ಜ.೧೦ಕ್ಕೆ ಗ್ರಾ.ಪಂ ನೂತನ ಸದಸ್ಯರಿಗೆ ಸನ್ಮಾನ

ಹೊನ್ನಾಳಿ.ಜ.೯; ಗ್ರಾಪಂ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಬಿಜೆಪಿ ಬೆಂಬಲಿತ ನೂತನ ಸದಸ್ಯರಿಗೆ ಜ. 10ರಂದು ಪಟ್ಟಣದಲ್ಲಿ ಅಭಿನಂದನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ಕುಮಾರ್ ಕಟೀಲ್ ನೇತೃತ್ವ ವಹಿಸುತ್ತಾರೆ ಎಂದು ತಾಲೂಕು ಬಿಜೆಪಿ ಅಧ್ಯಕ್ಷ ಜೆ.ಕೆ. ಸುರೇಶ್ ಹೇಳಿದರು.ಪಟ್ಟಣದ ಅಗಳ ಮೈದಾನದಲ್ಲಿ  ಕಾರ್ಯಕ್ರಮದ ಪೂರ್ವಭಾವಿ ಸಿದ್ಧತಾ ಕಾರ್ಯಗಳನ್ನು ಪರಿಶೀಲಿಸಿ ನಂತರ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.ಗ್ರಾಪಂ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಸದಸ್ಯರ ಜೊತೆಯಲ್ಲಿಯೇ ಸೋತ ಅಭ್ಯರ್ಥಿಗಳು, ಚುನಾವಣೆಯ ಸಂದರ್ಭದಲ್ಲಿ ಪಕ್ಷದ ಬೆಂಬಲಿತ ಅಭ್ಯರ್ಥಿಗಳ ಗೆಲುವಿಗಾಗಿ ಶ್ರಮಿಸಿದ ಮುಖಂಡರು, ಜನಪ್ರತಿನಿಧಿಗಳು, ಕಾರ್ಯಕರ್ತರಿಗೂ ಅಭಿನಂದನೆ ಸಲ್ಲಿಸಲಾಗುವುದು ಎಂದು ತಿಳಿಸಿದರು.ಅಭಿನಂಧನಾ ಕಾರ್ಯಕ್ರಮವನ್ನು ಜ. 10ರಂದು ಪಟ್ಟಣದ ಅಗಳ ಮೈದಾನದಲ್ಲಿ ನಡೆಸಲಾಗುವುದು. ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಬಸವರಾಜು, ಸಂಸದ ಜಿ.ಎಂ. ಸಿದ್ಧೇಶ್ವರ, ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್, ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ, ಬಿಜೆಪಿ ಜಿಲ್ಲಾಧ್ಯಕ್ಷ ವೀರೇಶ್ ಹನಗವಾಡಿ ಸೇರಿದಂತೆ ನಾನಾ ನಾಯಕರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದರು.ಜಿ.ಪಂ ಸದಸ್ಯ ಎಂ.ಆರ್. ಮಹೇಶ್, ಎಪಿಎಂಸಿ ನಿರ್ದೇಶಕ ಜಿವಿಎಂ ರಾಜು, ತಾಪಂ ಉಪಾಧ್ಯಕ್ಷ ಕುಳಗಟ್ಟೆ ಕೆ.ಎಲ್. ರಂಗನಾಥ್, ಸ್ಥಾಯಿ ಸಮಿತಿ ಅಧ್ಯಕ್ಷ ಎಚ್. ತಿಪ್ಪೇಶ್, ಸದಸ್ಯ ಹಾಗೂ ತಾಲೂಕು ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿ.ಆರ್. ಶಿವಾನಂದ್, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ನೆಲಹೊನ್ನೆ ಎನ್.ಎಸ್. ಮಂಜುನಾಥ್, ಜಿಲ್ಲಾ ಕಾರ್ಯದರ್ಶಿ ಅರಕೆರೆ ಎ.ಎಂ. ನಾಗರಾಜ್, ತಾಲೂಕು ಉಪಾಧ್ಯಕ್ಷ ಸಿದ್ಧನಗೌಡ, ಎಸ್ಸಿ ಮೋರ್ಚಾ ಅಧ್ಯಕ್ಷ ಉಮೇಶ್, ಮುಖಂಡರಾದ ಕೆ.ಪಿ. ಕುಬೇರಪ್ಪ, ಪ್ರೇಮ್‌ಕುಮಾರ್ ಭಂಡಿಗಡಿ ಮತ್ತಿತರರು ಉಪಸ್ಥಿತರಿದ್ದರು.