ಜ. ೧೯ ಪ್ರಧಾನಿ ಕಲಬುರಗಿಗೆ ಭೇಟಿ

ಕಲಬುರಗಿ,ಜ,೧೪- ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಲು ಪಣ ತೊಟ್ಟಿರುವ ಬಿಜೆಪಿ, ಈ ನಿಟ್ಟಿನಲ್ಲಿ ಭರ್ಜರಿ ತಯಾರಿ ನಡೆಸಿದೆ. ಪ್ರಧಾನಿ ನರೇಂದ್ರಮೋದಿ ಅವರು ಯುವಜನೋತ್ಸವ ಉದ್ಘಾಟನೆಗಾಗಿ ಹುಬ್ಬಳ್ಳಿಗೆ ಭೇಟಿ ನೀಡಿದ್ದ ಬೆನ್ನಲ್ಲೆ ಇದೀಗ ಜ. ೧೯ ರಂದು ಕಲಬುರಗಿಗೆ ಭೇಟಿ ನೀಡಲಿದ್ದಾರೆ. ಇದಕ್ಕಾಗಿ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ.ತಾಂಡ ನಿವಾಸಿಗಳಿಗೆ ಆಸ್ತಿಪತ್ರ ವಿತರಣೆ ಹೆಸರಿನಲ್ಲಿ ಬಿಜೆಪಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ತವರಿನಲ್ಲಿ ಶಕ್ತಿಪ್ರದರ್ಶನ ನಡೆಸಲು ಮುಂದಾಗಿದೆ.
ಈ ತಿಂಗಳಲ್ಲಿ ಮೋದಿ ಅವರು ೨ನೇ ಬಾರಿಗೆ ಭೇಟಿ ನೀಡುತ್ತಿದ್ದಾರೆ. ಮಾಲ್‌ಖೇಡ್‌ನಲ್ಲಿ ನಡೆಯಲಿರುವ ಬೃಹತ್ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದು, ತಾತ್ಕಾಲಿಕವಾಗಿ ನಿರ್ಮಿಸಿರುವ ಮನೆಗಳ ಆಸ್ತಿಪತ್ರಗಳನ್ನು ೫೨ ಸಾವಿರ ತಾಂಡ ನಿವಾಸಿಗಳಿಗೆ ಮೋದಿ ಅವರು ವಿತರಣೆ ಮಾಡಲಿದ್ದಾರೆ.
ಹೈದರಾಬಾದ್-ಕರ್ನಾಟಕ ಪ್ರದೇಶದ ರಾಯಚೂರು, ಬೀದರ್, ಯಾದಗಿರಿ, ವಿಜಯಪುರ ಜಿಲ್ಲೆಗಳಿಂದ ತಾಂಡ ಫಲಾನುಭವಿಗಳನ್ನು ಆಯ್ಕೆ ಮಾಡಿರುವ ಕುರಿತು ಕಂದಾಯ ಇಲಾಖಾಧಿಕಾರಿಗಳು ಮಾಹಿತಿ ಒದಗಿಸಿದ್ದಾರೆ.ಪ್ರಧಾನಿ ಭೇಟಿ ಹಿನ್ನೆಲೆಯಲ್ಲಿ ಕಂದಾಯ ಸಚಿವ ಆರ್. ಅಶೋಕ್ ನೇತೃತ್ವದಲ್ಲಿ ಸಿದ್ಧತೆ ಕುರಿತು ಚರ್ಚೆ ನಡೆಸಲಾಗಿದೆ. ಕಾರ್ಯಕ್ರಮಕ್ಕೆ ಬೃಹತ್ ಹೆಲಿಪ್ಯಾಡ್ ನಿರ್ಮಾಣ ಮಾಡಲಾಗುತ್ತಿದೆ. ಜನರಿಗೆ ಊಟೋಪಚಾರಗಳಿಗೆ ವ್ಯವಸ್ಥೆ ಮಾಡಲಾಗಿದ್ದು, ಇದಕ್ಕಾಗಿ ೬೦೦ ಬಾಣಸಿಗರನ್ನು ನಿಯೋಜಿಸಲು ತೀರ್ಮಾನಿಸಲಾಗಿದೆ.೨೦೦ ಊಟದ ಕೌಂಟರ್‌ಗಳನ್ನು ತೆರೆದು ಆಹಾರ ವಿತರಣೆ ಮಾಡಲು ಕ್ರಮಕೈಗೊಳ್ಳಲಾಗಿದೆ. ಸಾವಿರಾರು ಬಸ್‌ಗಳಲ್ಲಿ ಫಲಾನುಭವಿಗಳನ್ನು ತರೆತರಲು ಬಿಜೆಪಿ ಮುಂದಾಗಿದೆ.