ಜ್ಞಾನ-ಸಂಸ್ಕಾರ ಕಲಿಯಿರಿ:ವಿ.ಆರ್.ಸುದರ್ಶನ್

ಕೋಲಾರ,ಏ.೨: ತಾಲ್ಲೂಕಿನ ವೇಮಗಲ್ ಸರ್ಕಾರಿ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮವನ್ನು ಮಾಜಿ ಸಭಾಪತಿ ವಿ.ಆರ್ ಸುದರ್ಶನ್ ನಡೆಸಿಕೊಟ್ಟು, ಜ್ಞಾನ ಸಂಪಾದನೆ ಜತೆಗೆ ಸಂಸ್ಕಾರ ಕಲಿಯುವಂತೆ ಕಿವಿಮಾತು ಹೇಳಿದರು.
ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಆತ್ಮಸ್ಥೈರ್ಯ ತುಂಬಲು ಗ್ರಾಮದ ಸರ್ಕಾರಿ ಪದವಿ ಪೂರ್ವ ಕಾಲೇಜಿಗೆ ಆಗಮಿಸಿದ್ದ ಅವರು ‘ದೇಶ ಸುತ್ತಿ ನೋಡು, ಕೋಶ ಓದಿ ನೋಡು ಎನ್ನುವುದು ಪ್ರಚಲಿತವಾದ ಮಾತು. ಜ್ಞಾನ ಸಂಪಾದನೆಗೆ ಅಂದಿನಿಂದ ಇಂದಿನವರೆಗೂ ಪುಸ್ತಕವೇ ಮೂಲವಾಗಿದೆ, ಪಠ್ಯಪುಸ್ತಕ ಓದಿ ಹೆಚ್ಚಿನ ಅಂಕ ಗಳಿಸಲು ಸಾಧ್ಯ ಎಂದು ಕಿವಿಮಾತು ಹೇಳಿದರು.
ಸಮಯ ಪರಿಪಾಲನೆ ವಿದ್ಯಾರ್ಥಿ ಜೀವನದಲ್ಲಿ ಒಂದು ಮೂಲಭೂತ ಕರ್ತವ್ಯ ಆಗಿರಬೇಕು,ಆಗ ಮಾತ್ರ ಅಂದುಕೊಂಡ ಎಲ್ಲಾ ಗುರಿಗಳನ್ನು ಮುಟ್ಟಲು ಸಾಧ್ಯ. ಆದ್ದರಿಂದ ಸಮಯ ನಿರ್ವಹಣೆಗೆ ಸಲಹೆಗಳನ್ನು ನೀಡಿದರು.
ಒಬ್ಬ ವ್ಯಕ್ತಿಯ ಬೌದ್ಧಿಕ ಪ್ರಬುದ್ಧತೆ ಬರುವುದೇ ಪುಸ್ತಕ ಓದುವುದರಿಂದ, ಓದು ನಮ್ಮ ಮನೋವೈಶಾಲ್ಯವನ್ನು ಹೆಚ್ಚಿಸುವ ಬಹುದೊಡ್ಡ ಸಾಧನ. ಈ ಆಧುನಿಕ ಕಾಲದಲ್ಲಿ ಇಂದಿನ ಯುವ ಜನತೆಯಲ್ಲಿ ಪುಸ್ತಕ ಪ್ರೇಮ ಕೊರತೆ ಬಹಳಷ್ಟಿದೆ. ಯುವ ಜನತೆಯಲ್ಲಿ ಪುಸ್ತಕ ಕುರಿತಾದ ಮಹತ್ವ ಹೆಚ್ಚಿಸಲು, ಪುಸ್ತಕ ಮಾರಾಟವನ್ನು ಹೆಚ್ಚಿಸುವ ಸಲುವಾಗಿ, ಪುಸ್ತಕದ ಉಳಿವಿಗಾಗಿ ಈ ದಿನವನ್ನು ಆಚರಿಸಲಾಗುತ್ತದೆ ಎಂದರು.
ಸಂವಿಧಾನದ ಕುರಿತು ಶಾಲಾ ಶಿಕ್ಷಕರು ವಾರಕ್ಕೊಮ್ಮೆ ವಿದ್ಯಾರ್ಥಿಗಳಿಗೆ ಅರಿವು ಮೂಡಿಸಬೇಕು. ಗಣರಾಜ್ಯವಾದ ನಂತರ ಭಾರತ ನಿರ್ಮಾಣವಾಗಲು ಕಾರಣವಾದ ಸಂವಿಧಾನದ ಬಗ್ಗೆ ಎಲ್ಲರನ್ನೂ ಹೆಮ್ಮೆ, ಗೌರವ, ಪ್ರೀತಿ ಇರಬೇಕು, ಸಂವಿಧಾನವನ್ನು ಪೂರ್ತಿ ತಿಳಿಯಲು ಸಾಧ್ಯವಾಗದಿದ್ದರೂ ಗರಿಷ್ಟ ಪ್ರಮಾಣದ ತಿಳುವಳಿಕೆ ಎಲ್ಲರಿಗೂ ಅಗತ್ಯ. ಭಾರತದ ಸಂವಿಧಾನ ಓದಿದವರ ಸಂಖ್ಯೆ ಕಡಿಮೆ ಇದೆ. ಓದಿದವರು ಅದನ್ನು ಸರಿಯಾಗಿ ಅರ್ಥಮಾಡಿಕೊಂಡಿಲ್ಲ ಎಂದರು.
