
ಸಂಜೆವಾಣಿ ವಾರ್ತೆ
ಕೊಪ್ಪಳ, ಆ.18: ಜಿಲ್ಲೆಯ ಮಹಿಳಾ ಸಂಘಟಕಿ, ಹೋರಾಟಗಾರ್ತಿ, ಸ್ವಾಭಿಮಾನಿ ಮಹಿಳಾ ಸಂಚಲನ ಸಮಿತಿ ಅಧ್ಯಕ್ಷೆ ಜ್ಯೋತಿ ಎಂ. ಗೊಂಡಬಾಳರಿಗೆ ಬೆಂಗಳೂರಿನ ಮಾತೃಭೂಮಿ ಯುವಕರ ಸಂಘದ ಬೆಳ್ಳಿ ಮಹೋತ್ಸವ ನಿಮಿತ್ಯ ಕೊಡಮಾಡಿದ ಮಾತೃಭೂಮಿ ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಮಾಡಿದರು.
ಬೆಂಗಳೂರಿನ ರಾಜ್ಯ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಯವನಿಕ ಸಭಾಂಗಣದಲ್ಲಿ ನಡೆದ ಸಂಘದ ಬೆಳ್ಳಿ ಮಹೋತ್ಸವ ನಿಮಿತ್ಯ ನಡೆದ ಕಾರ್ಯಕ್ರಮ ಸಂದರ್ಭದಲ್ಲಿ ಪ್ರಶಸ್ತಿಯನ್ನು ನಾಡಿನ ಹೆಸರಾಂತ ಸಂಸ್ಕೃತಿ ಚಿಂತಕ ಗುಬ್ಬಿಗೂಡು ರಮೇಶ ಮತ್ತು ಹಿರಿಯ ಜಾನಪದ ಕಲಾವಿದ ಅಪ್ಪಗೆರೆ ತಿಮ್ಮರಾಜು ಪ್ರದಾನ ಮಾಡಿದರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣದಲ್ಲಿ ಮುಂಚೂಣಿಯಲ್ಲಿ ಇರುವ ಮಹಿಳಾ ಸ್ವಾಭಿಮಾನಿ ಸಂಚಲನ ಸಮಿತಿ ಹುಟ್ಟು ಹಾಕಿ ಸಾಮಾಜಿಕ ಕೆಲಸ ಮಾಡುತ್ತಿದ್ದಾರೆ, ಹಕ್ಕಿಪಿಕ್ಕಿ ಸಮುದಾಯದ ಸಮಸ್ಯೆಗಳನ್ನು ಮುನ್ನೆಲೆಗೆ ತಂದು ರಾಜ್ಯದ ಗಮನ ಸೆಳೆದ ಇವರು ಮಹಿಳಾ ದೌರ್ಜನ್ಯಗಳನ್ನು ಕಟುವಾಗಿ ವಿರೋಧಿಸುತ್ತಾ ಬಂದಿದ್ದಾರೆ. ಮಹಿಳಾ ಸಬಲೀಕರಣ ಕ್ಷೇತ್ರದಲ್ಲಿ ಮಾಡಿದ ಉತ್ತಮ ಸಾಧನೆಯನ್ನು ಪರಿಗಣಿಸಿ ರಾಷ್ಟ್ರೀಯ ಪ್ರಶಸ್ತಿ ನೀಡಲಾಯಿತು. ಪ್ರಶಸ್ತಿಯು ಬೆಳ್ಳಿ ಪದಕ, ಪ್ರಶಸ್ತಿ ಫಲಕ, ಪ್ರಶಸ್ತಿ ಗೌರವ ಮತ್ತು ಪರಿಚಯ ಕೃತಿ ಒಳಗೊಂಡಿದೆ.
ಈ ಸಂದರ್ಭದಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಡಾ. ಸಂತೋಷ ಹಾನಗಲ್, ಗ್ರಂಥಾಲಯ ಇಲಾಖೆ ನಿರ್ದೇಶಕ ಡಾ. ಸತೀಶ್‌ಕುಮಾರ್ ಹೊಸಮನಿ, ಕನ್ನಡ ಜಾನಪದ ಪರಿಷತ್ ರಾಜ್ಯ ಅಧ್ಯಕ್ಷ ಮತ್ತು ಮಾತೃಭೂಮಿ ಯುವಕರ ಸಂಘದ ಸಂಸ್ಥಾಪಕ ಅಧ್ಯಕ್ಷ ಡಾ. ಎಸ್. ಬಾಲಾಜಿ, ಸಹಕಾರ ಸಂಘದ ರಾಜ್ಯ ಜಂಟಿ ನಿರ್ದೇಶಕ ಲಕ್ಷ್ಮೀಪತಯ್ಯ, ಬೆಂಗಳೂರಿನ ಸಂಸ್ಕಾರ ಭಾರತಿ ಸಂಘಟನಾ ಕಾರ್ಯದರ್ಶಿ ಎಂ.ಎ. ರಾಮಚಂದ್ರ, ರಾಜ್ಯ ಎನ್.ಎಸ್.ಎಸ್. ಅಧಿಕಾರಿ ಪ್ರತಾಪ್ ಲಿಂಗಯ್ಯ, ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತರ ಒಕ್ಕೂಟ ಅಧ್ಯಕ್ಷ ಡಾ. ಜಾವೇದ ಜಮಾದಾರ ಇತರರು ಇದ್ದರು.
ಇದೇ ವೇಳೆ ರಾಜ್ಯದ ವಿವಿಧ ಕ್ಷೇತ್ರದಲ್ಲಿ ಅಪಾರ ಸೇವೆ ಸಲ್ಲಿಸಿದ ಇತರ ೨೪ ಜನ ಪ್ರಮುಖ ಸಾಧಕರಿಗೂ ಸಹ ಪ್ರಶಸ್ತಿ ಪ್ರದಾನ ಮಾಡಿದರು. ಪ್ರಶಸ್ತಿ ಪಡೆದ ಇತರ ಸಾಧಕರು : ಡಾ. ಸತೀಶಕುಮಾರ ಎಸ್. ಹೊಸಮನಿ (ಗ್ರಂಥಾಲಯ), ಪ್ರಕಾಶ್ ಮೂರ್ತಿ ಎಂ. (ಕನ್ನಡ ಪರಿಚಾರಕ), ಡಾ. ಕೆ. ಎನ್ ವಿಜಯ್ ಕೊಪ್ಪ (ಕಾನೂನು), ಅರವಿಂದ ಮಂಜುನಾಥ್ (ಧಾರ್ಮಿಕ), ಮುನಿಕೃಷ್ಣ ಎನ್. ಪಿ. (ಸಮಾಜ ಸೇವೆ), ಸೂರಿ ಶ್ರೀನಿವಾಸ್ (ಕನ್ನಡ ಸೇವೆ), ವಿನಯ್ ಕನಕನಾಲ್ ಎ. (ಕಾನೂನು), ಗಾಯತ್ರಿ ರಡ್ಡಿ (ಶಿಕ್ಷಣ), ಬಾಲನಗೌಡ ಎಸ್. ಪಾಟೀಲ್ (ಜಾನಪದ) ಸೇರಿದಂತೆ ಹಲವಾರು ಗಣ್ಯರು ಪ್ರಶಸ್ತಿ ಸ್ವೀಕರಿಸಿದರು.