೀತಂಗೌಡ, ಮುಖಂಡ ಜಗದೀಶ್ ಹಿರೇಮನಿ ಉಪಸ್ಥಿತರಿದ್ದರು.