ಜ್ಯೂವೆಲ್ಲರಿ ಅಂಗಡಿಯಲ್ಲಿ ಚಿನ್ನ ಕಳವು ಸೇಲ್ಸ್ ಮ್ಯಾನ್ ಗಳ ಸೆರೆ

ಬೆಂಗಳೂರು, ಜು.೧೮-ಸೇಲ್ಸ್ ಮ್ಯಾನ್ ಆಗಿ ಕೆಲಸ ಮಾಡಿಕೊಂಡಿದ್ದ ಜ್ಯೂವೆಲ್ಲರಿ ಅಂಗಡಿಯಲ್ಲಿ ಲಕ್ಷಾಂತರ ಮೌಲ್ಯದ ಚಿನ್ನಾಭರಣಗಳನ್ನು ಕಳವು ಮಾಡುತ್ತಿದ್ದ ಇಬ್ಬರು ಖದೀಮರನ್ನು ಯಶವಂತಪುರ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.


ಯಶವಂತಪುರದ ಚೇತನ್ (೨೭)ಹಾಗೂ ಮತ್ತಿಕೆರೆಯ ವಿಜಯ್ (೨೯)ಬಂಧಿತ ಆರೋಪಿಗಳಾಗಿದ್ದಾರೆ ಎಂದು ಡಿಸಿಪಿ ವಿನಾಯಕ ಪಾಟೀಲ್ ತಿಳಿಸಿದ್ದಾರೆ.
ಬಂಧಿತ ಆರೋಪಿಗಳಿಂದ ೯೯ ಸಾವಿರ ನಗದು ಸೇರಿ ೨೬.೨೫ ಲಕ್ಷ ಮೌಲ್ಯದ ೩೭೨.೯ ಗ್ರಾಂ ಚಿನ್ನಾಭರಣಗಳು, ಕಳವು ಮಾಡಿದ್ದ ಚಿನ್ನಾಭರಣಗಳನ್ನು ವಿಲೇವಾರಿ ಬಂದ ಹಣದಿಂದ ಖರೀದಿಸಿದ್ದ ಕಾರು,ದ್ವಿಚಕ್ರವಾಹನವನ್ನು ವಶಪಡಿಸಿಕೊಂಡು ಹೆಚ್ಚಿನ ತನಿಖೆಯನ್ನು ಕೈಗೊಳ್ಳಲಾಗಿದೆ
ಯಶವಂತಪುರ ೧ನೇ ಮುಖ್ಯರಸ್ತೆಯಲ್ಲಿ ದಿ ಬೆಸ್ಟ್ ಜ್ಯೂವೆಲ್ಲರಿಯಲ್ಲಿ ಗ್ರಾಹಕರೊಬ್ಬರು ಚಿನ್ನದ ಸರವನ್ನು ಮಾಡಿಕೊಡುವಂತೆ ಆರ್ಡರ್ ಕೊಟ್ಟಿದ್ದು,ಅದನ್ನು ಡಿಸ್‌ಪ್ಲೇ ಬೋರ್ಡಿನಲ್ಲಿಟ್ಟಿದ್ದು ಗ್ರಾಹಕರಿಗೆ ನೀಡಲು ಹುಡುಕಾಡಿದಾಗ ಸದರಿ ಚಿನ್ನದ ಸರ ಸಿಗಲಿಲ್ಲ.
ಎಲ್ಲಾ ಕಡೆ ಹುಡುಕಾಡಿ ನಂತರ ಅಂಗಡಿಯಲ್ಲಿದ್ದ ಸಿಸಿಟಿವಿ ಕ್ಯಾಮರಾವನ್ನು ಪರಿಶೀಲಿಸಿದಾಗ ಸೇಲ್ಸ್ ಮ್ಯಾನ್ ಆಗಿ ಕೆಲಸ ಮಾಡಿಕೊಂಡಿರುವ ಆರೋಪಿಯು ತೆಗೆದುಕೊಂಡಿರುವುದು ಕಂಡು ಬಂದಿದ್ದು, ಬಳಿಕ ಅಂಗಡಿಯ ಸ್ಟಾಕ್ ನ್ನು ಮಾಲೀಕರು
ಪರಿಶೀಲನೆ ಮಾಡಿದಾಗ ಕೆಲವು ಚಿನ್ನಾಭರಣಗಳು ನಾಪತ್ತೆಯಾಗಿರುವುದು ಕಂಡು ಬಂದಿದೆ
ಈ ಬಗ್ಗೆ ನೀಡಿದ ದೂರಿನ ಮೇರೆಗೆ ಯಶವಂತಪುರ ಪೊಲೀಸರು ಸೇವಕರಿಂದ ಕಳವು ಪ್ರಕರಣ ದಾಖಲಿಸಿ ಜ್ಯೂವೆಲ್ಲರಿ ಅಂಗಡಿಯಲ್ಲಿ ಸೇಲ್ಸ್ ಮ್ಯಾನ್ ಆಗಿ ಕೆಲಸ ಮಾಡುತ್ತಿದ್ದ ಚೇತನ್ ಹಾಗೂ ಆತನ ಸ್ನೇಹಿತ ವಿಜಯ್ ಸೇರಿ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ.
ಆರೋಪಿ ಚೇತನ್ ದಿ ಬೆಸ್ಟ್ ಜ್ಯೂವೆಲ್ಲರಿ ಅಂಗಡಿಯಲ್ಲಿ ಕಳೆದ ೪ ವರ್ಷಗಳಿಂದ ಸೇಲ್ಸ್ ಮ್ಯಾನ್ ಆಗಿ ಕೆಲಸ ಮಾಡಿಕೊಂಡಿದ್ದು, ಮಾಲೀಕರಿಗೆ ಗೊತ್ತಾಗದಂತೆ ಕಳೆದ ೧ ವರ್ಷದಿಂದ ಒಂದೊಂದೇ ಚಿನ್ನದ ಆಭರಣಗಳನ್ನು ಕಳವು ಮಾಡಿಕೊಂಡು ಹೋಗಿ ಮತ್ತೊಬ್ಬ ಆರೋಪಿ ವಿಜಯ್ ಗೆ ನೀಡುತ್ತಿದ್ದು,ಆತ ಆರೋಪಿಯು ತನ್ನ ಹೆಸರಿನಲ್ಲಿ ಗಿರವಿ ಇಟ್ಟು ಬಂದ ಹಣವನ್ನು ಇಬ್ಬರು ಹಂಚಿಕೊಳ್ಳುತ್ತಿದ್ದಾಗಿ ತನಿಖೆಯಿಂದ ತಿಳಿದು ಬಂದಿದೆ.
ಯಶವಂತಪುರ ಪೊಲೀಸ್ ಇನ್ಸ್‌ಪೆಕ್ಟರ್ ಸುರೇಶ್ ಕೆ.ಮತ್ತವರ ಸಿಬ್ಬಂದಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದರು.