ಜ್ಞಾನಿಗಳಿಗೆ ಸಮಾಜದಲ್ಲಿ ಅತ್ಯುನ್ನತ ಗೌರವವಿದೆ : ತಹಶೀಲ್ದಾರ್ ಗಿರೀಶ್

ಸಂಜೆವಾಣಿ ವಾರ್ತೆ
ಶಿವಮೊಗ್ಗ, ಫೆ.೧೭;  ವಿದ್ಯೆಗೆ ಮೇಲು ಕೀಳು ಎಂಬ ಯಾವುದೇ ತಾರತಮ್ಯ, ಭಿನ್ನತೆಗಳಿಲ್ಲ. ವಿದ್ಯೆಯಿಂದ ಜ್ಞಾನ ಬೆಳೆಯುತ್ತದೆ. ಜ್ಞಾನಿಗಳಿಗೆ ಸಮಾಜದಲ್ಲಿ ಅತ್ಯುನ್ನತ ಗೌರವ ಲಭಿಸುತ್ತದೆ. ಆದ್ದರಿಂದ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಬೇಕೆಂದು ಶಿವಮೊಗ್ಗ ತಹಶೀಲ್ದಾರ್ ಗಿರೀಶ್ ನುಡಿದರು.ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರಪಾಲಿಕೆ, ಕನ್ನಡ ಮತ್ತು ಸಂಸ್ಕøತಿ ಇಲಾಖೆ, ಜಿಲ್ಲಾ ಸವಿತಾ ಸಮಾಜ ಶಿವಮೊಗ್ಗ ಇವರ ಸಂಯುಕ್ತಾಶ್ರಯದಲ್ಲಿ ಇಂದು ಕುವೆಂಪು ರಂಗಮಂದಿರದಲ್ಲಿ ಆಯೋಜಿಸಲಾಗಿದ್ದ ಶ್ರೀ ಸವಿತಾ ಮಹರ್ಷಿ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಸಮಾಜದಲ್ಲಿ ನಮ್ಮನ್ನು ನಾವು ಯಾವುದೇ ಸಮುದಾಯ, ಸಮಾಜದೊಂದಿಗೆ ಹೋಲಿಕೆ ಮಾಡಿಕೊಂಡು ಅವರು ಮೇಲು, ನಾವು ಕೀಳು ಎಂಬೆಲ್ಲ ಭಾವನೆಗಳಿಗೆ ಒಳಗಾಗಬಾರದು. ಇಲ್ಲಿ ಎಲ್ಲರೂ ಸಮಾನರು. ಆತ್ಮಸಾಕ್ಷಿಗೆ ಒಪ್ಪುವ ರೀತಿಯಲ್ಲಿ ನಾವೆಲ್ಲ ಬದುಕಬೇಕು. ಬಣ್ಣ, ರೂಪ, ಸೌಂದರ್ಯ, ಸ್ಥಾನಮಾನಕ್ಕಿಂತ ಜ್ಞಾನಕ್ಕೆ ಹೆಚ್ಚಿನ ಮಹತ್ವ ಇದೆ. ಆದ್ದರಿಂದ ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡಬೇಕು. ಜ್ಞಾನಿಗಳನ್ನು ಎಲ್ಲೆಡೆ ಪೂಜಿಸಲಾಗುತ್ತದೆ. ಆದ್ದರಿಂದ ಮಕ್ಕಳ ಶಿಕ್ಷಣಕ್ಕೆ ಒತ್ತು ನೀಡಬೇಕು. ಹೆಣ್ಣು ಮಕ್ಕಳನ್ನು ಬಲಿಷ್ಟರಾಗಿ ಬೆಳೆಸಬೇಕು.  ಶ್ರೀ ಸವಿತಾ ಮಹರ್ಷಿಯಂತಹ ಮಹಾನ್ ಪುರುಷರಲ್ಲಿ ದಿವ್ಯದೃಷ್ಟಿ, ಒಂದು ಧನಾತ್ಮಕ ಶಕ್ತಿ ಇರುತ್ತದೆ. ಇಂತಹ ವ್ಯಕ್ತಿಗಳ ತತ್ವ, ಆದರ್ಶಗಳನ್ನು ತಿಳಿದು ಕೆಲವನ್ನಾದರೂ ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದರು. ಭದ್ರಾವತಿ ಸರ್ ಎಂ.ವಿ.ಸರ್ಕಾರಿ ಕಲಾ ಮತ್ತು ವಾಣಿಜ್ಯ ಕಾಲೇಜಿನ ಸಹ ಪ್ರಾಧ್ಯಾಪಕಿಯಾದ ಪ್ರೊ.