ಜ. ೧ ಶಾಲಾ-ಕಾಲೇಜು ಆರಂಭ ಪೋಷಕರಲ್ಲಿ ಆತಂಕ


ಬೆಂಗಳೂರು,ಡಿ.೩೦- ಹೊಸ ವರ್ಷದ ಮೊದಲ ದಿನವೇ ೧೦ನೇ ತರಗತಿಯಿಂದ ದ್ವಿತೀಯ ಪಿಯುಸಿ ತರಗತಿ ಪ್ರಾರಂಭಿಸಲು ಸರ್ಕಾರ ಸಕಲ ಸಿದ್ಧತೆ ಕೈಗೊಂಡಿದ್ದರೂ ಪೋಷಕರಿಗೆ ಆತಂಕ ಎದುರಾಗಿದೆ.
ರಾಜ್ಯದಲ್ಲಿ ಬ್ರಿಟನ್‌ನಿಂದ ರೂಪಾಂತರಗೊಂಡ ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿರುವುದು ಪೋಷಕರ ಆತಂಕಕ್ಕೆ ಕಾರಣವಾಗಿದೆ.ಈ ಹಿನ್ನೆಲೆಯಲ್ಲಿ ಮಕ್ಕಳನ್ನು ಶಾಲಾ-ಕಾಲೇಜುಗಳಿಗೆ ಕಳುಹಿಸುವುದು ಹೇಗೆ ಎಂಬ ಚಿಂತೆ ಪೋಷಕರನ್ನು ಕಾಡುತ್ತಿದೆ. ಈ ಎಲ್ಲ ಗೊಂದಲಗಳಿಗೆ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಸುರೇಶ್ ಕುಮಾರ್ ತೆರೆ ಎಳೆದಿದ್ದು, ಈಗಾಗಲೇ ನಿಗದಿಯಾಗಿರುವಂತೆ ಜ. ೧ ರಿಂದ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ತರಗತಿಗಳು ಪ್ರಾರಂಭವಾಗಲಿವೆ. ೬, ೭ ಮತ್ತು ೮ನೇ ತರಗತಿವರೆಗೆ ವಿದ್ಯಾಗಮ ಮಾಡಲು ಚಿಂತನೆ ನಡೆಸಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ಶಾಲೆ ಪ್ರಾರಂಭಿಸಲು ಈಗಾಗಲೇ ಸಿದ್ಧತೆಗಳನ್ನು ಮಾಡಲಾಗುತ್ತಿದ್ದು, ಶಾಲೆಗಳನ್ನು ಶುಚಿಗೊಳಿಸಿ ಸ್ಯಾನಿಟೈಜ್ ಮಾಡಲಾಗುತ್ತಿದ್ದು, ಥರ್ಮಲ್ ಸ್ಕ್ಯಾನರ್ ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿದರು.
ಇದೇ ವೇಳೆ ಕಂದಾಯ ಸಚಿವ ಆರ್.ಅಶೋಕ್ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ಶಾಲಾ-ಕಾಲೇಜು ಆರಂಭ ವಿಚಾರದಲ್ಲಿ ಗೊಂದಲವಿರುವುದನ್ನು ಒಪ್ಪಿಕೊಂಡಿದ್ದಾರೆ.ಶಾಲಾ-ಕಾಲೇಜು ಆರಂಭ ಕುರಿತಂತೆ ಶಿಕ್ಷಣ ಸಚಿವ ಸುರೇಶ್‌ಕುಮಾರ್ ಮುಖ್ಯಮಂತ್ರಿ ಯಡಿಯೂರಪ್ಪನವರ ಜತೆ ಚರ್ಚಿಸಿ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ತಿಳಿಸಿದರು.