ಜ್ಞಾನ ದೀಕ್ಷೆ ಭೀಮ್ ದೀಕ್ಷೆ ವಿಶೇಷ ಕಾರ್ಯಕ್ರಮ


ಮರಿಯಮ್ಮನಹಳ್ಳಿ ಏ 16 : ಮಹಾ ಮಾನವತಾವಾದಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಜನ್ಮದಿನದಂಗವಾಗಿ ಪಟ್ಟಣದ ಸ್ವೆರೋಸ್ ಕಲಿಕಾ ಕೇಂದ್ರದಲ್ಲಿ ಮಾರ್ಚ 15 ರಿಂದ ಏಪ್ರಿಲ್ 14ರವರೆಗೆ ಜ್ಞಾನದೀಕ್ಷೆ- ಭೀಮ್ ದೀಕ್ಷೆ ಹೆಸರಿನಲ್ಲಿ ವಿಶೇಷ ಕಾರ್ಯಕ್ರಮ ಆಯೋಜಿಸಲಾಗಿದೆ.
ಕಾರ್ಯಕ್ರಮದಲ್ಲಿ ಕಲಿಕಾ ಕೇಂದ್ರದ ಸಂಯೋಜಕಿ ಮಾಳಗಿ ಮಂಜುಳಾ ಕಲಿಕೆಯಲ್ಲಿ ಹಿಂದುಳಿದ ಮಕ್ಕಳಿಗೆ ನಿತ್ಯವೂ ಉಚಿತವಾಗಿ ಶಿಕ್ಷಣದ ಜೊತೆಜೊತೆಗೆ ಆತ್ಮಸ್ಥೈರ್ಯವನ್ನೂ ತುಂಬುವ ಕಾರ್ಯವನ್ನು ಮಾಡುತ್ತಿರುವುದು ವಿಶೇಷ.
ಡಾ.ಬಿ.ಆರ್ ಅಂಬೇಡ್ಕರ್ ಜನ್ಮದಿನಾಚರಣೆಯ ಅಂಗವಾಗಿ ಒಂದು ತಿಂಗಳಕಾಲ ಜ್ಞಾನದೀಕ್ಷೆ-ಭೀಮ್ ದೀಕ್ಷೆ ಕಾರ್ಯಕ್ರಮದಡಿಯಲ್ಲಿ ಕಲಿಕಾ ಕೇಂದ್ರದ ಮಕ್ಕಳಿಗೆ ಪ್ರತಿದಿನ ಒಂದು ಗಂಟೆ ಸಮುದಾಯದ ಅಭಿವೃದ್ಧಿಗೆ ದುಡಿದ ಮಹನೀಯರ ಪುಸ್ತಕಗಳನ್ನು ಓದುವುದು, ಬೆಳಗಿನ ಜಾವ 5 ಗಂಟೆಗೆ ವ್ಯಾಯಾಮ, ಮದ್ಯಪಾನ, ಧೂಮಪಾನದದಂತಹ ದುಶ್ಚಟಗಳಿಗೆ ದಾಸರಾಗದಂತೆಯೂ, ಆರೋಗ್ಯಕ್ಕೆ ಹಾನಿಕಾರಕವಾಗಬಹುದಾದ ದುಶ್ಚಟಗಳಿಂದ ದೂರವಿರುವಂತೆ ಪ್ರೇರೇಪಿಸುವುದು, ಮಕ್ಕಳಲ್ಲಿ ಆತ್ಮವಿಶ್ವಾಸ ತುಂಬುವ ಹಾಗೂ ಮಕ್ಕಳ ಕನಸುಗಳನ್ನು ವಿಸ್ತರಿಸಿಕೊಳ್ಳಲು ಪೂರಕವಾದ ವಾತಾವರಣ ನಿರ್ಮಿಸುವುದು, ಇಂಗ್ಲೀಷ್ ಭಾಷೆಯನ್ನು ಸರಳವಾಗಿ ಕಲಿಸುವುದು, ಮಕ್ಕಳ ಶಿಕ್ಷಣಕ್ಕೆ ಒತ್ತು ನೀಡುವಂತೆ ಪೋಷಕರಿಗೆ ಜಾಗೃತಿ ಮೂಡಿಸುವುದು, ಸಮುದಾಯಗಳು ವಾಸಿಸುವ ತಾಣಗಳಿಗೆ ಹೋಗಿ ಅವರಿಗೆ ಶಿಕ್ಷಣ, ಆರೋಗ್ಯ, ಆರ್ಥಿಕತೆ ಕುರಿತು ಜಾಗೃತಿ ಮೂಡಿಸುವಂತಹ ಚಟುವಟಿಕೆಗಳು ಕಲಿಕಾ ಕೇಂದ್ರದಲ್ಲಿ ಮಕ್ಕಳ ಕಲಿಕೆಯನ್ನು ವಿಸ್ತರಿಸುವ ಕಾರ್ಯವನ್ನು ಮಾಡುವಂತಿವೆ.
