ಜ್ಞಾನ ದಾಸೋಹದ ಸಾಕಾರಮೂರ್ತಿ ಶಿವಕುಮಾರ ಶ್ರೀಗಳು

ತುಮಕೂರು, ಏ. ೧- ಗುರು ಬದುಕಿನ ದಾರಿ ದೀಪ, ಜ್ಞಾನದ ಬೆಳಕಿನಿಂದ ನಮ್ಮ ಅಜ್ಞಾನವನ್ನು ತೊಳೆದು ಬದುಕಿನ ದರ್ಶನಕ್ಕೆ ವಿವಿಧ ಆಯಾಮಗಳನ್ನು ಒದಗಿಸುವವನು ಗುರು. ಭೂಮಿಗೆ ಆಗಮನದಿಂದ ೨೧ನೇ ಶತಮಾನದವರೆಗೂ ನಮ್ಮ ಪ್ರತಿಯೊಂದು ಕಲಿಕೆ, ಬೆಳವಣಿಗೆ ಹಾಗೂ ಭವಿಷ್ಯದ ದಾರಿಗಳಿಗೂ ಗುರುವೇ ಕಾರಣ. ಪಾಂಡಿತ್ಯ, ವಾತ್ಸಲ್ಯ, ಕರುಣೆ ಸ್ವರೂಪವಿರುವ ಗುರುವಿನಿಂದ ನಾವು ಕಲಿತಷ್ಟೂ ಮಿಗುವ ಅಗಾಧ ಜ್ಞಾನವಿದೆ. ಇಂತಹ ಗುರುವಿನ ರೂಪದಲ್ಲಿ ನಮ್ಮೊಡನೆ ಇದ್ದವರು ಮನುಕುಲವನ್ನು ತ್ರಿವಿಧ ದಾಸೋಹದ ಮೂಲಕ ಬೆಳಗಿದ ಕಲ್ಪತರು ನಾಡಿನ ಕಾಮಧೇನು, ಜ್ಞಾನದೀಪವಾಗಿ ಕರ್ನಾಟಕ ರತ್ನವಾಗಿ ಬೆಳಗಿದ ಮಹಾಶಕ್ತಿ, ಪದ್ಮವಿಭೂಷಣರಾಗಿ, ಹೆಜ್ಜೆಯಿಟ್ಟ ಪ್ರತಿ ಜಾಗವನ್ನೂ ಪಾವನ ಮಾಡಿದ ಪುಣ್ಯಮೂರ್ತಿ, ನಡೆದಾಡಿದ ದೇವರು ಡಾ. ಶ್ರೀ ಶಿವಕುಮಾರ ಮಹಾಶಿವಯೋಗಿಗಳು.
ಶ್ರೀಗಳ ಜನ್ಮೋತ್ಸವಕ್ಕೆ ೧೧೬ ವರ್ಷಗಳು ಸಂದ ಕಾರಣಕ್ಕಾಗಿ ನಾವು ಅವರ ದಾರಿಗಳನ್ನು ಮೆಲುಕು ಹಾಕಿ ಗುರುವಿನ ತೇಜಸ್ಸನ್ನು ನಮ್ಮ ಬದುಕಿಗೆ ಮತ್ತಷ್ಟು ಅರ್ಪಿಸಿಕೊಳ್ಳಬೇಕಿದೆ.
ಪೂಜ್ಯರ ಜೀವನ ಸಂದೇಶಗಳನ್ನು ನಾವು ಅನುಸರಿಸಿ ಸದ್ಗತಿಯೆಡೆಗೆ ಸತ್ಯಜೀವನಕ್ಕೆ ಅಡಿಯಿಡಬೇಕಿದೆ. ಅವರ ಜೀವನ ತತ್ವಗಳಲ್ಲಿ ನಾನು ಕಂಡಷ್ಟು ಹೇಳುವ ಪ್ರಯತ್ನ ಮಾಡುತ್ತೇನೆ.
ಪೂಜ್ಯರ ಜೀವನ ಸಂದೇಶಗಳಲ್ಲಿ ಪ್ರಮುಖವಾದದ್ದು ದಾಸೋಹ. ಅವರು ಜೀವನವಿಡೀ ದಾಸೋಹ ಪ್ರಜ್ಞೆಯ ಪ್ರತೀಕವಾಗಿದ್ದರು. ರೈತ ಬೆಳೆದ ಅಕ್ಕಿಕಾಳನ್ನು ಭಿಕ್ಷೆಯ ಮೂಲಕ ಸ್ವೀಕರಿಸಿ, ಅದಕ್ಕೆ ಶಿವಭಕ್ತಿಯನ್ನು ಬೆರೆಸಿ ಪ್ರಸಾದವನ್ನಾಗಿಸಿ ಹಸಿದ ಹೊಟ್ಟೆಗಳಿಗೆ ಪ್ರೀತಿಯಿಂದ ಬಡಿಸುವುದು ಅವರ ತತ್ವವಾಗಿತ್ತು.
