ಜ.೨೦ ಹೈಟೆಕ್ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಉದ್ಘಾಟನೆ

ವಿ. ಸೋಮಣ್ಣ ಪ್ರತಿಷ್ಠಾನದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ೨೦೨೩ರ ಕ್ಯಾಲೆಂಡರ್ ಬಿಡುಗಡೆ ಕಾರ್ಯಕ್ರಮದಲ್ಲಿ ಖ್ಯಾತ ಲೇಖಕಿ, ಶ್ರೇಷ್ಠ ಅನುವಾದಕಿ, ಮದರಾಸು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ವಿಭಾಗದ ನಿರ್ದೇಶಕರಾದ ಡಾ. ತಮಿಳ್ ಸೆಲ್ವಿ ಅವರನ್ನು ಸೋಮಣ್ಣ ಹಾಗೂ ಅವರ ಪತ್ನಿ ಶೈಲಜಾ ಸೋಮಣ್ಣ ಸನ್ಮಾನಿಸಿದರು. ಕನ್ನಡ ಚಳವಳಿ ನಾಯಕ, ಪ್ರತಿಷ್ಠಾನದ ಕಾರ್ಯದರ್ಶಿ ಪಾಲನೇತ್ರ, ಬಿ.ಎಂ ಶ್ರೀ ಪ್ರತಿಷ್ಠಾನದ ಅಧ್ಯಕ್ಷ ಭೈರಮಂಗಲ ರಾಮೇಗೌಡ ಇದ್ದಾರೆ.

ಬೆಂಗಳೂರು,ಜ.೧-ಗೋವಿಂದರಾಜ ನಗರ ಕ್ಷೇತ್ರದಲ್ಲಿ ನಿರ್ಮಾಣವಾಗಿರುವ ಹೈಟೆಕ್ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಇದೇ ತಿಂಗಳ ೨೦ ರಂದು ಲೋಕಾರ್ಪಣೆಯಾಗಲಿದೆ ಎಂದು ವಸತಿ ಹಾಗೂ ಮೂಲಭೂತ ಸೌಕರ್ಯ ಸಚಿವ ವಿ.ಸೋಮಣ್ಣ ಹೇಳಿದರು.
ವಿಜಯನಗರದಲ್ಲಿರುವ ವಿ.ಸೋಮಣ್ಣನವರ ಗೃಹ ಕಚೇರಿಯಲ್ಲಿ ವಿ.ಸೋಮಣ್ಣ ಪ್ರತಿಷ್ಠಾನದ ವತಿಯಿಂದ ೨೦೨೩ರ ಕ್ಯಾಲೆಂಡರ್ ಅನಾವರಣ ಹಾಗೂ ಲೇಖಕಿ ಡಾ. ತಮಿಳ್‌ಸೆಲ್ವಿ ಅವರ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಗೋವಿಂದರಾಜ ನಗರ ಕ್ಷೇತ್ರದ ಜನರಿಗೆ ಎಲ್ಲ ರೀತಿಯ ಆರೋಗ್ಯ ಸೌಲಭ್ಯಗಳು ಸಿಗಲಿ ಎಂಬ ಉದ್ದೇಶದಿಂದ ೩೦೦ ಹಾಸಿಗೆಗಳ ಅತ್ಯಾಧುನಿಕ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಸಕಲ ಸೌಲಭ್ಯಗಳೊಂದಿಗೆ ಸಿದ್ಧವಾಗಿದ್ದು, ಇದೇ ಜ. ೨೦ ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆಸ್ಪತ್ರೆಯನ್ನು ಲೋಕಾರ್ಪಣೆ ಮಾಡಲಿದ್ದಾರೆ ಎಂದರು.
ಕ್ಷೇತ್ರದ ಜನರಿಗೆ ಆರೋಗ್ಯ ಸೌಲಭ್ಯ ಒದಗಿಸಲು ಹಲವು ಯೋಜನೆಗಳನ್ನು ಜಾರಿ ಮಾಡಲಾಗಿದೆ. ಕ್ಷೇತ್ರದಲ್ಲಿ ಈಗಾಗಲೇ ನಿರ್ಮಿಸಲಾಗಿರುವ ಉಚಿತ ಡಯಾಲಿಸಿಸ್ ಕೇಂದ್ರದಲ್ಲಿ ಕಳೆದ ೭ ತಿಂಗಳಲ್ಲಿ ೧೦ ಸಾವಿರಕ್ಕೂ ಹೆಚ್ಚು ಜನ ಚಿಕಿತ್ಸೆ ಪಡೆದಿದ್ದಾರೆ ಎಂದರು. ಮುಳ್ಳಿನ ಹಾಸಿಗೆಯಲ್ಲಿ ಇದ್ದ ಸಂದರ್ಭದಲ್ಲಿ ಅನೇಕ ನೋವುಗಳನ್ನು ಅನುಭವಿಸಿದ್ದಾಗಲೂ ಜನ ಪ್ರಿತಿ, ವಿಶ್ವಾಸವನ್ನು ತೋರಿದ್ದಾರೆ. ೧೦ ಜನ್ಮ ಎತ್ತಿದರೂ ಜನರ ಋಣ ತೀರಿಸಲಾಗುವುದಿಲ್ಲ ಎಂದು ಭಾವುಕರಾಗಿ ಹೇಳಿದರು.
