ಜ.೧: ಜಕಣಾಚಾರಿ ಸಂಸ್ಮರಣಾ ದಿನಾಚರಣೆ

ರಾಯಚೂರು, ಡಿ.೨೯- ಜಿಲ್ಲಾಡಳಿತ,ಜಿಲ್ಲಾ ಪಂಚಾಯತ್, ನಗರಸಭೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಜನವರಿ ೧ ರಂದು ವಿಶ್ವಕರ್ಮ ಅಮರಶಿಲ್ಪಿ ಜಕಣಾಚಾರಿ ಸಂಸ್ಮರಣಾ ದಿನಾಚರಣೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾ ಪ್ರದಾನ ಕಾರ್ಯದರ್ಶಿ ಬ್ರಹ್ಮಗಣೇಶ ವಕೀಲರು ಹೇಳಿದರು.
ಅವರಿಂದು ದಿನಾಚರಣೆಯು ನಗರದ ಕನ್ನಡ ಭವದಲ್ಲಿ ಜರುಗಲಿದ್ದು, ಅಂದು ರೇಡಿಯೋ ಸ್ಟೇಷನ್ ವೃತ್ತದಲ್ಲಿರುವ ವಿಶ್ವಕರ್ಮ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಬೆಳಿಗ್ಗೆ ೯ ಗಂಟೆಗೆ ಮೆರವಣಿಗೆಗೆ ಚಾಲನೆ ನೀಡಲಾಗುವುದು, ಮೆರವಣಿಗೆಯು ಶಶಿಮಹಲ್ ವೃತ್ತ, ನೇತಾಜಿ ವೃತ್ತ, ತೀನ್ ಖಂದಿಲ್, ಅಂಬೇಡ್ಕರ್ ವೃತ್ತದ ಮೂಲಕ ಕನ್ನಡ ಭವನಕ್ಕೆ ಆಗಮಿಸಲಿದೆ.೧೧ ಗಂಟೆಗೆ ವೇದಿಕೆ ಕಾರ್ಯಕ್ರಮ ನಡೆಯಲಿದೆ ಎಂದರು.
ಕಾರ್ಯಕ್ರಮ ಉದ್ಘಾಟನೆಯನ್ನು ಜಿಲ್ಲಾ ಉಸ್ತುವಾರಿ ಸಚಿವ ಡಾ ಶರಣಪ್ರಕಾಶ ಪಾಟೀಲ್ ಮಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಸಚಿವ ಎನ್.ಎಸ್. ಬೋಸರಾಜ, ಶಾಸಕರಾದ ಶಿವರಾಜ ಪಾಟೀಲ್, ಬಸನಗೌಡ ದದಲ್ ಅವರು ಭಾಗವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಕಾಳಪ್ಪ ಬಡಿಗೇರ ಅವರನ್ನು ಸನ್ಮಾನಿಸಲಾಗುವುದು.ಕಾರ್ಯಕ್ರಮಕ್ಕೆ ಸಮಾಜದ ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಮಾರುತಿ ಬಡಿಗೇರ, ಗಿರೀಶ ಆಚಾರ್ಯ, ಕೆ.ರಾಮು ಗಣಧಾಳ, ಮನೋಹರ್ ಬಡಿಗೇರ, ಡಾ. ವೆಂಕಟೇಶ ಅನ್ವರಿ, ಮೌನೇಶ ಗೋನವರ, ಕೆ. ಪ್ರಾಣೇಶ ಗುಂಡ್ರವೇಲಿ ಇದ್ದರು.