ಓದಿದವರು ಸಂವಿಧಾನದ ಮಹತ್ವದ ಬಗ್ಗೆ ಧ್ವನಿ ಎತ್ತುತಿಲ್ಲ. ಸರಕಾರಗಳು ಸಹ ಸಂವಿಧಾನದ ತಿಳಿವಳಿಕೆ ನೀಡುವ ಕೆಲಸ ಮಾಡುತ್ತಿಲ್ಲ. ಅತಿ ದೊಡ್ಡ ಲಿಖಿತ ಸಂವಿಧಾನ ಹೊಂದಿರುವ ಭಾರತದಲ್ಲಿ ಸಂವಿಧಾನದ ಅಡಿಯಲ್ಲಿ ಬಹಳಷ್ಟು ಸಾಧನೆಗಳಾಗಿವೆ ಎಂದರು.
ನಮ್ಮ ದಿನನಿತ್ಯದ ಹತ್ತಾರು ಚಟುವಟಿಕೆಗಳು ಕಾನೂನಿನ ಚೌಕಟ್ಟಿನೊಳಗೆ ನಡೆಯುತ್ತವೆ. ಆ ಎಲ್ಲ ಕಾನೂನುಗಳಿಗೆ ಸಂವಿಧಾನ ತಾಯಿ ಇದ್ದಂತೆ. ಸಂವಿಧಾನ ಸರಿಯಾಗಿ ಅರ್ಥಮಾಡಿಕೊಂಡರೆ, ಭಾರತದ ಕಾನೂನು ವ್ಯವಸ್ಥೆ ಸರಿಯಾಗಿ ಅರ್ಥವಾಗುತ್ತದೆ. ನಿಜವಾದ ಭಾರತದ ಅರ್ಥವಾದರೆ ಸಂವಿಧಾನದ ಸರಿಯಾಗಿ ಅರ್ಥವಾಗುತ್ತದೆ ಎಂದರು.
ವಿಧ್ಯಾರ್ಥಿಗಳು ತಮ್ಮ ಮುಂದಿನ ಶಿಕ್ಷಣವನ್ನು ಅಯ್ಕೆ ಮಾಡುವಾಗ ಹೆತ್ತವರ, ಪೊ?ಷಕರ ಅಭಿಪ್ರಾಯದಂತೆ ಆಯ್ಕೆ ಮಾಡುವುದು ಸರಿ ಆದರೆ ತಮಗೆ ಆಸಕ್ತಿ ಇದ್ದ ಶಿಕ್ಷಣವನ್ನು ಕುಟುಂಬಸ್ಥರೊಂದಿಗೆ ಚರ್ಚೆ ಮಾಡಿ ಆಯ್ಕೆ ಮಾಡಬೇಕು. ಕೇವಲ ಪಠ್ಯ ಪುಸ್ತಕಗಳನ್ನು ಓದುವುದು ಮಾತ್ರವಲ್ಲದೆ ದಿನಪತ್ರಿಕೆಗಳನ್ನು ದೃಶ್ಯ ಮಾಧ್ಯಮದ ಮೂಲಕ ಜ್ಞಾನವನ್ನು ವೃದ್ದಿಸಿಕೊಳ್ಳಬೇಕು.
ಸ್ಪರ್ದಾತ್ಮಕ ಪರೀಕ್ಷೆಗಳನ್ನು ಬರೆಯುವ ಮೂಲಕ ಮುಂದಿನ ೫ ವರುಷಗಳಲ್ಲಿ ತಮ್ಮ ಜೀವನದ ಸದೃಡ ಭವಿಷ್ಯವನ್ನು ರೂಪಿಸಬಹುದು ಎಂದು ಹೇಳಿದರು. ಸುಮಾರು ೧ ಗಂಟೆಗಳ ಕಾಲ ವಿದ್ಯಾರ್ಥಿಗಳೊಂದಿಗೆ ಸಂವಾದದಲ್ಲಿ ಪಾಲ್ಗೊಂಡಿದ್ದರು. ಮಕ್ಕಳು ತಮ್ಮ ಸಮಸ್ಯೆಗಳನ್ನು ಮಾಜಿ ಸಭಾಪತಿಗಳಿಗೆ ತಿಳಿಸಿದರು.
ಈ ಸಂದರ್ಭದಲ್ಲಿ ಉಪ ಪ್ರಾಂಶುಪಾಲ ಸಿ.ಎನ್.ಪ್ರದೀಪ್ ಕುಮಾರ್, ಎಸ್.ಡಿ.ಎಮ್.ಸಿ ಅಧ್ಯಕ್ಷ ಮಂಜುನಾಥ್, ಶಿಕ್ಷಕರಾದ ಸಿ.ಎಂ.ನಾರಾಯಣಸ್ವಾಮಿ, ಮುನಿರಾಜು, ಬ್ಯಾನರ್ಜಿ, ಭಾಗ್ಯಲಕ್ಷಿ, ಜಯಂತಿ, ಸುಮಂಗಲ, ಕೋಮಲ, ಸುಮ, ಮೋಹನ್ ಮತ್ತಿತರರಿದ್ದರು.