ಜ್ಯೋತಿಗೆ ಜಾತಿಯಿಲ್ಲ- ಪ್ರಭುಮಹಾಸ್ವಾಮಿಗಳು

ಸಂಡೂರು ಜ 6 : ಮನುಷ್ಯ ಮನುಷ್ಯರಲ್ಲಿ ಜಾತಿ, ಮತ, ಧರ್ಮ ಇವುಗಳು ಬೇರೂರಿದ್ದು ಕಂದಾಚಾರ, ಮೌಡ್ಯತನವನ್ನು, ಮೂಢನಂಬಿಕೆಯನ್ನು ತೊಲಗಿಸಲಾರದೆ ಅಸಮರ್ಥರಾಗಿ ನಾವು ಹಿಂದುಳಿಯಲು ಕಾರಣವಾಗಿದೆ. ಗುಣಮಟ್ಟದ ಶಿಕ್ಷಣದ ಕೊರತೆ, ಆದ್ಯಾತ್ಮಿಕ ಚಿಂತನೆಯಿಲ್ಲದೆ ನಮ್ಮ ಜೀವನ ಅಂಧಕಾರದಿಂದ ತೊಡಗಿದ್ದು ನಮ್ಮಲ್ಲಿಯ ರಕ್ತ ಸಂಬಂಧಗಳು ಕಳಚಲು ಕಾರಣವಾಗಿದ್ದು ಯಾವ ಮನುಷ್ಯನಲ್ಲಿ ಸಂಬಂಧಗಳು ಕಳಚಿ ಹೋಗದಂತೆ ನೋಡಿಕೊಂಡು ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು ಎನ್ನುವ ಭಾವನೆಯನ್ನು ಹೊಂದುವದಿಲ್ಲವೋ ನಾವೆಲ್ಲರೂ ಮನುಷ್ಯರು, ಒಂದೇ ಮನೆಯ ಅಣ್ಣ ತಮ್ಮಂದಿರು ಎನ್ನುವ ಭಾವನೆ ಎಲ್ಲಿಯವರೆಗೆ ಬರುವುದಿಲ್ಲವೋ ಅಲ್ಲಿಯ ವರೆಗೆ ನಾವು ಸಉಧಾರಣೆ ಯಾಗಲು ಸಾಧ್ಯವೇ ಇಲ್ಲವೆಂದು ಸಂಡೂರಿನ ಶ್ರೀ ಪ್ರಭುದೇವರ ಸಂಸ್ಥಾನ ವಿರಕ್ತಮಠದ ಪರಮಪೂಜ್ಯ ಶ್ರೀ ಪ್ರಭುಮಹಾಸ್ವಾಮಿಗಳು ಕರೆನೀಡಿದರು.
ಅವರು ಮುಖ್ಯ ಬೀದಿಯಲ್ಲಿರುವ ವೀರಭದ್ರೇಶ್ವರ , ಬಸವೇಶ್ವರ, ಚಂದ್ರಮೌಳೇಶ್ವರ ದೇವಸ್ಥಾನ ಹಾಗೂ ಶ್ರೀ ಪ್ರಭುದೇವರ ಮಠದ ತಾಯಮ್ಮ ದೇವಿ ಆವರಣದಲ್ಲಿ ಕಡೇ ಕಾರ್ತಿಕೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದರು. ಮನುಷ್ಯ ಧರ್ಮದಲ್ಲಿ ಗಂಡು ಹೆಣ್ಣು ಎನ್ನುವ ಎರಡೇ ಜಾತಿಗಳು ಪ್ರಮುಖ, ಅದರೆ ನಾವು ಜಾತಿಗಳನ್ನು ಸೃಷ್ಟಿಸಿಕೊಂಡು ಮೇಲು, ಕೀಳು ಎನ್ನುವ ಪದ್ದತಿಯನ್ನು ಅನುಸರಿಸುತ್ತಿದ್ದೇವೆ, ಉರಿಯುವ ಜ್ಯೋತಿಗೆ ಬೆಳಗುವ ದೀಪಕ್ಕೆ ಜಾತಿಯಿದೆಯೇ? ಜಾತಿ ಹೀನನನ ಮನೆ ಜ್ಯೋತ ತಾ ಹೀನವೇ , ಜಾತಿ ವಿಜಾತಿ ಎನ್ನಬೇಡ, ದೇವ ನೊಲಿದಾತನೆ ಜಾತ ಸರ್ವಜ್ಞ ಎನ್ನುವ ಸರ್ವಜ್ಞ ಕವಿಯ ತ್ರಿಪದಿ ಸಾಹಿತ್ಯದಲ್ಲಿ ಸತ್ಯಾಂಶವು ಅಡಗಿದ್ದು ಸಂತರ, ಶರಣರ, ಮಾರ್ಗದಲ್ಲಿ ಅವರ ತತ್ವ ಸಿದ್ದಾಂತಗಳಿಗೆ ಮಾರುಹೋಗಿ ಅವರ ನಡೆ ನುಡಿಯನ್ನು ಪಾಲಿಸಿದರೆ ನಮ್ಮ ಎಲ್ಲವೂ ಶೂನ್ಯ, ಎಂದು ಗೋಚರವಾಗಲು ಸಾಧ್ಯ, ನಾನು ನನ್ನದು ಎನ್ನುವ ಮನೋಭಾವನೆ ತ್ಯಜಿಸಿ ಎಲ್ಲವೂ ಶಿವರ್ಪಣ ಎಂದು ಅರಿವು ಮಾಡಬೇಕಾಗಿರುವುದು ಅತಿ ಅವಶ್ಯ ಎಂದು ತಿಳಿಸಿದರು.
ವೀರಭದ್ರೇಶ್ವರ, ಮಹಿಳಾ ಭಜನಾ ಮಂಡಳಿಯವರು, ಜೀಜಾಬಾಯಿ ಮಹಿಳಾ ತಂಡದವರು ಇತರ ಹಲವಾರು ಭಜನಾ ಮಂಡಳಿಯವರು ಭಜನೆ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಗುರುವಿನ ಪ್ರಭಾವ ಪ್ರಸ್ತುತ ಪಡಿಸುವ ಮೂಲಕ ಕಾರ್ತಿಕೋತ್ಸವವನ್ನು ಯಶಸ್ವಿಗೊಳಿಸಿದರು.