ಪ್ರಸ್ತುತ ದಿನಮಾನಗಳಲ್ಲಿ ಮಕ್ಕಳು ಕಲಿಕೆಯಲ್ಲಿ ತೊಡಗಬೇಕು ಮತ್ತು ಶಿಕ್ಷಣಕ್ಕೆ ಆದ್ಯತೆ ಕೊಟ್ಟು ಅವರ ಗಮನ ಸೆಳೆಯುವ ದೃಷ್ಟಿಯಿಂದ ಈ ಕಾರ್ಯಕ್ರಮ ಮಾಡಿದ್ದು, ಬುದ್ಧ, ಅಶೋಕ, ಸಾವಿತ್ರಿ ಬಾ ಫುಲೆ, ಜ್ಯೋತಿ ಬಾ ಫುಲೆ, ಅಂಬೇಡ್ಕರ್, ಬಸವಣ್ಣ, ಅಕ್ಕಮಹಾದೇವಿ ಅವರ ಬಗ್ಗೆ ತಿಳಿಸಲಾಗುತ್ತಿದೆ. ಅಲ್ಲದೇ ಮುಖ್ಯವಾಗಿ ಅವರ ಪಠ್ಯ ವಿಷಯಗಳ ಕಡೆಗೂ ಗಮನ ಹರಿಸಿ, ಓದು ಬರಹ ಮರೆಯಬಾರ್ದು ಅಂತ ಪ್ರತಿ ದಿನ ಬೆಳಿಗ್ಗೆ ಸಂಜೆ ಎರಡು ಮೂರು ತಾಸು ಹೇಳಿ ಕೊಟ್ಟಿದ್ದೇವೆ. ಹಾಗೂ ಇಂಗ್ಲೀಷ್ ಭಾಷೆ ಕಲಿಕೆಗೊ ಒತ್ತು ಕೊಟ್ಟಿದ್ದೇವೆ ಎನುತ್ತಾರೆ ಕಲಿಕಾ ಕೇಂದ್ರದ ಸಂಯೋಜಕಿ ಮಾಳಗಿ ಮಂಜುಳಾ.
ಇಲ್ಲಿನ ಎಲ್ಲಾ ಕುಟುಂಬಗಳು ಬಡತನದಲ್ಲಿವೆ. ಕೂಲಿ ಕಾರ್ಮಿಕರ ಕುಟುಂಬಗಳಿವೆ. ಮನೆಯಲ್ಲಿ ಮಕ್ಕಳಿಗೆ ಕಲಿಕೆಗೆ ಪೂರಕವಾದ ವಾತಾವರಣವಿರುವುದಿಲ್ಲ. ಹಾಗಾಗಿ ನಮ್ಮ ಕೇರಿಯ ಮಕ್ಕಳಿಗೆ ಈ ಕಲಿಕಾ ಕೇಂದ್ರ ವರದಾನವಾಗಿದೆ. ಕೇರಿಯ ಒಟ್ಟು ಮಕ್ಕಳ ಪೈಕಿ ಶೇ.20 ರಷ್ಟು ಮಕ್ಕಳು ಈ ಕಲಿಕಾ ಕೇಂದ್ರಕ್ಕೆ ಬರುತ್ತಿದ್ದು, ಹೆಚ್ಚಿನ ಮಕ್ಕಳೂ ಈ ಕಲಿಕಾ ಕೇಂದ್ರದಲ್ಲಿ ಭಾಗವಹಿಸಿದರೆ ಮಕ್ಕಳ ಕಲಿಕೆಯಲ್ಲಿಯೂ ಪ್ರಗತಿ ಕಾಣಲು ಸಾಧ್ಯ ಎನ್ನುತ್ತಾರೆ ಬಿಸರಳ್ಳಿ ಹುಲುಗಪ್ಪ ಮತ್ತು ಸಣ್ಣ ದುರುಗಪ್ಪ.