ಜ್ಞಾನ ಸಂಪತ್ತು ಬಹು ದೊಡ್ಡ ಆಸ್ತಿ: ಪ್ರೊ.ಸಿದ್ದು

ಸೈದಾಪುರ:ಆ.3:ಭೌತಿಕ ಸಂಪತ್ತಿಗಿಂತ ವಿದ್ಯಾ ಸಂಪತ್ತು ಬಹು ದೊಡ್ಡ ಆಸ್ತಿ. ವಿದ್ಯಾ ಸಂಪಾದನೆಗೆ ಹೆಚ್ಚಿನ ಮಹತ್ವವನ್ನು ಕೊಡಬೇಕು ಎಂದು ನಾಡಿನ ಹೆಸರಾಂತ ಚಿಂತಕ ಮತ್ತು ಬರಹಗಾರ ಪ್ರೊ.ಸಿದ್ದು ಯಾಪಲಪರವಿ ಅಭಿಪ್ರಾಯಪಟ್ಟರು.
ಪಟ್ಟಣದ ವಿದ್ಯಾ ವರ್ಧಕ ಸಂಘದ ಆವರಣದಲ್ಲಿ ವಿಕಾಸ ಅಕಾಡಮಿ ವತಿಯಿಂದ ಕನ್ನಡ ಸಾಹಿತ್ಯ ಪರಿಷತ್ತು ಯಾದಗಿರಿ ಸಹಯೋಗದೊಂದಿಗೆ ಹಮ್ಮಿಕೊಂಡಿ ಯುವ ಜಾಗೃತಿ ಯಾತ್ರೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ನಮ್ಮ ಕಲ್ಯಾಣ ಕರ್ನಾಟಕÀ ಗ್ರಾಮೀಣ ಭಾಗದ ವಿದ್ಯಾರ್ಥಿಗಳಲ್ಲಿ ವಿಶೇಷವಾದ ಪ್ರತಿಭೆ, ಜ್ಞಾನವಿದೆ. ಅದನ್ನು ಉತ್ತಮವಾದ ಬರಹ, ಆಕರ್ಷಕವಾದ ಮಾತಿನ ಮೂಲಕ ಶಿಕ್ಷಣ ಕ್ಷೇತ್ರದಲ್ಲಿ ಸಾಧನೆಯನ್ನು ಮಾಡಬೇಕು. ಇಂದಿನ ಯುವ ಸಮುದಾಯ ಆಧುನಿಕ ತಂತ್ರಜ್ಞಾನಕ್ಕೆ ದಾಸರಾಗುವ ಮೂಲಕ ಅನೇಕ ದುಶ್ಚಟಗಳಿಗೆ ಬಲಿಯಾಗುತ್ತಿರುವುದು ಅತ್ಯಂತ ನೋವಿನ ಸಂಗತಿ. ವಿದ್ಯಾರ್ಥಿಗಳು ತಂತ್ರಜ್ಞಾನವನ್ನು ಕಡಿಮೆ ಬಳಸಿ, ಹೆಚ್ಚಿನ ಸಮಯವನ್ನು ಪುಸ್ತಕಗಳ ಓದಿಗೆ ನೀಡಿ. ಇದರಿಂದ ನಿಮ್ಮ ಭವಿಷ್ಯ ಉತ್ತಮವಾಗಿ ನಿರ್ಮಾಣವಾಗುತ್ತೆ. ಬುದ್ಧ, ಬಸವ, ಅಂಬೇಡ್ಕರ ರವರ ಇತಿಹಾಸ ಪುರಷರನ್ನು ಆದರ್ಶವಾಗಿಟ್ಟುಕೊಂಡು ನಿಮ್ಮ ಇತಿಹಾಸವನ್ನು ನೀವು ನಿರ್ಮಿಸಿಕೊಳ್ಳಿ ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ವಿದ್ಯಾ ವರ್ಧಕ ಸಂಘದ ಅಧ್ಯಕ್ಷ ಸಣ್ಣ ಸಿದ್ರಾಮಪ್ಪಗೌಡ ಬೆಳಗುಂದಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ವಿಕಾಸ ಅಕಾಡೆಮಿ ತಾಲೂಕ ಸಂಚಾಲಕ ಭೀಮಣ್ಣ ಬಿ ವಡವಟ್ ಪ್ರಾಸ್ತವಿಕವಾಗಿ ಮಾತನಾಡಿದರು. ಕಸಾಪ ಜಿಲ್ಲಾಧ್ಯಕ್ಷ ಸಿದ್ದಪ್ಪ ಹೊಟ್ಟಿ, ವಿಕಾಸ ಅಕಾಡೆಮಿಯ ಹಿರಿಯ ಸಂಚಾಲಕ ಭೀಮಣ್ಣಗೌಡ ಪಾಟೀಲ ಕ್ಯಾತ್ನಾಳ್, ಗುರುಮಠಕಲ್ ಕಸಾಪ ತಾಲೂಕಾಧ್ಯಕ್ಷ ಬಸರೆಡ್ಡಿ, ಸೈದಾಪುರ ಕಸಾಪ ವಲಯಾಧ್ಯಕ್ಷ ಮಹಿಪಾಲರೆಡ್ಡಿ ದುಪ್ಪಲ್ಲಿ, ವಿಕಾಸ ಅಕಾಡೆಮಿಯ ಸಂಚಾಲಕರಾದ ಮುಕುಂದಕುಮಾರ ಅಲಿಝಾರ್, ಶೃತಿ ಕಂದಕೂರ, ಮುಖ್ಯಗುರು ಲಿಂಗರೆಡ್ಡಿ ನಾಯಕ್, ಪ್ರಾಂಶಪಾಲ ಜಿಎಮ್ ಗುರುಪ್ರಸಾದ, ಕರಬಸಯ್ಯ ದಂಡಿಗಿಮಠ ಸೇರಿದಂತೆ ಇತರರಿದ್ದರು. ಚಂದ್ರಶೇಖರ ಡೊಣ್ಣೆಗೌಡ ಸ್ವಾಗತಿಸಿದರು. ಸಂಗಾರೆಡ್ಡಿ ನಿರೂಪಿಸಿದರು. ಕಾಶೀನಾಥ ಶೇಖಸಿಂದಿ ವಂದಿಸಿದರು.