ಬೆಳೆದ ಕೈಗಳಿಂದ ಹಸಿದ ಹೊಟ್ಟೆಗೆ ಬಡಿಸುವ ಸೇತುವೆಯಾಗಿ ಸದಾ ದಾಸೋಹ ಶಕ್ತಿಯಿಂದ ಪ್ರಜ್ವಲಿಸಿದರು. ಬರಗಾಲವಿರಲಿ, ಅತಿವೃಷ್ಟಿ ಅಥವಾ ಅನಾವೃಷ್ಟಿಗಳೇನೇ ಇರಲಿ ಸಿದ್ಧಗಂಗಾ ಮಠದ ದಾಸೋಹದ ಅಗ್ನಿ ಯಾವತ್ತೂ ಹಾರಲಿಲ್ಲ, ಹಾರುವುದೂ ಇಲ್ಲ.
ಪೂಜ್ಯರು ಮಠದ ಆರ್ಥಿಕತೆಗಿಂತ ಅಡುಗೆ ಉಗ್ರಾಣದಲ್ಲಿರುವ ಅಕ್ಕಿ ಬೇಳೆಗಳ ಕಡೆಗೆ ಸದಾ ಗಮನ. ಏಕೆಂದರೆ, ಹಸಿದ ಹೊಟ್ಟೆಗೆ ಶಿವ ಭಕ್ತಿ ತಲುಪದು ಎಂಬುದು ಅವರ ನಿಲುವಾಗಿತ್ತು. ಹಾಗಾಗಿ ನಾವು ಅವರ ದಾಸೋಹ ಪ್ರಜ್ಞೆಯನ್ನು ಅನುಸರಿಸಬೇಕು. ನಮ್ಮ ಜೀವನದಲ್ಲಿ ಹಸಿದ ಹೊಟ್ಟೆಗಳಿಗೆ ಉಣಬಡಿಸಿ ಪುಣ್ಯದ ಪಾಲು ಪಡೆಯಬೇಕು.
ಜೀವನದ ಯಾವುದೇ ಹಂತದಲ್ಲಿಯೂ ಪೂಜ್ಯರು ತಮ್ಮ ಶ್ರದ್ಧೆಯನ್ನು ಬಿಟ್ಟವರಲ್ಲ. ಯಾವುದೇ ಕೆಲಸವಿರಲಿ ಅತೀವ ಶ್ರದ್ಧೆಯಿಂದ ನಿರ್ವಹಿಸುತ್ತಿದ್ದರು. ಸ್ವಚ್ಛ ದೇಹ ಶುದ್ಧ ಮನಸಿನ ರೂಪಕವಾಗಿರುತ್ತದೆ ಎಂದು ನಂಬಿದವರು. ಪೂಜಾನುಷ್ಠಾನಗಳಲ್ಲಿ, ಪ್ರಯಾಣ, ಆಹಾರ, ಆಶೀರ್ವಾದಗಳಲ್ಲಿ ಪೂಜ್ಯರ ಶ್ರದ್ಧೆಯೊಂದೇ ನಮಗೆ ಸದಾ ನೆನಪಾಗುತ್ತದೆ. ಒಂದು ಸಣ್ಣ ಕೆಲಸವನ್ನೂ ಕೂಡ ಬಿಡದಂತೆ ಪರಿಪೂರ್ಣಗೊಳಿಸುವ ಅವರ ಶ್ರದ್ಧೆಯ ಕಾರಣಕ್ಕಾಗಿಯೇ ಸಿದ್ಧಗಂಗಾ ಮಠ ಸಹಸ್ತ್ರ ಸಹಸ್ತ್ರ ಭಕ್ತರ ಬೀಡಾಗಿದ್ದು, ಅನಾಥ ಮಕ್ಕಳಿಗೆ ಅಕ್ಷರ ದಾಸೋಹದ ಗೂಡಾಗಿದೆ.
ಭಕ್ತಿಯೇ ಶ್ರದ್ಧೆಯ ಮೂಲ ಎಂಬುದು ಚಿಂತನೆ. ತಾವು ಎಲ್ಲೇ ಇರಲಿ ಯಾವುದೇ ಸನ್ನಿವೇಶದಲ್ಲಿರಲಿ ಅವರ ಪೂಜಾನುಷ್ಠಾನ ಕ್ಷಣವೂ ವ್ಯತ್ಯಾಸವಾಗುತ್ತಿರಲಿಲ್ಲ. ಶಿವಪೂಜೆಯ ಹೊರತು ಪಡಿಸಿ ಅವರಿಗೆ ಇನ್ಯಾವುದೇ ಜೀವನದ್ರವ್ಯವಿರಲಿಲ್ಲ. ಶಿವನ ಮುಂದೆ ತ್ರಿಕಾಲದಲ್ಲಿಯೂ ಸ್ಥಾಪಿತವಾಗುವ ನಂದಿಯಷ್ಟೇ ನಿಷ್ಠೆ ಪೂಜ್ಯರ ಪೂಜಾಚರಣೆಯಾಗಿತ್ತು. ಅವರು ಲಿಂಗೈಕ್ಯರಾಗುವ ಕೊನೆಯ ದಿನಗಳಲ್ಲಿ ಐಸಿಯುವಿನಲ್ಲೂ ಚಿಕಿತ್ಸೆ ಪಡೆಯುತ್ತಿದ್ದರೂ ಅವರು ಶಿವಪೂಜೆಯಲ್ಲಿ ತೊಡಗಿದ್ದರು.
