ಜ.೧೫ರಿಂದ ರಾಮಮಂದಿರ ನಿರ್ಮಾಣಕ್ಕೆ ಧನ ಸಂಗ್ರಹ


ಮಂಗಳೂರು: ಅಯೋಧ್ಯೆಯಲ್ಲಿ ನಿರ್ವಣವಾಗಲಿರುವ ರಾಮ ಮಂದಿರಕ್ಕೆ ಜ.೧೫ರಿಂದ ೪೫ ದಿನ ಧನ ಸಂಗ್ರಹ ನಡೆಯಲಿದ್ದು, ಜವಾಬ್ದಾರಿಯನ್ನು ವಿಶ್ವ ಹಿಂದು ಪರಿಷತ್‌ಗೆ ವಹಿಸಲಾಗಿದೆ ಎಂದು ಪೇಜಾವರ ಮಠಾಧೀಶ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ತಿಳಿಸಿದರು.
ಭಾರತೀಯ ವಾಸ್ತುಶಾಸ್ತ್ರ ಪ್ರಕಾರ ಮಂದಿರ ನಿರ್ವಣವಾಗಲಿದೆ. ವಾಸ್ತು ಶಾಸ್ತ್ರಜ್ಞರ ತಂಡ ಮಾರ್ಗದರ್ಶನ ನೀಡಲಿದೆ. ಕರಾವಳಿಯವರಾದ ಕುಡುಪು ಕೃಷ್ಣರಾಜ ತಂತ್ರಿ ಮತ್ತು ಗುಂಡಿಬೈಲು ಸುಬ್ರಹ್ಮಣ್ಯ ಭಟ್, ಕೇರಳದ ಓರ್ವರು ಮತ್ತು ಉತ್ತರ ಭಾರತದ ಇಬ್ಬರು ಈ ತಂಡದಲ್ಲಿದ್ದಾರೆ. ಅಯೋಧ್ಯೆ ಸಹಿತ ಉತ್ತರ ಪ್ರದೇಶದ ಪುಣ್ಯ ಕ್ಷೇತ್ರಗಳ ದರ್ಶನ, ವಿಎಚ್?ಪಿ ಮಾರ್ಗದರ್ಶಕ ಮಂಡಳಿ ಸಭೆ ಹಾಗೂ ರಾಮ ಜನ್ಮಭೂಮಿ ಟ್ರಸ್ಟ್ ಸಭೆಯ ನಿರ್ಣಯಗಳ ಬಗ್ಗೆ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು. ರಾಮ ಮಂದಿರದಲ್ಲಿ ಎಲ್ಲ ಭಕ್ತರ ಪಾಲುದಾರಿಕೆ ಅವಶ್ಯ. ಈ ನಿಟ್ಟಿನಲ್ಲಿ ಧನ ಸಂಗ್ರಹ ಕಾರ್ಯ ನಡೆಯಲಿದೆ. ಎಲ್ಲ ಭಕ್ತರು ವೈಯಕ್ತಿಕವಾಗಿ ಕನಿಷ್ಠ ೧೦ ರೂ, ಕುಟುಂಬದ ಪರವಾಗಿ ಕನಿಷ್ಠ ೧೦೦ ರೂ.ದೇಣಿಗೆ ನೀಡಬೇಕು ಎಂದು ಶ್ರೀಗಳು ವಿನಂತಿಸಿದರು. ರಾಮ ಮಂದಿರ ಸಂಪೂರ್ಣ ಶಿಲಾಮಯವಾಗಿ ನಿರ್ವಣವಾಗುವ ಕಾರಣ ಅಷ್ಟು ಭಾರ ಹೊರಲು ಅಲ್ಲಿನ ಭೂಮಿಯ ಧಾರಣಾ ಸಾಮರ್ಥ್ಯ ಎಷ್ಟಿದೆ ಎನ್ನುವ ಪರೀಕ್ಷೆ ನಡೆಯುತ್ತಿದೆ. ಈ ಪರೀಕ್ಷೆಯೇ ದೊಡ್ಡ ಕೆಲಸ. ಅಲ್ಲಿರುವುದು ಧೂಳು ತುಂಬಿದ ನೆಲ ಆಗಿರುವುದರಿಂದ ವೈಜ್ಞಾನಿಕವಾಗಿ ಸೂಕ್ಷ್ಮ ಪರೀಕ್ಷೆಗಳು ನಡೆಯುತ್ತಿವೆ. ೨೦೦ ಅಡಿ ಆಳದವರೆಗೆ ಪರೀಕ್ಷೆ, ಪರಿಶೀಲನೆಯ ಬಳಿಕವೇ ತಳಪಾಯ ಹಾಕುವ ಕಾರ್ಯ ನಡೆಯಲಿದೆ. ಈ ಪರೀಕ್ಷೆ ಅವಧಿಯ ಬಗ್ಗೆ ಇನ್ನೂ ಸ್ಪಷ್ಟತೆಯಿಲ್ಲ. ಈಗ ನೆಲ ಸಮತಟ್ಟು ಮತ್ತಿತರ ಕಾಮಗಾರಿ ನಡೆಯುತ್ತಿವೆ ಎಂದರು. ಕಸಾಪ ಜಿಲ್ಲಾಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ ಸುದ್ದಿಗೋಷ್ಠಿಯಲ್ಲಿದ್ದರು.