ಜ್ಞಾನ ಮತ್ತು ಸುಜ್ಞಾನ ಕಲಿಕೆಗೆ ಗಮನ ನೀಡುತ್ತಿಲ್ಲ

ಸಂಜೆವಾಣಿ ವಾರ್ತೆ
ಕೆ.ಆರ್.ಪೇಟೆ.ಫೆ.04: ತಂತ್ರಜ್ಞಾನ ಮತ್ತು ವಿಜ್ಞಾನವನ್ನು ಕಲಿಸುವ ನಿಟ್ಟಿನಲ್ಲಿ ನಾವು ಜ್ಞಾನ ಮತ್ತು ಸುಜ್ಞಾನ ಕಲಿಕೆಗೆ ಗಮನ ನೀಡುತ್ತಿಲ್ಲ ಎಂದು ವ್ಯಕ್ತಿತ್ವ ವಿಕಸನ ತರಬೇತುದಾರ ಚೇತನ್ ರಾಮ್ ಹೇಳಿದರು.
ಅವರು ಪಟ್ಟಣದ ಸಾಹುಕಾರ್ ಚಿಕ್ಕಣ್ಣಗೌಡ ಸಮುದಾಯ ಭವನದಲ್ಲಿ ತಾಲ್ಲೂಕು ಪದವಿಪೂರ್ವ ಕಾಲೇಜು ಉಪನ್ಯಾಸಕರ ಸಂಘ ಆಯೋಜಿಸಿದ್ದ ಶೈಕ್ಷಣಿಕ ಸಮಾವೇಶ, ಪ್ರತಿಭಾ ಪುರಸ್ಕಾರ. ವಯೋನಿವೃತ್ತಿ ಹೊಂದಿದವರಿಗೆ ಬೀಳ್ಕೊಡುಗೆ ಮತ್ತು ಶೇ100 ರಷ್ಟು ಫಲಿತಾಂಶ ಪಡೆದ ಉಪನ್ಯಾಸಕರಿಗೆ ಸನ್ಮಾನ ಸಮಾರಂಭದಲ್ಲಿ ಭಾಗವಹಿಸಿ ಪ್ರದಾನ ಉಪನ್ಯಾಸ ನೀಡಿದರು.
ಜ್ಞಾನ ಮತ್ತು ಸುಜ್ಞಾನದ ನಡುವಿನ ಸಂಬಂಧವನ್ನು ಹಲವು ಕಥೆ ಮತ್ತು ಉಪಮೇಯಗಳ ಮೂಲಕ ಪ್ರಸ್ತಾಪಿಸಿದ ಚೇತನ್ ರಾಮ್ ಕಾಲೇಜು ವಿದ್ಯಾರ್ಥಿಗಳಲ್ಲಿ ನೈತಿಕ ಪ್ರಜ್ಞೆ ಮಾನವೀಯ ಗುಣಗಳು ಕುಸಿತವಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು. ಅಂಕಗಳಿಕೆಯ ಮಾನದಂಡದ ಅಡಿಯಲ್ಲಿ ವ್ಯಕ್ತಿತ್ವ ವಿಕಸನಕ್ಕೆ ಆದ್ಯತೆ ನೀಡದಿದ್ದರೆ ಉತ್ತಮ ಪ್ರಜೆಗಳನ್ನು ಸೃಷ್ಟಿಸಲು ಸಾಧ್ಯವಿಲ್ಲ ಎಂದರು.
ಹಿಂದೆ ಕಲಿತವರ ಸಂಖ್ಯೆ ಕಡಿಮೆ ಇದ್ದಿತಾದರೂ ಅವರಲ್ಲಿದ್ದ ಕಲಿಕೆಯ ಗುಣಮಟ್ಟ, ಸುಜ್ಞಾನ ಮತ್ತು ಮಾನವೀಯ ಗುಣಗಳನ್ನು ಇಂದು ಕಲಿತವರು ಹೆಚ್ಚಿದ್ದರೂ ಕಾಣುತ್ತಿಲ್ಲ. ಆದ್ದರಿಂದ ಉಪನ್ಯಾಸಕರು ತಮ್ಮ ಬೋಧನೆ ಸಮಯದಲ್ಲಿ ಕೊನೆಯ 10 ನಿಮಿಷಗಳ ಕಾಲ ನೈತಿಕತೆ ಬೆಳೆಸುವ ಬೋಧನೆ ಮಾಡಿ, ಪುರಾಣ ಕತೆ ಹೇಳಿಕೊಡಿ ಎಂದು ಮನವಿ ಮಾಡಿದರು.
ಅಧ್ಯಕ್ಷತೆ ವಹಿಸಿದ್ದ ಶಾಸಕ ಎಚ್.ಟಿ.ಮಂಜು ಮಾತನಾಡಿ ತಾಲ್ಲೂಕಿನಲ್ಲಿ ಇರುವ ಸರ್ಕಾರಿ ಪಿಯು ಕಾಲೇಜಿನ ಸಮಸ್ಯೆಗಳ ನಿವಾರಣೆಗೆ ಪ್ರಾಮಾಣಿಕ ಪ್ರಯತ್ನ ನಡೆಸುತ್ತೇನೆ. ಉಪನ್ಯಾಸಕರ ಸಮಸ್ಯೆ ನಿವಾರಣೆಗಾಗಿ ಸದನದಲ್ಲಿ ಪ್ರಸ್ತಾಪ ಮಾಡುವುದಲ್ಲದೆ ತಾಲ್ಲುಕಿನ ಪಿಯು ಕಾಲೇಜುಗಳಿಗೆ ಅಗತ್ಯ ಸೌಲಭ್ಯ ಒದಗಿಸುವ ಭರವಸೆ ನೀಡಿದರು. ಸಮಾವೇಶದಲ್ಲಿ ವಿಧಾನ ಪರಿಷತ್ ಸದಸ್ಯ ಮರಿತಿಬ್ಬೇಗೌಡ,
ವಿಧಾನ ಪರಿಷತ್ ಮಾಜಿ ಸದಸ್ಯ ಕೆ.ಟಿ.ಶ್ರೀಕಂಠೇಗೌಡ,
ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಚೆಲುವಯ್ಯ, ರಾಜ್ಯ ಆರ್.ಟಿ.ಓ ಸಂಘದ ರಾಜ್ಯಾಧ್ಯಕ್ಷ ಮಲ್ಲಿಕಾರ್ಜುನ್ ಮನ್ ಮುಲ್ ನಿರ್ದೇಶಕ ಡಾಲು ರವಿ, ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ಎಸ್.ಸೀತಾರಾಮು ಸೇರಿದಂತೆ ಹಲವರಿದ್ದರು.