ಜ್ಯೋತಿಗೆ ಖಾಯಂ ಉದ್ಯೋಗ ಬಿಬಿಎಂಪಿ ನಿರ್ಧಾರ

ಬೆಂಗಳೂರು, ಆ.೧೮-ಬಿಬಿಎಂಪಿ ಕೇಂದ್ರ ಕಚೇರಿಯ ಗುಣ ನಿಯಂತ್ರಣ ಲ್ಯಾಬ್ ನಲ್ಲಿ ನಡೆದ ಅಗ್ನಿ ಅವಘಡದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಗುತ್ತಿಗೆ ಆಧಾರಿತ ಲ್ಯಾಬ್ ಆಪರೇಟರ್ ಜ್ಯೋತಿಗೆ ಬಿಬಿಎಂಪಿ ಖಾಯಂ ಉದ್ಯೋಗ ನೀಡಲು ಮುಂದಾಗಿದೆ.
ಅಗ್ನಿ ಅವಘಡ ಘಟನೆಯಲ್ಲಿ ಒಟ್ಟು ೯ ಮಂದಿ ಗಾಯಗೊಂಡಿದ್ದು, ಈ ಪೈಕಿ ಒಂದಿಬ್ಬರ ಪರಿಸ್ಥಿತಿ ಗಂಭೀರವಾಗಿತ್ತು. ಸದ್ಯ ಅವರಿಗೆ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಗಾಯಾಳುಗಳ ಪೈಕಿ ಲ್ಯಾಬ್ ಆಪರೇಟರ್ ಆಗಿ ಕೆಲಸ ಮಾಡುತ್ತಿದ್ದ ಯುವತಿ ಜ್ಯೋತಿ ಕೂಡ ಒಬ್ಬರು. ದುರಂತದಲ್ಲಿ ಮುಖ ಹಾಗೂ ದೇಹದ ಕೆಲ ಭಾಗ ಸುಟ್ಟು ಹೋಗಿರುವ ಜ್ಯೋತಿಗೆ ಚಿಕಿತ್ಸೆ ಮುಂದುವರಿಸಲಾಗಿದೆ. ಇದರ ಜೊತೆ ಜೊತೆಗೆ ಜ್ಯೋತಿಯ ಬಾಳಿಗೆ ಬೆಳಕು ನೀಡಲು ಅಧಿಕಾರಿಗಳು ಮುಂದಾಗಿದ್ದಾರೆ.
ಅಗ್ನಿ ಅವಘಡದಲ್ಲಿ ಜ್ಯೋತಿ ಗಾಯಗೊಂಡ ಬಳಿಕ ಆಕೆಗೆ ನಿಶ್ಚಯವಾಗಿದ್ದ ಮದುವೆ ರದ್ದಾಗಿದೆ ಎನ್ನಲಾಗಿದೆ. ಜ್ಯೋತಿ ಬಿಬಿಎಂಪಿ ಲ್ಯಾಬ್‌ನಲ್ಲಿ ಹೊರ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದಾರೆ. ಆಕೆಯ ವೇತನ ಮಟ್ಟವು ಬಹಳ ಕಡಿಮೆಯಿದೆ. ಹಾಗಾಗಿ, ಜ್ಯೋತಿಯ ಕೆಲಸವನ್ನು ಖಾಯಂಗೊಳಿಸಲು ಅಧಿಕಾರಿಗಳು ಮುಂದಾಗಿದ್ದಾರೆ.
ಈಗಾಗಲೇ ಪಾಲಿಕೆಯ ಹಿರಿಯ ಅಧಿಕಾರಿಗಳು ಈ ಸಂಬಂಧ ಸಭೆ ನಡೆಸಿ ತೀರ್ಮಾನ ಕೈಗೊಂಡಿದ್ದು, ಸರ್ಕಾರದ ಅಧಿಕಾರಿಗಳ ಜೊತೆ ಬಿಬಿಎಂಪಿ ಆಯುಕ್ತ ತುಷಾರ್ ಗಿರಿನಾಥ್ ಒಂದು ಸುತ್ತಿನ ಮಾತುಕತೆ ಕೂಡ ನಡೆಸಿದ್ದಾರೆ.
ಡಿಸಿಎಂ ಮತ್ತು ಬೆಂಗಳೂರು ನಗರಾಭಿವೃದ್ಧಿ ಸಚಿವರಾಗಿರುವ ಡಿ.ಕೆ. ಶಿವಕುಮಾರ್ ಜೊತೆಯೂ ಬಿಬಿಎಂಪಿ ಆಯುಕ್ತರು ಚರ್ಚೆ ನಡೆಸಿದ್ದಾರೆ. ಡಿಸಿಎಂ ಸೂಚನೆ ಕೊಟ್ಟರೆ ಜ್ಯೋತಿಗೆ ಖಾಯಂ ಸರ್ಕಾರಿ ಹುದ್ದೆ ಸಿಗಲಿದೆ ಎಂದು ಪಾಲಿಕೆ ಅಧಿಕಾರಿಗಳು ತಿಳಿಸಿದ್ದಾರೆ.

ಚರ್ಮ ಕಸಿಗೂ ಸಿದ್ಧತೆ..!
ಇನ್ನೂ, ನಾಲ್ವರು ಗಾಯಾಳುಗಳಿಗೆ ಚರ್ಮ ಕಸಿಗೆ ಸಿದ್ಧತೆ ಆರಂಭವಾಗಿದ್ದು, ಮುಂದಿನ ತಿಂಗಳು ಚರ್ಮ ಕಸಿ ನಡೆಸಲು ತಯಾರಿ ನಡೆಸಲಾಗಿದೆ.
ನಾಲ್ವರಿಗೆ ಮುಖ, ಎದೆ ಭಾಗಗಳಲ್ಲಿ ಹೆಚ್ಚಿನ ಚರ್ಮ ಸುಟ್ಟುಹೋಗಿತ್ತು. ದೇಹದ ಸುಟ್ಟ ಭಾಗಗಳಲ್ಲಿ ಚರ್ಮ ಪೂರ್ತಿ ಗಾಯ ಆಗಿದೆ. ಈ ಹಿನ್ನೆಲೆಯಲ್ಲಿ ಸುಟ್ಟ ದೇಹದ ಭಾಗಗಳಿಗೆ ಚರ್ಮ ಕಸಿ ಮಾಡೋದಕ್ಕೆ ವೈದ್ಯರು ತಯಾರಿ ನಡೆಸಿದ್ದಾರೆ.
ಈಗಾಗಲೇ ಖಾಸಗಿ ಚರ್ಮ ಬ್ಯಾಂಕ್‌ನವರ ಜೊತೆ ವಿಕ್ಟೋರಿಯ ವೈದ್ಯರು ಮಾತುಕತೆ ನಡೆಸಿದ್ದು, ಮುಂದಿನ ತಿಂಗಳ ಮೊದಲ ವಾರದಲ್ಲಿ ಚರ್ಮ ಕಸಿಗೆ ಸಿದ್ದತೆ ನಡೆಸಲಾಗಿದೆ. ಸುಟ್ಟ ಗಾಯಾಳುಗಳ ಹೆಚ್ಚಿನ ಚಿಕಿತ್ಸೆಗೆ ಹೊರ ರಾಜ್ಯದ ವೈದ್ಯರಿಗೂ ಬಿಬಿಎಂಪಿ ಮೊರೆ ಹೋಗಿದೆ.