ಉಷಾದೇವಿ ಜಿ ಶ್ರೀ ಸವಿತಾ ಮಹರ್ಷಿ ಕುರಿತು ವಿಶೇಷ ಉಪನ್ಯಾಸ ನೀಡಿ ಮಾತನಾಡಿ, ಸವಿತಾ ಸಮಾಜದ ಶ್ರೀ ಸವಿತಾ ಮಹರ್ಷಿಗಳು ನಾಗರೀಕತೆಯ ನಾವಿಕರು, ಮಂಗಳಕಾರ್ಯಗಳ ಮುಂದಾಳುಗಳು. ನಮ್ಮ ಸನಾತನ ಹಿಂದೂ ಪರಂಪರೆಗೆ ಸುಮಾರು 5 ಸಾವಿರ ವರ್ಷಗಳ ಇತಿಹಾಸವಿದೆ. ಹಲವಾರು ಋಷಿ ಮುನಿಗಳು ನಮ್ಮ ಸಮಾಜಕ್ಕೆ, ಪರಂಪರಗೆ ಅಪಾರ ಕೊಡುಗೆಗಳನ್ನು ನೀಡಿದ್ದಾರೆ. ಈ ಪರಂಪರೆಯೇ ನಮ್ಮ ಬುನಾದಿಯಾಗಿದೆ.ಇಂತಹ ಮಹಾನ್ ಋಷಿ ಮುನಿಗಳು ತಮ್ಮ ಜೀವನವನ್ನು ಮನುಕುಲದ ಉದ್ದಾರಕ್ಕಾಗಿ ಮುಡುಪಾಗಿಟ್ಟಿದ್ದರು. ಅದರಲ್ಲಿ ಶ್ರೀ ಸವಿತಾ ಮಹರ್ಷಿಗಳು ಕೂಡ ಒಬ್ಬರು. ಅವರು ಕ್ಷೌರಿಕರಾಗಿ ಸೇವೆ ಸಲ್ಲಿಸಿ ನಂತರ ಬ್ರಹ್ಮ ವಿóಷ್ಣು ಮಹೇಶ್ವರರಿಂದ ಬಹುಮಾನವಾಗಿ ರೋಗ ನಿವಾರಣೆಗೊಳಿಸುವ ಧನ್ವಂತರಿ, ಸಂಗೀತ ಸಾಧನಗಳನ್ನು ವರವಾಗಿ ಪಡೆದು ಕ್ಷೌರಿಕ, ಸಂಗೀತ, ಆಯುರ್ವೇದ ಮೂರೂ ಸೇವೆಗಳನ್ನು ದೇವಲೋಕ ಮತ್ತು ಭೂಲೋಕದಲ್ಲಿ ಮಾಡುತ್ತಾ ಬರುತ್ತಾರೆ. ಮುಂದೆ ಅವರು ಸಾಮವೇದವನ್ನು ರಚಿಸುತ್ತಾರೆ. ಇವರ ಮಗಳು ಗಾಯತ್ರಿ ದೇವಿ ಗಾಯತ್ರಿ ಮಂತ್ರವನ್ನು ರಚಿಸುತ್ತಾರೆ. ಸೂರ್ಯನು ಸಮಭಾಜಕ ವೃತ್ತದಿಂದ ಉತ್ತರಾಭಿಮುಖವಾಗಿ ಹಾದು ಹೋಗುವ ರಥ ಸಪ್ತಮಿಯಂದು ಸೂರ್ಯನ ಇನ್ನೊಂದು ರೂಪವೆಂದೇ ಕರೆಯಲಾಗುವು ಶ್ರೀ ಸವಿತಾ ಮಹರ್ಷಿರವರ ಜಯಂತಿಯನ್ನು ಆಚರಿಸಲಾಗುತದೆ ಎಂದು ತಿಳಿಸಿದರು. ಜಿಲ್ಲಾ ಸವಿತಾ ಸಮಾಜದ ಅಧ್ಯಕ್ಷರಾದ ಎಂ.ಜಿ ಬಾಲು ಮಾತನಾಡಿ, ಸವಿತಾ ಸಮಾಜ ಸಂಘಟಿತವಾಗಬೇಕು. ಸಮಾಜದ ಏಳ್ಗೆಗಾಗಿ ಎಲ್ಲರೂ ಒಗ್ಗೂಡಬೇಕೆಂದು ಆಶಿಸಿದ ಅವರು ಸವಿತಾ ಸಮಾಜದವರೇ ಆದ ಬಿಹಾರದ ಮಾಜಿ ಮುಖ್ಯಮಂತ್ರಿಗಳಾದ ದಿ|| ಕರ್ಪೂರಿ ಠಾಕೂರ್‍ರವರ ಸೇವೆಗಾಗಿ ಭಾರತ ಸರ್ಕಾರ ದೇಶದ ಅತ್ಯುನ್ನತ ಪ್ರಶಸ್ತಿಯಾದ ಭಾರತ ರತ್ನವನ್ನು ನೀಡಿ ಗೌರವಿಸಿರುವುದು ನಮ್ಮೆಲ್ಲರಿಗೆ ಹೆಮ್ಮೆಯ ವಿಷಯ. ಈ ಸಂದರ್ಭದಲ್ಲಿ ಅವರನ್ನು ಅಭಿನಂದಿಸೋಣ ಎಂದರು.  ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕ ಉಮೇಶ್ ಹೆಚ್ ಸ್ವಾಗತಿಸಿದರು. ಶಿವಮೊಗ್ಗ ತಾಲ್ಲೂಕು ಸವಿತಾ ಸಮಾಜದ ಅಧ್ಯಕ್ಷರಾದ ಬಿ.ಎನ್.ಧರ್ಮರಾಜ್ ವಂದಿಸಿದರು. ಸಮಾಜದ ಮುಖಂಡರು, ಮಹಿಳೆಯರು ಪಾಲ್ಗೊಂಡಿದ್ದರು.