ಜ.೧೪-೧೫ ಕ್ಕೆ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಪಿಂಚಣಿ ಕ್ರಾಂತಿ

ದಾವಣಗೆರೆ.ಜ.೧೨;  ಅನುದಾನಿತ ಪಿಂಚಣಿ ವಂಚಿತ ನೌಕರರಿಂದ ಜ.೧೪ ಹಾಗೂ ೧೫ ರಂದು ಕುಟುಂಬ ಪರಿವಾರ ಸಮೇತ ಬೆಂಗಳೂರು ಫ್ರೀಡಂ ಪಾರ್ಕಿನಲ್ಲಿ‌ ಅಹೋರಾತ್ರಿ ಮತ್ತು ಉಪವಾಸ ಸತ್ಯಾಗ್ರಹ ನಡೆಸಲಾಗುವುದು ಎಂದು ರಾಜ್ಯ ಅನುದಾನಿತ ಶಾಲಾ ಕಾಲೇಜುಗಳ ಪಿಂಚಣಿ ವಂಚಿತ ನೌಕರರ ಸಂಘದ ಜಿಲ್ಲಾ ಕಾರ್ಯದರ್ಶಿ ಹನುಮಂತ ರೆಡ್ಡಿ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರುರಾಜ್ಯದ ಅನುದಾನಿತ ಶಾಲೆ ಕಾಲೇಜುಗಳಲ್ಲಿ ಸೇವೆ ಸಲ್ಲಿಸುತ್ತಿರುವ ಸಾವಿರಾರು ನೌಕರರಿಗೆ   ಹಳೇ ಪಿಂಚಣಿ ಯೋಜನೆ ಮತ್ತು ಆರೋಗ್ಯ ಸಂಜೀವಿನಿ ಯೋಜನೆಗಳನ್ನು ಜಾರಿಗೊಳಿಸಲು ಆಗ್ರಹಿಸಿ ನಮ್ಮ ಸಂಘದ ನೇತೃತ್ವದಲ್ಲಿ ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ 2022ನೇ ಅಕ್ಟೋಬರ್ 7 ರಿಂದ ಧರಣಿ ಸತ್ಯಾಗ್ರಹ ನಡೆಸುತ್ತಿದ್ದೇವೆ. ಈ ಧರಣಿ ಸತ್ಯಾಗ್ರಹ ಇದೇ ಜನೇವರಿ 14 ಕ್ಕೆ 100ನೇ ದಿನ ತಲುಪಲಿದೆ. ಆದರೆ ಸರಕಾರ ಮಾತ್ರ ನಮ್ಮ ಪ್ರಾಮಾಣಿಕ ಮತ್ತು ಶಾಂತಿಯುತ ಹೋರಾಟಕ್ಕೆ ಸ್ಪಂದಿಸಿಲ್ಲ  ಆದ್ದರಿಂದ ಇದೇ ಜ 14ಕ್ಕೆ ನಮ್ಮ ಧರಣಿ ಸತ್ಯಾಗ್ರಹ 100 ನೇ ದಿನ ತಲುಪಲಿದೆ. ಅಂದು ರಾಜ್ಯದ ಅನುದಾನಿತ ಪಿಂಚಣಿ ವಂಚಿತ ನೌಕರರು ಸಾವಿರಾರು ಸಂಖ್ಯೆಯಲ್ಲಿ  ಕುಟುಂಬ ಪರಿವಾರ ಸಮೇತ “ಅನುದಾನಿತ ಪಿಂಚಣಿ ವಂಚಿತ ನೌಕರರ ಕುಟುಂಬದ ನಡೆ ಬೆಂಗಳೂರು ಫ್ರೀಡಂ ಪಾರ್ಕ ಕಡೆ” ಎಂಬ ಘೋಷ ವಾಕ್ಯದೊಂದಿಗೆ ಫ್ರೀಡಂ ಪಾರ್ಕಿಗೆ ಆಗಮಿಸಿ ತೀವ್ರ ಗತಿಯ ಹೋರಾಟ ನಡೆಸಲು ತೀರ್ಮಾನಿಸಿದ್ದೇವೆ. ಸರದಿ ಉಪವಾಸ ಸತ್ಯಾಗ್ರಹ ನಡೆಸುವ ಮೂಲಕ ಅನುದಾನಿತ ಪಿಂಚಣಿ ವಂಚಿತ ನೌಕರರು ಸಂಕ್ರಾಂತಿ ಹಬ್ಬವನ್ನು ಫ್ರೀಡಂ ಪಾರ್ಕಿನಲ್ಲಿ ಆಚರಿಸಲು ನಿರ್ಧರಿಸಿದ್ದೇವೆ ಎಂದರು.2006 ರ ಏಪ್ರಿಲ್  1 ಕ್ಕೂ ಮೊದಲು ನೇಮಕವಾಗಿ 2006 ರ ಏಪ್ರಿಲ್ 1 ರ ನಂತರ ಅನುದಾನಕ್ಕೊಳಪಟ್ಟ ನೌಕರರ  ಅನುದಾಕ್ಕೂ ಪೂರ್ವದ ಸೇವೆಯನ್ನು ಪಿಂಚಣಿಗೆ ಪರಿಗಣಿಸಿ, ನಿವೃತ್ತಿಯಾದ ದಿನಾಂಕದಂದು ವೇತನ ನಿಗದಿಪಡಿಸಿ ಹಳೆಯ ನಿಶ್ಚಿತ ಪಿಂಚಣಿ, ಯೋಜನೆ ನೀಡಬೇಕು.  ಅನುದಾನಿತ ಶಾಲಾ ಕಾಲೇಜುಗಳಲ್ಲಿ ನೇಮಕ ಹೊಂದಿ ಸೇವೆ ಸಲ್ಲಿಸುತ್ತಿರುವ ಎಲ್ಲಾ ನೌಕರರಿಗೆ ನಿಶ್ಚಿತ ಪಿಂಚಣಿ ಸೌಲಭ್ಯ ನೀಡುವುದು. ಸರ್ಕಾರಿ ನೌಕರರಿಗೆ ನೀಡುತ್ತಿರುವ ಜ್ಯೋತಿ ಸಂಜೀವಿನಿ ಮತ್ತಿತರ ವೈದ್ಯಕೀಯ ಸೌಲಭ್ಯ ಗಳನ್ನು ತಾರತಮ್ಯ ಇಲ್ಲದೇ, ಅನುದಾನಿತ ನೌಕರರಿಗೂ ನೀಡಬೇಕೆಂದು ಒತ್ತಾಯಿಸಿದರು.ಸುದ್ದಿಗೋಷ್ಠಿಯಲ್ಲಿ ತಮ್ಮನಗೌಡ ಕೆರೂರು,ಬಿ.ಹೆಚ್ ದಾದಾಪೀರ್ ನವಿಲೇಹಾಳ್,ಸೌಭಾಗ್ಯ ಕೆ.ಜಿ, ರುದ್ರಪ್ಪ,ಎನ್.ಸಿದ್ದಪ್ಪ,ದೊಡ್ಮನಿ ಕೆಂಚಪ್ಪ ಉಪಸ್ಥಿತರಿದ್ದರು.