ಇದೇ ಸಂದರ್ಭದಲ್ಲಿ ನಾಡಿನ ಸಮಸ್ತ ಜನತೆಗೆ ಹೊಸ ವರ್ಷದ ಶುಭಾಶಯಗಳನ್ನು ಕೋರಿದ ಸಚಿವ ಸೋಮಣ್ಣ ಅವರು ಈ ವರ್ಷ ದೇಶಕ್ಕೆ, ನಾಡಿಗೆ ಒಳಿತಾಗಲಿ ಎಂದು ಶುಭ ಹಾರೈಸಿ, ಕೊರೊನಾ ಸಂಕಷ್ಟದ ಸಮಯವನ್ನು ದಿಟ್ಟತನದಿಂದ ಎದುರಿಸಿ, ಜನರ ಸಂಕಷ್ಟಗಳ ನಿವಾರಣೆಗೆ ನೆರವಾದ ಪ್ರಧಾನಿ ನರೇಂದ್ರ ಮೋದಿರವರ ನೇತೃತ್ವದಲ್ಲಿ ಭಾರತ ದೇಶದ ಭವಿಷ್ಯ ಉಜ್ವಲವಾಗಿದೆ. ಕೊರಾನಾ ಮಹಾಮಾರಿ ಅಲೆಅಲೆಯಾಗಿ ಬಾರದೆ ಇರಲಿ, ಯಾರಿಗೂ ಬಾಧಿಸದಿರಲಿ, ಎಲ್ಲರೂ ಆರೋಗ್ಯದ ಬಗ್ಗೆ ಜಾಗೃತೆಯಿಂದ ಇರುವಂತೆ ಕಿವಿಮಾತು ಹೇಳಿದರು.
ಡಾ. ತಮಿಳ್ ಸೆಲ್ವಿ ರವರಿಗೆ ಅಭಿನಂದನೆ
ಇದೇ ವೇಳೆ ತಮಿಳುನಾಡು ಸರ್ಕಾರದ ಶ್ರೇಷ್ಠ ಅನುವಾದಕರು ಪ್ರಶಸ್ತಿ ಪುರಸ್ಕೃತರು ಹಾಗೂ ತಮಿಳುನಾಡು ರಾಜ್ಯ ಘಟಕದ ಕನ್ನಡ ಸಾಹಿತ್ಯ ಪರಿಷತ್ತಿನ ಚೆನ್ನೈ ಅಧ್ಯಕ್ಷರು ಹಾಗೂ ಮದರಾಸು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ವಿಭಾಗದ ನಿರ್ದೇಶಕರಾದ ಡಾ.ತಮಿಳ್ ಸೆಲ್ವಿ ಅವರಿಗೆ ಅಭಿನಂದನೆಯನ್ನು ಸಲ್ಲಿಸಲಾಯಿತು. ಅಭಿನಂದನೆ ಸ್ವೀಕರಿಸಿ ಮಾತನಾಡಿದ ಡಾ.ತಮಿಳ್ ಸೆಲ್ವಿ ರವರು ಎಲ್ಲಾದರೂ ಇರು, ಎಂತಾದರೂ ಇರು ಎಂಬ ಕುವೆಂಪು ರವರ ಕವಿವಾಣಿಯಂತೆ ನಾವೆಲ್ಲ ಕನ್ನಡಾಭಿಮಾನವನ್ನು ಮೆರೆಯಬೇಕು. ಸೋಮಣ್ಣ ಪ್ರತಿಷ್ಠಾನ ನೀಡಿರುವ ಗೌರವ ಅನನ್ಯ ಎಂದು ಸಂತಸ ವ್ಯಕ್ತಪಡಿಸಿದರು.
ಈ ಕಾರ್ಯಕ್ರಮದಲ್ಲಿ ಶ್ರೀ ವಿ.ಸೋಮಣ್ಣ ಪ್ರತಿಷ್ಠಾನದ ಅಧ್ಯಕ್ಷರಾದ ಶೈಲಜಾ ಸೋಮಣ್ಣ, ಪ್ರಧಾನ ಕಾರ್ಯದರ್ಶಿ ಪಾಲನೇತ್ರ, ಕರ್ನಾಟಕ ಗೃಹ ಮಂಡಳಿ ಆಯುಕ್ತರಾದ ಕವಿತಾ ಮನ್ನಿಕೇರಿ, ಬಿ.ಎಂ.ಶ್ರೀ ಪ್ರತಿಷ್ಠಾನದ ಅಧ್ಯಕ್ಷರಾದ ಡಾ.ಬೈರಮಂಗಲ ರಾಮೇಗೌಡ. ಲೇಖಕರಾದ ಡಾ.ಸಿ.ಯು. ಮಂಜುನಾಥ್, ಎಂ.ಆರ್. ಸತ್ಯನಾರಾಯಣ, ವೀರಪ್ಪ ಮರಳವಾಡಿ ಹಾಗೂ ಬಿಬಿಎಂಪಿ ಮಾಜಿ ಸದಸ್ಯರು ಉಪಸ್ಥಿತರಿದ್ದರು.