ಜ್ವರದ ಲಕ್ಷಣಗಳು ಕಂಡು ಬಂದಲ್ಲಿ ರಕ್ತ ಪರೀಕ್ಷೆ ಮಾಡಿಸಿಕೊಳ್ಳಿ

ಚಿತ್ರದುರ್ಗ.ಜೂ.೨೧; ಸಾರ್ವಜನಿಕರು ಮನೆಯ ಸುತ್ತಮುತ್ತ ನೈರ್ಮಲ್ಯತೆ ಕಾಪಾಡಿಕೊಂಡು ಘನ ತ್ಯಾಜ್ಯ ವಸ್ತುಗಳನ್ನು ಸೂಕ್ತ ಜಾಗದಲ್ಲಿ ವಿಲೇವಾರಿ ಮಾಡಬೇಕು. ಯಾವುದೇ ಜ್ವರದ ಲಕ್ಷಣ ಕಂಡು ಬಂದಲ್ಲಿ ರಕ್ತ  ಪರೀಕ್ಷೆ ಮಾಡಿಸಿಕೊಂಡು ತ್ವರಿತ ಚಿಕಿತ್ಸೆ ಪಡೆದುಕೊಳ್ಳಬೇಕು ಎಂದು ಜಿಲ್ಲಾ ಆಶ್ರಿತ ರೋಗಗಳ ರೋಗವಾಹಕ ನಿಯಂತ್ರಣ ಅಧಿಕಾರಿ ಡಾ. ಕಾಶಿ ಸಲಹೆ ನೀಡಿದರು.ಆರೋಗ್ಯ ಇಲಾಖೆ ಕೀಟಜನ್ಯ ರೋಗಗಳ ನಿಯಂತ್ರಣ ವಿಭಾಗದಿಂದ ಮಲೇರಿಯಾ ಮಾಸಾಚರಣೆ ಕಾರ್ಯಕ್ರಮದ ಅಂಗವಾಗಿ ಚಿತ್ರದುರ್ಗದ ನೆಹರು ನಗರ ಆರೋಗ್ಯ ಕೇಂದ್ರದ ಇಎಸ್‍ಐ ಆಸ್ಪತ್ರೆ ಮುಂಭಾಗದಿಂದ ಮಂಡಕ್ಕಿ ಭಟ್ಟಿ ಸಂತೆ ಮೈದಾನ ಸುತ್ತಮುತ್ತ ಮನೆ ಮನೆ ಭೇಟಿ ಲಾರ್ವ ಸಮೀಕ್ಷೆ ಮಾಹಿತಿ ಶಿಕ್ಷಣ ಸಂವಹನ ಕಾರ್ಯಕ್ರಮಕ್ಕೆ ಮಂಗಳವಾರ ಹಸಿರು  ನಿಶಾನೆ ತೋರಿಸುವುದರ ಮೂಲಕ  ಚಾಲನೆ ನೀಡಿ ಅವರು ಮಾತನಾಡಿದರು.
ಇತ್ತೀಚಿನ ದಿನಗಳಲ್ಲಿ ಕೀಟ ಜನ್ಯ ರೋಗಗಳಾದ ಡೆಂಗಿ, ಚಿಕನ್ ಗುನ್ಯಾ ಪ್ರಕರಣಗಳು ನಗರ ಪ್ರದೇಶಗಳಲ್ಲಿ ಹೆಚ್ಚೆಚ್ಚು ಕಂಡು ಬರುತ್ತಿದ್ದು, ನಿಯಂತ್ರಣಕ್ಕಾಗಿ ಮಲೇರಿಯಾ ಮಾಸಾಚರಣೆ ಜೊತೆಯಲ್ಲಿ ನಗರ ಪ್ರದೇಶದ ಎಲ್ಲಾ ವಾರ್ಡ್‍ಗಳಲ್ಲಿ ಮನೆ ಮನೆ ಭೇಟಿ ಲಾರ್ವ ಸಮೀಕ್ಷೆ ಕೀಟಗಳ ನಿಯಂತ್ರಣ ಆರೋಗ್ಯ ಮಾಹಿತಿ ಶಿಕ್ಷಣ ಕಾರ್ಯಕ್ರಮ  ಹಮ್ಮಿಕೊಳ್ಳಲಾಗಿದೆ. ನೆಹರು ನಗರದಲ್ಲಿ 13,165 ಮನೆಗಳಿದ್ದು, 64 ತಂಡಗಳನ್ನು ರಚಿಸಿ 128 ಮಾನವ ಸಂಪನ್ಮೂಲ ಬಳಕೆ ಮಾಡಿ, ಆಶಾ ಕಾರ್ಯಕರ್ತೆಯರು, ಆರೋಗ್ಯ ನಿರೀಕ್ಷಣಾಧಿಕಾರಿಗಳು, ಪ್ರಾಥಮಿಕ ಆರೋಗ್ಯ ಸುರಕ್ಷತಾ ಅಧಿಕಾರಿಗಳ ತಂಡವನ್ನು ನಿಯೋಜಿಸಿ, ಲಾರ್ವ ಸಮೀಕ್ಷಾ ಕಾರ್ಯ ನಡೆಸಲಾಗುತ್ತಿದೆ ಎಂದರು.