ಯಾವುದೇ ಕೆಲಸವಾಗಿದ್ದರೂ ಅದರಲ್ಲಿ ಪೂಜ್ಯರದು ಒಂದು ಶಿಸ್ತು ಇತ್ತು. ಬೆಳಿಗ್ಗೆ ಏಳುವ ಸಮಯದಿಂದ ಹಿಡಿದು ರಾತ್ರಿ ನಿದ್ರೆಗೆ ಜಾರುವ ಸಮಯದ ವರೆಗೂ ಅವರ ಶಿಸ್ತು ಗಡಿಯಾರದಷ್ಟೇ ನಿಖರವಾಗಿತ್ತು. ಈ ಸಮಯಕ್ಕೆ ಹೊರಡಬೇಕು ಎಂದರೆ ಅದೇ ಸಮಯಕ್ಕೆ ಎಲ್ಲವೂ ಸಿದ್ಧವಿರಬೇಕಿತ್ತು. ಇಷ್ಟೇ ಸಮಯಕ್ಕೆ ಬರಬೇಕು ಎಂದರೆ ಬಂದಿರಬೇಕಿತ್ತು. ಅವರ ಶಿಸ್ತಿನ ಒಂದು ಪಾಲು ಕಲಿತರೂ ನಾವು ಸಾವಿರ ವರ್ಷಗಳಿಗೂ ಮಿಗುವ ಯಶಸ್ಸನ್ನು ಈ ಜನ್ಮದಲ್ಲೇ ಪಡೆಯುತ್ತೇವೆ ಎಂದರೆ ಅತಿಶಯೋಕ್ತಿಯಲ್ಲ.
ಮಕ್ಕಳಿಗೆ ವಿದ್ಯಾಭ್ಯಾಸ ಅವರ ನಡೆವ ದಾರಿಯಾಗಿದ್ದರೆ, ಗೋವುಗಳ ಪಾಲನೆ ಅವರ ನಿತ್ಯಕಾರ್ಯಗಳಲ್ಲಿ ಒಂದಾಗಿತ್ತು, ಭಕ್ತರಿಗೆ ನೀಡುವ ಮಾರ್ಗದರ್ಶನ ಅವರ ದಿನಚರಿಯಾಗಿದ್ದರೆ, ಶಿವಪೂಜೆ ಅವರ ಜೀವಶಕ್ತಿಯ ಕೇಂದ್ರವಾಗಿತ್ತು. ಅವರ ಕಾಲದಲ್ಲಿ ಜೀವಿಸಿದ್ದು, ಅವರ ಪಾದಸೇವೆ ಮಾಡಿದ್ದು, ಅವರ ಅಪ್ಯಾಯಮಾನವಾದ ಶಿಷ್ಯಪ್ರೇಮವನ್ನು ಅನುಭವಿಸಿದ್ದು ನಮ್ಮ ಪೂರ್ವಜನ್ಮದ ಪುಣ್ಯ, ನಡೆದಾಡಿದ ದೇವರು ಲಿಂಗೈಕ್ಯರಾಗಿ ನಮ್ಮೊಳಗೆ ಉದಯಿಸಿ ದಾಸೋಹ, ಶ್ರದ್ಧೆ, ಭಕ್ತಿ, ಶಿಸ್ತಿನ್ನು ನಮ್ಮೊಳಗೂ ಮೂಡಿಸಿ ಸದಾ ಜೀವಜ್ಯೋತಿಯಾಗಿದ್ದಾರೆ. ಅವರ ಜನ್ಮದಿನವಾದ ಇಂದು ಅವರ ತತ್ವಗಳ ದಾರಿಯಲ್ಲಿ ನಡೆದು ಬದುಕಿನಲ್ಲಿ ಯಶಸ್ಸನ್ನು ಪಡೆದುಕೊಳ್ಳೋಣ.

  • ಡಾ. ಎಸ್ ಪರಮೇಶ್
    ನಿರ್ದೇಶಕರು,
    ಸಿದ್ದಗಂಗಾ ಮೆಡಿಕಲ್ ಕಾಲೇಜು
    ತುಮಕೂರು